ದುಷ್ಪರಿಣಾಮ ಬೀರುವ 328 ಎಫ್‌ಡಿಸಿ ಔಷಧಗಳ ಮೇಲೆ ಸಂಪೂರ್ಣ ನಿಷೇಧ ಹೇರಿದ ಸರಕಾರ
ಸುದ್ದಿ ಸಾರ

ದುಷ್ಪರಿಣಾಮ ಬೀರುವ 328 ಎಫ್‌ಡಿಸಿ ಔಷಧಗಳ ಮೇಲೆ ಸಂಪೂರ್ಣ ನಿಷೇಧ ಹೇರಿದ ಸರಕಾರ

ತಾತ್ಕಾಲಿಕ ಶಮನ ನೀಡಿ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂಥ ಔಷಧಗಳ ಮೇಲೆ ಕೇಂದ್ರ ಸರಕಾರ ಸಂಪೂರ್ಣ ನಿಷೇಧ ಹೇರಿದೆ.

ಆರೋಗ್ಯ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡುತ್ತಿದ್ದ ಹಾಗೂ ದೀರ್ಘಾವಧಿಯಲ್ಲಿ ಅಡ್ಡಪರಿಣಾಮ ಬೀರುವಂತಹ 328 ಫಿಕ್ಸಡ್‌ ಡೋಸ್‌ ಕಾಂಬಿನೇಷನ್‌ (ಎಫ್‌ಡಿಸಿ) ಔಷಧಗಳ ಉತ್ಪಾದನೆ, ಹಂಚಿಕೆ ಹಾಗೂ ಮಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರಕಾರ ನಿಷೇಧಿಸಿದೆ.

ಸಾರಿಡಾನ್‌ ಸೇರಿದಂತೆ ಹಲವು ಪೈನ್‌ ಕಿಲ್ಲರ್‌, ಆಂಟಿ ಬಯೋಟಿಕ್‌, ಆಂಟಿ ಸೆಪ್ಟಿಕ್‌ ಔಷಧಗಳಿಂದ ಜನರ ಆರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ. ಎರಡು ಹಾಗೂ ಅದಕ್ಕಿಂತ ಹೆಚ್ಚು ಡ್ರಗ್‌ನ ಸಂಯೋಜನೆಯಿಂದ ತಯಾರಾದ ಸಿಂಗಲ್‌ ಡೋಸೇಜ್‌ ಔಷಧಗಳನ್ನು ಎಫ್‌ಡಿಸಿ ಎಂದು ಕರೆಯಲಾಗುತ್ತದೆ.

ಆರೋಗ್ಯದ ಮೇಲೆ ಎಫ್‌ಡಿಸಿ ದುಷ್ಪರಿಣಾಮ ಬೀರಲಿದ್ದು, ಈ ಔಷಧಗಳನ್ನು ನಿಷೇಧಿಸಬೇಕು ಎಂದು ಡಾ. ಚಂದ್ರಕಾಂತ್‌ ಕೋಕಟೆ ನೇತೃತ್ವದ ತಜ್ಞರ ಸಮಿತಿಯು 2015ರ ಜನವರಿ 20ರಂದು ಸರಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. ಎಫ್‌ಡಿಸಿ ನಿಷೇಧವನ್ನು ಪ್ರಶ್ನಿಸಿ ಔಷಧ ತಯಾರಿಕಾ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.

ಈ ಔಷಧಗಳನ್ನು ಪೂರ್ತಿಯಾಗಿ ನಿಷೇಧಿಸಬೇಕೇ ಅಥವಾ ಇವುಗಳ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಯಂತ್ರಣ ತರಬೇಕೇ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ತಜ್ಞರ ಸಮಿತಿಯನ್ನು ಕೇಳಿತ್ತು. ಈ ಬಗ್ಗೆ ತಜ್ಞರ ಸಮಿತಿಯು ಆರು ತಿಂಗಳ ಒಳಗೆ ಮತ್ತೊಮ್ಮೆ ಹೊಸದಾಗಿ ವರದಿ ಹಾಗೂ ಶಿಫಾರಸು ಸಲ್ಲಿಸುವಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ಹೇಳಿತ್ತು.

ಇದಕ್ಕಾಗಿ ಮುಂಬೈನ್‌ ಜಿ.ಎಸ್‌. ವೈದ್ಯಕೀಯ ಕಾಲೇಜಿನ ಕ್ಲಿನಿಕಲ್‌ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥೆ ನೀಲಿಮಾ ಕ್ಷೀರಸಾಗರ್‌ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಅಂತಿಮವಾಗಿ ಈ ಸಮಿತಿಯೂ ಈ ಎಫ್‌ಡಿಸಿ ಔಷಧಗಳ ಉತ್ಪಾದನೆ, ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಶಿಫಾರಸು ಮಾಡಿತ್ತು.

ತಜ್ಞರ ಸಮಿತಿ ನೀಡಿದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಆರೋಗ್ಯ ಇಲಾಖೆಯು ಸುಮಾರು ಆರು ಸಾವಿರ ಬ್ರಾಂಡ್‌ಗಳ ಎಫ್‌ಡಿಸಿ ಔಷಧಗಳನ್ನು ನಿಷೇಧಿಸಿದೆ.