samachara
www.samachara.com
ಭೀಮ-ಕೋರೆಗಾಂವ್‌ ಹಿಂಸಾಚಾರ: ಆರೋಪಿಗಳ ಗೃಹ ಬಂಧನ ಮೂರನೇ ಬಾರಿ ವಿಸ್ತರಣೆ
ಸುದ್ದಿ ಸಾರ

ಭೀಮ-ಕೋರೆಗಾಂವ್‌ ಹಿಂಸಾಚಾರ: ಆರೋಪಿಗಳ ಗೃಹ ಬಂಧನ ಮೂರನೇ ಬಾರಿ ವಿಸ್ತರಣೆ

ಇಂದಿನ ವಿಚಾರಣೆಯ ನಂತರ ಸೆಪ್ಟೆಂಬರ್‌ 19ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಲ್ಲಿಯವರೆಗೆ ಗೃಹ ಬಂಧನವನ್ನೂ ವಿಸ್ತರಣೆ ಮಾಡಲಾಗಿದೆ.

ಭೀಮ-ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾದ ಐವರು ಸಾಮಾಜಿಕ ಹೋರಾಟಗಾರರ ಗೃಹ ಬಂಧನದ ಅವಧಿಯನ್ನು ಸುಪ್ರೀಂ ಕೋರ್ಟ್‌ ಮೂರನೇ ಬಾರಿ ವಿಸ್ತರಣೆ ಮಾಡಿದೆ. ಇಂದಿನ ವಿಚಾರಣೆಯ ನಂತರ ಸೆಪ್ಟೆಂಬರ್‌ 19ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಲ್ಲಿಯವರೆಗೆ ಗೃಹ ಬಂಧನವನ್ನೂ ವಿಸ್ತರಣೆ ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ. ಎಂ. ಖನ್ವಿಲ್ಕರ್‌ ಮತ್ತು ನ್ಯಾ. ಡಿ. ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಜತೆಗೆ ಒಂದೊಮ್ಮೆ ಇಂದಿನವರೆಗೆ ಬಂಧಿತರಾಗಿರುವ 10 ಜನರ ಮೇಲಿನ ತನಿಖೆಯಲ್ಲಿ ಗಂಬೀರ ತಪ್ಪುಗಳು ಕಂಡು ಬಂದಲ್ಲಿ ಎಸ್‌ಐಟಿ ತನಿಖೆಗೂ ಚಿಂತನೆ ನಡೆಸುವುದಾಗಿ ನ್ಯಾಯಪೀಠ ಹೇಳಿದೆ.

ಮಹಾರಾಷ್ಟ್ರ ಪೊಲೀಸರು ತನಿಖೆ ವೇಳೆ ಸಂಗ್ರಹಿಸಿದ ವಸ್ತುಗಳನ್ನು ಮುಂದಿನ ವಿಚಾರಣೆ ವೇಳೆ ಪರಿಶೀಲನೆಗೆ ಒಳಪಡಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು, ಈ ದಾಖಲೆಗಳನ್ನು ಬುಧವಾರ ವಿಚಾರಣೆ ವೇಳೆ ಹಾಜರುಪಡಿಸುವಂತೆ ಕೋರ್ಟ್‌ ಸೂಚಿಸಿದೆ. ಸಾಮಾಜಿಕ ಕಾರ್ಯಕರ್ತರ ಬಂಧನ ಪ್ರಶ್ನಿಸಿ ಖ್ಯಾತ ಇತಿಹಾಸಗಾರ್ತಿ ರೊಮಿಲಾ ಥಾಪರ್‌, ಮಾನವ ಹಕ್ಕು ಹೋರಾಟಗಾರರಾದ ದೇವಕಿ ಜೈನ್‌, ಪ್ರಭಾತ್‌ ಪಟ್ನಾಯಕ್‌, ಸತೀಶ್‌ ದೇಶಪಾಂಡೆ ಮತ್ತು ಮಾಯಾ ಧಾರುವಾಲ ಅವರುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ “ಎಲ್ಲಾ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ಆರೋಪಗಳ ಮೇಲೆ ನಿಂತಿರುತ್ತದೆ. ಆದರೆ ಇದರಲ್ಲಿ ನಿಜವಾಗಿಯೂ ಯಾವುದಾದರೂ ವಿಷಯಗಳಿವೆಯೋ ಎಂಬುದನ್ನು ನೋಡಬೇಕಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಮಹಾರಾಷ್ಟ್ರ ಸರಕಾರ ಎರಡು ಎಫ್‌ಐಆರ್‌ಗಳಲ್ಲಿ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಭಿನ್ನ ನಿಲುವುಗಳನ್ನು ತಳೆದಿದೆ ಎಂದು ವಾದಿಸಿದರು. “ಒಂದು ಹಂತದಲ್ಲಿ ಹಿಂದುತ್ವ ಮತ್ತು ಮೇಲ್ವರ್ಗದ ಜನರೇ ಇದಕ್ಕೆ ಕಾರಣ” ಎಂದಿದ್ದರು. ಆದರೆ ನಂತರ ಪ್ರಕರಣವನ್ನು ವಿಸ್ತರಿಸಿ ಈ ಸಮಾಜಿಕ ಕಾರ್ಯಕರ್ತರನ್ನು ಬಲೆಯೊಳಕ್ಕೆ ಎಳೆದು ತಂದರು ಎಂದು ಅವರು ವಾದಿಸಿದರು. ಆದರೆ ಇದೇನೂ ಹೊಸತಲ್ಲ ಎಂದು ನ್ಯಾ. ಮಿಶ್ರಾ ಹೇಳಿದರು.

