ಕೆಪಿಎಂಇ ಕಾಯ್ದೆ ಅನುಷ್ಠಾನಕ್ಕಾಗಿ ಕರ್ನಾಟಕ ಜನಾರೋಗ್ಯ ಚಳವಳಿ ಹಕ್ಕೊತ್ತಾಯ
ಸುದ್ದಿ ಸಾರ

ಕೆಪಿಎಂಇ ಕಾಯ್ದೆ ಅನುಷ್ಠಾನಕ್ಕಾಗಿ ಕರ್ನಾಟಕ ಜನಾರೋಗ್ಯ ಚಳವಳಿ ಹಕ್ಕೊತ್ತಾಯ

ಕೆಪಿಎಂಇ ಕಾಯ್ದೆ ಜಾರಿಗೆ ಬಂದು 9 ತಿಂಗಳು ಕಳೆದರೂ ಕಾಯ್ದೆಯ ಅನುಷ್ಠಾನ ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಮಸ್ಯೆಗಳು ಮುಂದುವರಿದಿವೆ ಎಂದು ಜನಾರೋಗ್ಯ ಚಳವಳಿ ಸದಸ್ಯರು ದೂರಿದ್ದಾರೆ.

ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯ್ದೆಯನ್ನು (ಕೆಪಿಎಂಇ ಕಾಯ್ದೆ) ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕರ್ನಾಟಕ ಜನಾರೋಗ್ಯ ಚಳವಳಿ ನೇತೃತ್ವದಲ್ಲಿ ರೋಗಿಗಳ ಕುಟುಂಬದವರು ಹಾಗೂ ವಿವಿಧ ನಾಗರಿಕ ಸಂಘಟನೆಗಳ ಸದಸ್ಯರು ಆರೋಗ್ಯ ಇಲಾಖೆಯ ಆಯುಕ್ತರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

“ಹಲವು ತಿದ್ದುಪಡಿಗಳೊಂದಿಗೆ ಕೆಪಿಎಂಇ ಕಾಯ್ದೆ ಜಾರಿಗೆ ಬಂದು 9 ತಿಂಗಳು ಕಳೆದರೂ ಕಾಯ್ದೆಯ ಅನುಷ್ಠಾನ ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಮಸ್ಯೆಗಳು ಮುಂದುವರಿದಿವೆ. ಹಲವು ರೋಗಿಗಳ ಕುಟುಂಬದವರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಈ ಅವ್ಯವಸ್ಥೆ ಸರಿಯಾಗಲು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು” ಎಂದು ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ.

ಕೆಪಿಎಂಇ ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಯ ಹಕ್ಕುಗಳ ಮಾಹಿತಿ ಫಲಕ ಹಾಕಬೇಕು. ಆಂತರಿಕ ದೂರು ನಿವಾರಣಾ ವ್ಯವಸ್ಥೆಯ ಮಾಹಿತಿ ಪ್ರಕಟಿಸಬೇಕು. ಆಸ್ಪತ್ರೆಯ ಯಾವ ಯಾವ ಸೇವೆಗೆ ಎಷ್ಟು ಶುಲ್ಕ ಎಂಬ ಪಟ್ಟಿಯನ್ನು ಬಹಿರಂಗ ಪ್ರಕಟಿಸಬೇಕು. ಆದರೆ, ಪ್ರಮುಖ ಅಂಶಗಳನ್ನೇ ಹಲವು ಆಸ್ಪತ್ರೆಗಳು ಪಾಲಿಸುತ್ತಿಲ್ಲ. ಎಷ್ಟು ಖಾಸಗಿ ಆಸ್ಪತ್ರೆಗಳು ಈ ನಿಯಮಗಳನ್ನು ಪಾಲಿಸುತ್ತಿವೆ ಎಂಬುದರ ಬಗ್ಗೆ ಆರೋಗ್ಯ ಇಲಾಖೆಗೇ ಮಾಹಿತಿಯೇ ಇಲ್ಲ ಎನ್ನುತ್ತಾರೆ ಜನಾರೋಗ್ಯ ಚಳವಳಿಯ ಸದಸ್ಯರು.

