samachara
www.samachara.com
‘ಪನಾಮ’ದಿಂದ ಪಾರಾದ ನವಾಜ್‌ ಷರೀಫ್‌:  ಜೈಲು ಶಿಕ್ಷೆ ರದ್ದುಗೊಳಿಸಿದ ನ್ಯಾಯಾಲಯ
ಸುದ್ದಿ ಸಾರ

‘ಪನಾಮ’ದಿಂದ ಪಾರಾದ ನವಾಜ್‌ ಷರೀಫ್‌: ಜೈಲು ಶಿಕ್ಷೆ ರದ್ದುಗೊಳಿಸಿದ ನ್ಯಾಯಾಲಯ

ಜುಲೈ 6 ರಂದು ಷರೀಫ್‌ ಕುಟುಂಬಸ್ಥರಿಗೆ ‘ಅವನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣ’ದಲ್ಲಿ ಜೈಲು ಶಿಕ್ಷೆ ನೀಡಿ ಪಾಕಿಸ್ತಾನದ ವಿಶೇಷ ಉತ್ತರದಾಯಿತ್ವ ನ್ಯಾಯಾಲಯ ತೀರ್ಪು ನೀಡಿತ್ತು. 

Team Samachara

ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಅವರ ಪುತ್ರಿ ಮರ್ಯಮ್‌ ನವಾಜ್‌ ಮತ್ತು ಅಳಿಯ ಮೊಹಮ್ಮದ್‌ ಸಫ್ದರ್‌ ಜೈಲು ಶಿಕ್ಷೆಯನ್ನು ಇಸ್ಲಮಾಬಾದ್‌ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ.

ಜುಲೈ 6 ರಂದು ಷರೀಫ್‌ ಕುಟುಂಬಸ್ಥರಿಗೆ ‘ಅವನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣ’ದಲ್ಲಿ ಜೈಲು ಶಿಕ್ಷೆ ನೀಡಿ ಪಾಕಿಸ್ತಾನದ ವಿಶೇಷ ಉತ್ತರದಾಯಿತ್ವ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಷರೀಫ್‌ ಕುಟುಂಬಸ್ಥರು ಇಸ್ಲಮಾಬಾದ್‌ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅಂತಿಮ ತೀರ್ಪು ಹೊರ ಬರುವವರೆಗೆ ಜೈಲು ಶಿಕ್ಷೆಯನ್ನು ರದ್ದುಗೊಳಿಸಿ ಆದೇಶ ನೀಡಿದೆ. ಆದರೆ ವಿಚಾರಣೆಗೆ ಇನ್ನೂ ನ್ಯಾಯಾಲಯ ದಿನ ನಿಗದಿಗೊಳಿಸಿಲ್ಲ.

ಮೂವರಿಗೂ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ 5 ಲಕ್ಷ ರೂಪಾಯಿ (ಪಾಕಿಸ್ತಾನಿ) ಭದ್ರತಾ ಠೇವಣಿ ಇಡುವಂತೆ ಸೂಚಿಸಿದೆ. ಈ ತೀರ್ಪು ಹೊರ ಬೀಳುತ್ತಿದ್ದಂತೆ ಕೋರ್ಟ್‌ ಆವರಣದಲ್ಲಿ ನೆರೆದಿದ್ದ ಷರೀಫ್‌ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದ್ದಾರೆ.

ಜುಲೈ 6ರಂದು ಪಾಕಿಸ್ತಾನದ ಉತ್ತರದಾಯಿತ್ವ ನ್ಯಾಯಾಲಯ ‘ರಾಷ್ಟ್ರೀಯ ಉತ್ತರದಾಯಿತ್ವ ದಳ’ ಸಲ್ಲಿಸಿದ್ದ ದೂರಿನ ಪ್ರಕರಣದಲ್ಲಿ ನವಾಜ್‌ ಷರೀಫ್‌ ಅವರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ತನಿಖೆಗೆ ಸಹಕರಿಸದ್ದಕ್ಕೆ ಒಂದು ವರ್ಷ ಹೆಚ್ಚುವರಿ ಸೆರೆಮನೆ ವಾಸದ ಶಿಕ್ಷೆ ವಿಧಿಸಿತ್ತು. ಪುತ್ರಿ ಮರ್ಯಮ್‌ಗೆ 7+1 ವರ್ಷ ಮತ್ತು ಅಳಿಯನನ್ನು ಒಂದು ವರ್ಷಗಳ ಕಾಲ ಜೈಲಿಗೆ ತಳ್ಳುವಂತೆ ಆದೇಶಿಸಿತ್ತು. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಈ ಶಿಕ್ಷೆ ವಿಧಿಸಿತ್ತು.

ಇದೀಗ ಅವರ ತೀರ್ಪಿಗೆ ಇಸ್ಲಮಾಬಾದ್‌ ನ್ಯಾಯಾಲಯ ತಡೆ ನೀಡಿರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಪ್ರಕ್ರಿಯೆಗಳು ಮುಗಿದ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ‘ಡಾನ್‌’ ವರದಿ ಮಾಡಿದೆ. ಆದರೆ ಇಂದೇ ಬಿಡುಗಡೆಯಾಗಲಿದ್ದಾರಾ ಅಥವಾ ಕೆಲವು ದಿನಗಳಲ್ಲಿಯೋ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಪತ್ರಿಕೆ ಹೇಳಿದೆ.