ಇನ್ಫೋಸಿಸ್ ಮಾಜಿ ಸಿಎಫ್‌ಒಗೆ ಬಡ್ಡಿ ಸಮೇತ ಬಂದ ಪರಿಹಾರ ಬಾಕಿ; ಮೊತ್ತ 12.17 ಕೋಟಿ!
ಸುದ್ದಿ ಸಾರ

ಇನ್ಫೋಸಿಸ್ ಮಾಜಿ ಸಿಎಫ್‌ಒಗೆ ಬಡ್ಡಿ ಸಮೇತ ಬಂದ ಪರಿಹಾರ ಬಾಕಿ; ಮೊತ್ತ 12.17 ಕೋಟಿ!

ವೇತನ ಪರಿಹಾರದ ಬಾಕಿ ಹಣ ಕೊಡಲು ಹಿಂದೇಟು ಹಾಕಿದ ಇನ್ಫೋಸಿಸ್‌ನ ಕ್ರಮವನ್ನು ಪ್ರಶ್ನಿಸಿ ಬನ್ಸಾಲ್‌ ಕಳೆದ ವರ್ಷ ವ್ಯಾಜ್ಯ ಒಪ್ಪಂದ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು.

ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ರಾಜೀವ್‌ ಬನ್ಸಾಲ್‌ ಅವರಿಗೆ ನೀಡಬೇಕಿದ್ದ ಬಾಕಿ ಹಣ 12.17 ಕೋಟಿ ರೂಪಾಯಿಯನ್ನು ಬಡ್ಡಿ ಸಮೇತ ನೀಡುವಂತೆ ವ್ಯಾಜ್ಯ ಒಪ್ಪಂದ ನ್ಯಾಯಾಧಿಕರಣ ಆದೇಶಿಸಿದೆ. ನ್ಯಾಯಾಧಿಕರಣದ ಈ ಆದೇಶದ ಬೆನ್ನಲ್ಲೇ ಮಂಗಳವಾರ ಇನ್ಫೋಸಿಸ್‌ನ ಷೇರು ಸೂಚ್ಯಂಕ ಶೇಕಡ 1ರಷ್ಟು ಕುಸಿತ ಕಂಡಿದೆ.

2015ರಲ್ಲಿ ಬನ್ಸಾಲ್‌ ಇನ್ಫೋಸಿಸ್‌ ತೊರೆದಿದ್ದರು. ಆ ವೇಳೆ 24 ತಿಂಗಳ ವೇತನ ಪರಿಹಾರವಾಗಿ 17.38 ಕೋಟಿ ರೂಪಾಯಿ ನೀಡುವುದಾಗಿ ಇನ್ಫೋಸಿಸ್‌ ಒಪ್ಪಿತ್ತು. ಈ ಪೈಕಿ 5.2 ಕೋಟಿ ರೂಪಾಯಿಯನ್ನು ಬನ್ಸಾಲ್‌ ಅವರಿಗೆ ನೀಡಿದ್ದ ಕಂಪನಿಯು ಉಳಿದ ಹಣ ನೀಡಲು ಹಿಂದೇಟು ಹಾಕಿತ್ತು.

ಉಳಿದ 12.17 ಕೋಟಿ ರೂಪಾಯಿಯನ್ನು ವೇತನ ಪರಿಹಾರವಾಗಿ ನೀಡುವುದು ಕಂಪನಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಆ ಹಣಕ್ಕೆ ತಡೆ ಒಡ್ಡಲಾಗಿತ್ತು. ಇಷ್ಟು ದೊಡ್ಡ ಮೊತ್ತವನ್ನು ವೇತನ ಪರಿಹಾರವಾಗಿ ಕೊಡಲು ಸಾಧ್ಯವಿಲ್ಲ ಎಂದು ಕಂಪನಿಯ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಹೇಳಿದ್ದರು.

ವೇತನ ಪರಿಹಾರದ ಬಾಕಿ ಹಣ ಕೊಡಲು ಹಿಂದೇಟು ಹಾಕಿದ ಇನ್ಫೋಸಿಸ್‌ನ ಕ್ರಮವನ್ನು ಪ್ರಶ್ನಿಸಿ ಬನ್ಸಾಲ್‌ ಕಳೆದ ವರ್ಷ ವ್ಯಾಜ್ಯ ಒಪ್ಪಂದ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ತನ್ನ ವಾದ ಮಂಡಿಸಿದ್ದ ಇನ್ಫೋಸಿಸ್‌, “ಬನ್ಸಾಲ್‌ ನಡೆಯಿಂದ ಕಂಪನಿಗೆ ಹಾನಿಯಾಗಿದ್ದು, ವೇತನ ಪರಿಹಾರವಾಗಿ ಅವರಿಗೆ ಈ ಮೊದಲು ನೀಡಿರುವ 5.2 ಕೋಟಿ ರೂಪಾಯಿಯನ್ನು ವಾಪಸ್‌ ಕೊಡಿಸಬೇಕು” ಎಂದು ಹೇಳಿತ್ತು.

ಇನ್ಫೋಸಿಸ್‌ನ ಈ ವಾದವನ್ನು ತಳ್ಳಿಹಾಕಿರುವ ನ್ಯಾಯಾಧಿಕರಣ ಕಂಪನಿಯು ಬಾಕಿ ಉಳಿಸಿಕೊಂಡಿರುವ ಹಣವನ್ನು ಬಡ್ಡಿ ಸಮೇತ ಬನ್ಸಾಲ್‌ ಅವರಿಗೆ ನೀಡುವಂತೆ ಮಂಗಳವಾರ ಆದೇಶಿಸಿದೆ.