ದಾಬೋಲ್ಕರ್‌, ಕಲಬುರ್ಗಿ, ಗೌರಿ ಕೊಂದ ಗುಂಪಿಗೆ ಸನಾತನ ಸಂಸ್ಥೆ ಜತೆಗಿನ ನಂಟು ಖಚಿತ
ಸುದ್ದಿ ಸಾರ

ದಾಬೋಲ್ಕರ್‌, ಕಲಬುರ್ಗಿ, ಗೌರಿ ಕೊಂದ ಗುಂಪಿಗೆ ಸನಾತನ ಸಂಸ್ಥೆ ಜತೆಗಿನ ನಂಟು ಖಚಿತ

ವಿಚಾರವಾದಿಗಳ ಹತ್ಯೆಗೂ ಸನಾತನ ಸಂಸ್ಥೆಗೂ ನಂಟಿರುವುದನ್ನು ಮಹಾರಾಷ್ಟ್ರ ಪೊಲೀಸರು ಖಚಿತ ಪಡಿಸಿದ್ದಾರೆ.

ನರೇಂದ್ರ ದಾಬೋಲ್ಕರ್‌, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವರ ಹತ್ಯೆಯ ಹಿಂದೆ ಒಂದೇ ಗುಂಪು ಕೆಲಸ ಮಾಡಿದ್ದು, ಈ ಗುಂಪಿನ ಸದಸ್ಯರಿಗೂ ಸನಾತನ ಸಂಸ್ಥೆಗೂ ನಂಟಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹತ್ಯೆ ಮಾಡಿರುವುದು ಒಂದೇ ಗುಂಪಿಗೆ ಸೇರಿದವರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಗುಂಪಿನ ಬಹುತೇಕ ಎಲ್ಲಾ ಸದಸ್ಯರೂ ಸನಾತನ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿ ಜತೆಗೆ ನಂಟು ಹೊಂದಿರುವುದು ಖಚಿತವಾಗಿದೆ” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

“ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹಿಂದು ಧರ್ಮದ ವಿರುದ್ಧವಾಗಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಈ ಗುಂಪಿನ ಸದಸ್ಯರು ಹತ್ಯೆ ಮಾಡಿದ್ದಾರೆ. ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿರುವ ಆರೋಪಿಗಳಿಗೂ ಈ ಹತ್ಯೆಗಳಿಗೂ ನಂಟಿರುವುದು ಗೊತ್ತಾಗಿದೆ” ಎಂದು ತನಿಖಾಧಿಕಾರಿ ಹೇಳಿದ್ದಾರೆ.

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!

ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ನಾಲಾಸೊಪಾರ ಪ್ರದೇಶದ ಮನೆಯಲ್ಲಿ ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ ‘ಹಿಂದೂ ಗೋವಂಶ ರಕ್ಷಾ ಸಮಿತಿ’ ಸದಸ್ಯ ವೈಭವ್ ರಾವತ್ ಹಾಗೂ ಇತರರನ್ನು ಎಟಿಎಸ್ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು. ಈ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಆದರೆ, ಸನಾತನ ಸಂಸ್ಥೆಯು ಬಂಧಿತರಿಗೂ ತಮಗೂ ಸಂಬಂಧವಿಲ್ಲ ಎಂದು ಹೇಳಿತ್ತು.

ದಾಬೋಲ್ಕರ್‌, ಕಲಬುರ್ಗಿ ಮತ್ತು ಗೌರಿ ಹತ್ಯೆಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಈ ಹತ್ಯೆಗಳ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿರುವುದನ್ನು ಖಚಿತ ಪಡಿಸಿದ್ದಾರೆ. ಆದರೆ, ಗೋವಿಂದ ಪಾನ್ಸಾರೆ ಹತ್ಯೆ ಪ್ರಕರಣದಲ್ಲಿ ಈವರೆಗೂ ಸರಿಯಾದ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಾನ್ಸಾರೆ ಹತ್ಯೆಯಲ್ಲಿ ಹಿಂದುತ್ವ ಸಂಘಟನೆಗಳ ಪಾತ್ರ ಇದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಿರುವ ಪೊಲೀಸರಿಗೆ ಆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಪಾನ್ಸಾರೆ ಅವರನ್ನು ಯಾರು ಕೊಂದರು, ಯಾಕೆ ಕೊಂದರು ಎಂಬ ಪ್ರಶ್ನೆ ಮುಂದುವರಿದಿದೆ.