ವಿಲೀನಗೊಳ್ಳಲಿವೆ ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ
ಸುದ್ದಿ ಸಾರ

ವಿಲೀನಗೊಳ್ಳಲಿವೆ ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ

ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.

ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಮತ್ತು ಬ್ಯಾಂಕ್ ಆಫ್‌ ಬರೋಡಾಗಳನ್ನು ವಿಲೀನಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೋಮವಾರ ಈ ನಿರ್ಣಯ ಪ್ರಕಟಿಸಿದ್ದಾರೆ.

“ಬ್ಯಾಂಕ್‌ಗಳ ವಿಲೀನದ ಬಗ್ಗೆ ಬಜೆಟ್‌ನಲ್ಲೇ ಘೋಷಣೆ ಮಾಡಲಾಗಿತ್ತು. ಈ ಮೂರು ಬ್ಯಾಂಕ್‌ಗಳ ವಿಲೀನ ಆ ಘೋಷಣೆ ಜಾರಿಯ ಮೊದಲ ಹೆಜ್ಜೆ” ಎಂದು ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

“ಬ್ಯಾಂಕ್‌ಗಳ ವಿಲೀನದಿಂದ ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆಯಾಗದು. ಸಿಬ್ಬಂದಿಯ ಸೇವಾ ನಿಯಮಗಳಲ್ಲಿ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಸಿಬ್ಬಂದಿಗೆ ಉತ್ತಮವಾದ ಸೇವಾ ನಿಯಮಗಳೇ ಅನ್ವಯವಾಗಲಿವೆ” ಎಂದು ಜೇಟ್ಲಿ ಹೇಳಿದ್ದಾರೆ.

“ಈ ಮೂರು ಬ್ಯಾಂಕ್‌ಗಳನ್ನು ವಿಲೀನಗೊಳಿಸಿದರೆ, ಇದು ದೇಶದ ಮೂರನೇ ಅತಿದೊಡ್ಡ ಬ್ಯಾಂಕ್‌ ಆಗಲಿದೆ. ಈ ಬ್ಯಾಂಕ್‌ಗಳ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ಹೆಚ್ಚಿನ ಗ್ರಾಹಕರನ್ನು ತಲುಪುವುದು ಈ ವಿಲೀನದ ಹಿಂದಿನ ಉದ್ದೇಶ” ಎಂದು ಹಣಕಾಸು ಕಾರ್ಯದರ್ಶಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

“ವಿಲೀನದ ಬಳಿಕವೂ ಈ ಮೂರೂ ಬ್ಯಾಂಕ್‌ಗಳು ಸ್ವತಂತ್ರವಾಗಿಯೇ ಕಾರ್ಯನಿರ್ವಹಿಸಲಿವೆ. ವಿಲೀನ ವಿಚಾರವಾಗಿ ಬ್ಯಾಂಕ್‌ ಸಿಬ್ಬಂದಿ ಹಾಗೂ ಗ್ರಾಹಕರು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.