2018ರಲ್ಲಿ ಒಂದು ಕೋಟಿ ಜನರ ಬಲಿ ಪಡೆಯಲಿದೆ ಕ್ಯಾನ್ಸರ್: ವಿಶ್ವ ಆರೋಗ್ಯ ಸಂಸ್ಥೆ
ಸುದ್ದಿ ಸಾರ

2018ರಲ್ಲಿ ಒಂದು ಕೋಟಿ ಜನರ ಬಲಿ ಪಡೆಯಲಿದೆ ಕ್ಯಾನ್ಸರ್: ವಿಶ್ವ ಆರೋಗ್ಯ ಸಂಸ್ಥೆ

ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್‌ ಉಲ್ಬಣಗೊಳ್ಳುತ್ತಿದ್ದು, ಈ ವರ್ಷ ಒಂದು ಕೋಟಿ ಜನ ಕ್ಯಾನ್ಸರ್‌ನಿಂದ ಸಾವನ್ನಪ್ಪಲಿದ್ದಾರೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

“ಸುಮಾರು ಒಂದು ಕೋಟಿ ಜನ ಈ ವರ್ಷ ಕ್ಯಾನ್ಸರ್‌ನಿಂದ ಸಾಯಲಿದ್ದಾರೆ. ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಪೈಕಿ ಅರ್ಧದಷ್ಟು ಜನ ಏಷ್ಯಾ ಖಂಡದವರು” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರಿಸರ್ಚ್‌ ಆನ್‌ ಕ್ಯಾನ್ಸರ್‌ (ಐಎಆರ್‌ಸಿ) ಸಮೀಕ್ಷಾ ವರದಿ ಹೇಳಿದೆ.

ಜಗತ್ತಿನ 185 ರಾಷ್ಟ್ರಗಳ ಸಮೀಕ್ಷೆ ನಡೆಸಿರುವ ಐಎಆರ್‌ಸಿ, ಈ ವರ್ಷ 1.8 ಕೋಟಿಯಷ್ಟು ಜನರು ಹೊಸದಾಗಿ ಕ್ಯಾನ್ಸರ್‌ ಚಿಕಿತ್ಸೆಗೆ ಮುಂದಾಗಲಿದ್ದು, 96 ಲಕ್ಷ ಜನರು ಕ್ಯಾನ್ಸರ್‌ನಿಂದ ಸಾಯುವ ಸಾಧ್ಯತೆ ಇದೆ. ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಜಾಗತಿಕವಾಗಿ ಹೆಚ್ಚುತ್ತಿದೆ ಎಂದ ಹೇಳಿದೆ.

ಕ್ಯಾನ್ಸರ್‌ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆರು ವರ್ಷಗಳ ಹಿಂದೆ 14.1 ಮಿಲಿಯನ್‌ ಜನರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಗ ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆ ಸುಮಾರು 82 ಲಕ್ಷದಷ್ಟಿತ್ತು. ಆದರೆ, ಜಾಗತಿಕವಾಗಿ ಜನಸಂಖ್ಯೆ ಹೆಚ್ಚಳದ ಜತೆಗೆ ಕ್ಯಾನ್ಸರ್‌ ರೋಗಿಗಳೂ ಹೆಚ್ಚುತ್ತಿದ್ದಾರೆ. ಎಂಟು ಜನ ಪುರುಷರಲ್ಲಿ ಒಬ್ಬರು ಹಾಗೂ ಹನ್ನೊಂದು ಮಹಿಳೆಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಶ್ವಾಸಕೋಶದ ಕ್ಯಾನ್ಸರ್‌ಗೆ ಈ ವರ್ಷ 21 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಇವರ ಪೈಕಿ 18 ಲಕ್ಷ ಜನರ ಸಾವನ್ನಪ್ಪಿದ್ದಾರೆ. ಪುರುಷರಂತೆ ಮಹಿಳೆಯರಲ್ಲೂ ಕೂಡಾ ಶ್ವಾಸಕೋಶದ ಕ್ಯಾನ್ಸರ್‌ ಹೆಚ್ಚುತ್ತಿದೆ. 13 ಲಕ್ಷ ಪುರುಷರು ಹಾಗೂ ಸುಮಾರು 8 ಲಕ್ಷ ಮಹಿಳೆಯರು ಈ ವರ್ಷ ಶ್ವಾಸಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಸಾರ್ವಜನಿಕವಾಗಿ ಧೂಮಪಾನ ನಿಷೇಧಿಸಿರುವ ರಾಷ್ಟ್ರಗಳಲ್ಲಿ ಕೂಡಾ ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ಶ್ವಾಸಕೋಶದ ಕ್ಯಾನ್ಸರ್‌ ಕಾಣಿಸಿಕೊಂಡಿದೆ ಎನ್ನುತ್ತದೆ ವರದಿ.

ಶ್ವಾಸಕೋಶದ ಕ್ಯಾನ್ಸರ್‌ ಬಿಟ್ಟರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸ್ತನ, ಕರುಳು, ವೃಷಣ ಹಾಗೂ ಜಠರದ ಕ್ಯಾನ್ಸರ್‌. ಸ್ತನ ಕ್ಯಾನ್ಸರ್‌ಗಾಗಿ ಈ ವರ್ಷ ಸುಮಾರು 21 ಲಕ್ಷ ಮಂದಿ ಚಿಕಿತ್ಸೆ ಪಡೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಗರ್ಭಕೋಶದ ಕ್ಯಾನ್ಸರ್‌ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ.

“ಹೊಸದಾಗಿ ಕ್ಯಾನ್ಸರ್‌ ರೋಗ ಕಾಣಿಸಿಕೊಳ್ಳುವವರ ಪೈಕಿ ಶೇಕಡ 40ರಷ್ಟು ಜನರಿಗೆ ಕ್ಯಾನ್ಸರ್‌ ಉಲ್ಬಣಗೊಳ್ಳದಂತೆ ತಡೆಯಲು ಅವಕಾಶವಿದೆ. ಇಂಥವರಲ್ಲಿ ಜೀವನ ಶೈಲಿ ಸುಧಾರಣೆ, ಧೂಮಪಾನ ಮತ್ತು ಮದ್ಯಪಾನದಿಂದ ದೂರ ಇರುವುದು ರೋಗ ಹೆಚ್ಚದಂತೆ ತಡೆಯಬಲ್ಲದು” ಎಂದು ವರದಿ ಹೇಳಿದೆ.