Also read: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ: ಖಾಸಗಿ ಲಾಬಿಯ ಮುಂದೆ ಮಂಡಿಯೂರಿದ ‘ಸದಾ ಸಿದ್ಧ ಸರ್ಕಾರ’  

ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ಜಿಲ್ಲಾ ಮಟ್ಟದ ದೂರು ನಿವಾರಣಾ ಪ್ರಾಧಿಕಾರಗಳು ಎಲ್ಲಿಯೂ ರಚನೆಯಾಗಿಲ್ಲ. ಈ ಸಮಿತಿಗಳಲ್ಲಿ ನಾಗರಿಕರ ಪರವಾದ ಒಬ್ಬ ಮಹಿಳಾ ಸದಸ್ಯೆ ಇರಬೇಕೆಂದು ನಿಯಮವಿದೆ. ಆದರೆ ನಾಗರಿಕ ಪರ ಸದಸ್ಯರ ಗೈರು ಹಾಜರಿಯಲ್ಲಿಯೇ ಹಳೆಯ ಪದ್ಧತಿಯಲ್ಲಿ ಸಮಿತಿಗಳು ಮುಂದುವರೆದಿವೆ. ಖಾಸಗಿ ಆಸ್ಪತ್ರೆಗಳ ನಿಯಮ ಉಲ್ಲಂಘನೆಗಳಿಗೆ ಎಲ್ಲಿ ದೂರು ಸಲ್ಲಿಸಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕಗಳು ಇಲ್ಲ ಎಂಬುದು ಜನಾರೋಗ್ಯ ಚಳವಳಿ ಸದಸ್ಯರ ದೂರು.

ಮನವಿ ಪತ್ರದಲ್ಲಿನ ಇತರೆ ಪ್ರಮುಖ ಅಂಶಗಳು:

  • ದೂರು ನಿವಾರಣಾ ಪ್ರಾಧಿಕಾರ ರಚಿಸುವ ತನಿಖಾ ತಂಡದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ತಜ್ಞರನ್ನು ಒಳಗೊಳ್ಳಬೇಕು. ತನಿಖಾ ತಂಡಗಳು ನಿಸ್ಪಕ್ಷಪಾತವಾಗಿ ಸಂತ್ರಸ್ತ ರೋಗಿಗಳಿಗೆ ನ್ಯಾಯ ಒದಗಿಸುವಂತೆ ತನಿಖೆ ನಡೆಸಬೇಕು.
  • ತನಿಖೆಯ ನಂತರ ತನಿಖೆಯ ವರದಿಯ ಪ್ರತಿಯನ್ನು ದೂರುದಾರರಿಗೆ ಅವರ ಹಕ್ಕಾಗಿ ನೀಡುವ ಬದಲು ಮಾಹಿತಿ ಹಕ್ಕು ಕಾಯ್ದೆಯ ಅಡಿ ಅರ್ಜಿ ಸಲ್ಲಿಸುವಂತೆ ಹೇಳಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಿದ ನಂತರವೂ ವರದಿ ನೀಡದೇ ಮೇಲ್ಮನವಿ ಕೋರಬೇಕಾದ ಪರಿಸ್ಥಿತಿ ಇದೆ. ಕೆಲವು ಪ್ರಕರಣಗಳಲ್ಲಿ ವರದಿಯ ಮುಖ್ಯ ಪುಟಗಳನ್ನು ಹೊರತು ಪಡಿಸಿ ಅಪೂರ್ಣ ವರದಿಗಳನ್ನು ನೀಡಲಾಗುತ್ತಿದೆ.
  • ರೋಗಿ ಪರವಾದ ವರದಿಗಳನ್ನು ಆಧರಿಸಿ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗುತ್ತಿಲ್ಲ. ಬದಲಿಗೆ ಅಧಿಕಾರಿಗಳು ಕುಂಟು ನೆಪಗಳನೊಡ್ಡಿ ಕಡತಗಳನ್ನು ಒಬ್ಬರಿಂದ ಒಬ್ಬರಿಗೆ ಸಾಗಿಸುತ್ತಿದ್ದಾರೆ.
  • ಕಾಯ್ದೆಯ ಪ್ರಕಾರ ದೂರು ಸಲ್ಲಿಸಿದ 90 ದಿನಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಕ್ರಮ ಕೈಗೊಳ್ಳಬೇಕಿದೆ. ಆದರೆ, ಈ ನಿಯಮ ಎಲ್ಲೂ ಪಾಲನೆಯಾಗುತ್ತಿಲ್ಲ.
  • ಇಲಾಖೆಯಲ್ಲಿ ಕಾಯ್ದೆಯ ಅನುಷ್ಠಾನವು ಯಾವ ಅಧಿಕಾರಿಯ ಜವಾಬ್ದಾರಿಯೆಂಬುದು ಈಗಲೂ ಸ್ಪಷ್ಟವಾಗಿಲ್ಲ. ನಾಗರಿಕ ಗುಂಪುಗಳ ಒತ್ತಾಯದಂತೆ ಕಾಯ್ದೆಯಲ್ಲಿ ರಾಜ್ಯಮಟ್ಟದ ಪ್ರಾಧಿಕಾರದ ರಚನೆಯಾಗಿದ್ದಲ್ಲಿ ಕಾಯ್ದೆಯ ದಕ್ಷ ಅನುಷ್ಠಾನ ಮತ್ತು ಮೆಲ್ವಿಚಾರಣೆ ಸಾಧ್ಯವಾಗುತ್ತಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.