samachara
www.samachara.com
ಭೀಮ-ಕೋರೆಗಾಂವ್‌ ಹಿಂಸಾಚಾರ: ಸಾಮಾಜಿಕ ಹೋರಾಟಗಾರರ ಬಂಧನ ಮತ್ತೆ ವಿಸ್ತರಣೆ
ಸುದ್ದಿ ಸಾರ

ಭೀಮ-ಕೋರೆಗಾಂವ್‌ ಹಿಂಸಾಚಾರ: ಸಾಮಾಜಿಕ ಹೋರಾಟಗಾರರ ಬಂಧನ ಮತ್ತೆ ವಿಸ್ತರಣೆ

ಐವರು ಸಾಮಾಜಿಕ ಕಾರ್ಯಕರ್ತರಾದ ವರವರ ರಾವ್‌, ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರಧ್ವಜ್‌ ಮತ್ತು ಗೌತಮ್‌ ನವ್ಲೇಖ ಅವರ ಗೃಹ ಬಂಧನವನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ 17ರವರೆಗೆ ವಿಸ್ತರಿಸಿದೆ.

ಭೀಮ-ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾದ ಐವರು ಸಾಮಾಜಿಕ ಹೋರಾಟಗಾರರ ಗೃಹ ಬಂಧನವನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ 17ರವರೆಗೆ ವಿಸ್ತರಣೆ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ.ಎಂ. ಖನ್ವಿಲ್ಕರ್‌ ಮತ್ತು ನ್ಯಾ. ಡಿ.ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಜತೆಗೆ ಸಾಮಾಜಿಕ ಕಾರ್ಯಕರ್ತರ ಬಂಧನ ಪ್ರಶ್ನಿಸಿ ಖ್ಯಾತ ಇತಿಹಾಸಗಾರ್ತಿ ರೊಮಿಲಾ ಥಾಪರ್‌, ಮಾನವ ಹಕ್ಕು ಹೋರಾಟಗಾರರಾದ ದೇವಕಿ ಜೈನ್‌, ಪ್ರಭಾತ್‌ ಪಟ್ನಾಯಕ್‌, ಸತೀಶ್‌ ದೇಶಪಾಂಡೆ ಮತ್ತು ಮಾಯಾ ಧಾರುವಾಲ ಅವರುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 17ಕ್ಕೆ ಮುಂದೂಡಿದೆ.

ಈ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಇಂದು ‘ತಾನು ಮತ್ತೊಂದು ನ್ಯಾಯಾಲಯದಲ್ಲಿ ವಾದ ನಿರತರಾಗಿದ್ದೇನೆ. ವಿಚಾರಣೆಗೆ ಹಾಜರಾಗುತ್ತಿಲ್ಲ’ ಎಂದು ಮನವಿ ಸಲ್ಲಿಸಿದ್ದರು. ಈ ಕಾರಣಕ್ಕೆ ಗೃಹ ಬಂಧನವನ್ನು ವಿಸ್ತರಣೆ ಮಾಡಿ ವಿಚಾರಣೆಯನ್ನು ಮುಂದೂಡಲಾಯಿತು. ಅದಕ್ಕೂ ಮೊದಲು ನ್ಯಾಯಪೀಠದ ಮುಂದೆ ಹಾಜರಾಗಿದ್ದ ಸಿಂಘ್ವಿ 12 ಗಂಟೆ ನಂತರ ಥಾಪರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಹೀಗಿದ್ದೂ ಅವರು ಬರಲಾಗದ ಕಾರಣ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಯಿತು.

ಮಹಾರಾಷ್ಟ್ರದ ಪುಣೆ ಪೊಲೀಸರು ಐವರು ಸಾಮಾಜಿಕ ಕಾರ್ಯಕರ್ತರಾದ ವರವರ ರಾವ್‌, ಅರುಣ್‌ ಫೆರೇರಾ, ವರ್ನನ್‌ ಗೊನ್ಸಾಲ್ವೆಸ್‌, ಸುಧಾ ಭಾರಧ್ವಜ್‌ ಮತ್ತು ಗೌತಮ್‌ ನವ್ಲೇಖ ಅವರನ್ನು ಆಗಸ್ಟ್‌ 28 ರಂದು ಬಂಧಿಸಿದ್ದರು. 2017ರ ಡಿಸೆಂಬರ್‌ 31ರಂದು ಎಲ್ಗಾರ್‌ ಪರಿಷತ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದು ಮುಂದೆ ಭೀಮ-ಕೋರೆಗಾಂವ್‌ ಗ್ರಾಮದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ಐವರನ್ನು ಬಂಧಿಸಲಾಗಿತ್ತು. ದೇಶದಾದ್ಯಂತ ಈ ಘಟನೆ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡಿತ್ತು.

ಇದಾದ ಬೆನ್ನಿಗೆ ರೊಮಿಲಾ ಥಾಪರ್ ಮತ್ತು ಇತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್‌ 29ರಂದು ಐವರಿಗೂ ಐದು ದಿನಗಳ ಕಾಲ ಸುಪ್ರೀಂ ಕೋರ್ಟ್‌ ಗೃಹ ಬಂಧನ ವಿಧಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 6ಕ್ಕೆ ಮುಂದೂಡಿತ್ತು. ಇದಾದ ಬಳಿಕ ಸೆಪ್ಟೆಂಬರ್‌ 6ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಬಂಧನವನ್ನು ಸೆಪ್ಟೆಂಬರ್‌ 12ರ ವರೆಗೆ ಮುಂದೂಡಿತ್ತು. ಇದೀಗ ಎರಡನೇ ಬಾರಿಗೆ ಬಂಧನವನ್ನು ಸೆಪ್ಟೆಂಬರ್‌ 17ರವರೆಗೆ ಮುಂದೂಡಲಾಗಿದೆ.