ಈ ಸಂದರ್ಭದಲ್ಲಿ ವಾದಿಸಿದ ಸಿಂಘ್ವಿ, ಪೊಲೀಸರು ಬೇಕೆಂದೇ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲು ಮಾವೋವಾದಿಗಳಿಗೆ ಸಾಮಾಜಿಕ ಕಾರ್ಯಕರ್ತರು ಪತ್ರ ಬರೆದಿದ್ದಾರೆ ಎಂಬುದನ್ನು ಸೃಷ್ಟಿಸಿದ್ದಾರೆ ಎಂದು ವಾದ ಮಂಡಿಸಿದರು. ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರಥಮ ವರ್ತಮಾನ ವರದಿಗಳನ್ನು ದಾಖಲಿಸಿಲ್ಲ. ಒಂದೊಮ್ಮೆ ಈ ರೀತಿಯ ಗಂಭೀರ ಪ್ರಕರಣಗಳು ಇದ್ದಾಗಲೂ ಎಫ್ಐಆರ್‌ ಏಕೆ ದಾಖಲಿಸಿಲ್ಲ ಎಂದೂ ಅವರು ಪ್ರಶ್ನಿಸಿದರು.

ಕೊನೆಗೆ ಸಾಕ್ಷ್ಯಗಳನ್ನು ಆಧರಿಸಿ ವಿಚಾರಣೆ ನಡೆಯಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಮುಂದಿನ ವಿಚಾರಣೆ ಒಳಗೆ ಸಾಕ್ಷ್ಯಗಳನ್ನು ಹಾಜರು ಪಡಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಲಾಯಿತು.

ಮಹಾರಾಷ್ಟ್ರದ ಪುಣೆ ಪೊಲೀಸರು ಐವರು ಸಾಮಾಜಿಕ ಕಾರ್ಯಕರ್ತರಾದ ವರವರ ರಾವ್‌, ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರಧ್ವಜ್‌ ಮತ್ತು ಗೌತಮ್‌ ನವ್ಲೇಖ ಅವರನ್ನು ಆಗಸ್ಟ್‌ 28 ರಂದು ಬಂಧಿಸಿದ್ದರು. 2017ರ ಡಿಸೆಂಬರ್‌ 31ರಂದು ಎಲ್ಗಾರ್‌ ಪರಿಷತ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದು ಮುಂದೆ ಭೀಮ-ಕೋರೆಗಾಂವ್‌ ಗ್ರಾಮದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ಐವರನ್ನು ಬಂಧಿಸಲಾಗಿತ್ತು. ದೇಶದಾದ್ಯಂತ ಈ ಘಟನೆ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡಿತ್ತು.

ಇದಾದ ಬೆನ್ನಿಗೆ ರೊಮಿಲಾ ಥಾಪರ್ ಮತ್ತು ಇತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್‌ 29ರಂದು ಐವರಿಗೂ ಐದು ದಿನಗಳ ಕಾಲ ಸುಪ್ರೀಂ ಕೋರ್ಟ್‌ ಗೃಹ ಬಂಧನ ವಿಧಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 6ಕ್ಕೆ ಮುಂದೂಡಿತ್ತು. ಇದಾದ ಬಳಿಕ ಸೆಪ್ಟೆಂಬರ್‌ 6ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಬಂಧನವನ್ನು ಸೆಪ್ಟೆಂಬರ್‌ 12ರ ವರೆಗೆ ಮುಂದೂಡಿತ್ತು. ನಂತರ ಎರಡನೇ ಬಾರಿಗೆ ಬಂಧನವನ್ನು ಸೆಪ್ಟೆಂಬರ್‌ 17ರವರೆಗೆ ಮುಂದೂಡಲಾಗಿತ್ತು. ಇದಾದ ಬಳಿಕ ಇಂದು ಮೂರನೇ ಬಾರಿಗೆ ಬಂಧನವನ್ನು ಸೆಪ್ಟೆಂಬರ್‌ 19ರ ವರೆಗೆ ಮುಂದೂಡಲಾಗಿದೆ.