ದೂರು ವಾಪಸ್‌ ಪಡೆಯಲು 5 ಕೋಟಿ ಆಮಿಷ; ಬಿಷಪ್‌ ಫ್ರಾಂಕೋ ವಿರುದ್ಧ ಮತ್ತೊಂದು ಆರೋಪ
ಸುದ್ದಿ ಸಾರ

ದೂರು ವಾಪಸ್‌ ಪಡೆಯಲು 5 ಕೋಟಿ ಆಮಿಷ; ಬಿಷಪ್‌ ಫ್ರಾಂಕೋ ವಿರುದ್ಧ ಮತ್ತೊಂದು ಆರೋಪ

ಕ್ರೈಸ್ತ ಸನ್ಯಾಸಿನಿ ನೀಡಿರುವ ದೂರು ವಾಪಸ್‌ ಪಡೆಯುವಂತೆ ಬಿಷಪ್‌ ಫ್ರಾಂಕೋ ಸಂಬಂಧಿಕರು 5 ಕೋಟಿ ರೂಪಾಯಿ ಆಮಿಷ ಒಡ್ಡಿದ್ದಾರೆ ಎಂದು ಸಂತ್ರಸ್ತೆ ಸೋದರ ಆರೋಪಿಸಿದ್ದಾರೆ.

ಕೇರಳದ ಕ್ರೈಸ್ತ ಸನ್ಯಾನಿಸಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಷಪ್‌ ಫ್ರಾಂಕೋ ಮುಳಕ್ಕಲ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ದೂರು ವಾಪಸ್‌ ಪಡೆಯಲು ಫ್ರಾಂಕೋ ಸಂಬಂಧಿಕರು ತಮಗೆ 5 ಕೋಟಿ ರೂಪಾಯಿಯ ಆಮಿಷ ಒಡ್ಡಿದ್ದಾರೆ ಎಂದು ಕ್ರೈಸ್ತ ಸನ್ಯಾನಿಸಿ ಸಹೋದರ ಆರೋಪಿಸಿದ್ದಾರೆ.

“ಫ್ರಾಂಕೋ ಸಂಬಂಧಿಕರು ಹಾಗೂ ಇಬ್ಬರು ಕ್ರೈಸ್ತ ಸನ್ಯಾನಿಗಳು ನನ್ನ ಸ್ನೇಹಿತನ ಮೂಲಕ ನನಗೆ 5 ಕೋಟಿ ಆಮಿಷ ಒಡ್ಡಿದ್ದಾರೆ. ಹಣ ಪಡೆದು ದೂರು ವಾಪಸ್‌ ಪಡೆಯುವಂತೆ ಒತ್ತಡ ಹೇರಿದ್ದಾರೆ” ಎಂದು ಕ್ರೈಸ್ತ ಸನ್ಯಾನಿಸಿ ಸಹೋದರ ದೂರಿದ್ದಾರೆ.

ಬಿಷಪ್‌ ಫ್ರಾಂಕೋ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ನಾಲ್ಕು ಮಂದಿ ಕ್ರೈಸ್ತ ಸನ್ಯಾಸಿನಿಯರು ಕೇರಳ ಹೈಕೋರ್ಟ್‌ ಸಮೀಪ ಪ್ರತಿಭಟನೆ ನಡೆಸುತ್ತಿದ್ದಾರೆ. ನಾಳೆ ಕೇರಳ ಹೈಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಗೆ ಬರಲಿದ್ದು, ಈ ಸಂಬಂಧ ಇಂದು ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಬಿಷಫ್‌ ಫ್ರಾಂಕೋ ಬಂಧನ ಕುರಿತಂತೆ ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ನೀಡುವಂತೆ ಕೇರಳ ಹೈಕೋರ್ಟ್‌ ಪೊಲೀಸ್‌ ಇಲಾಖೆಯನ್ನು ಕೇಳಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬರಲಿರುವ ಕಾರಣ ಪೊಲೀಸರು ಅಂತಿಮ ಹಂತದಲ್ಲಿ ಬಿಷಪ್‌ ಫ್ರಾಂಕೋ ವಿರುದ್ಧ ಕ್ರಮ ಕೈಗೊಳ್ಳಲು ತರಾತುರಿಯಲ್ಲಿದ್ದಾರೆ.

ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಡಿಯೋಸಿಸ್‌ನ ಬಿಷಪ್‌ ಫ್ರಾಂಕೋ ಮುಳಕ್ಕಲ್‌ 2014ರಿಂದ 2016ರವರೆಗೆ ತಮ್ಮ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಕೇರಳದ ಕ್ರೈಸ್ತ ಸನ್ಯಾಸಿನಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿ ತಿಂಗಳುಗಳು ಕಳೆದರೂ ಪೊಲೀಸರು ಬಿಷಪ್‌ ಫ್ರಾಂಕೋ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ವಿರುದ್ಧ ಕ್ರೈಸ್ತ ಸನ್ಯಾಸಿನಿಯರು ಪ್ರತಿಭಟನೆ ಆರಂಭಿಸಿದ್ದಾರೆ.

Also read: ಅತ್ಯಾಚಾರ ಪ್ರಕರಣದಲ್ಲಿ ಚರ್ಚ್‌ನ ಮೌನ; ವ್ಯಾಟಿಕನ್‌ ಪ್ರತಿನಿಧಿಗೆ ಕ್ರೈಸ್ತ ಸನ್ಯಾಸಿನಿ ಪತ್ರ

ಚರ್ಚ್‌ನ ವ್ಯವಸ್ಥೆ ಕೂಡಾ ಬಿಷಪ್‌ ಫ್ರಾಂಕೋ ಪರವಾಗಿದೆ ಎಂದು ಆರೋಪಿಸಿರುವ ಸಂತ್ರಸ್ತೆ ಈ ಬಗ್ಗೆ ವ್ಯಾಟಿಕನ್‌ನ ಭಾರತದ ಪ್ರತಿನಿಧಿಗೆ ಪತ್ರ ಬರೆದಿದ್ದಾರೆ. ಚರ್ಚ್‌ನ ವ್ಯವಸ್ಥೆ ಬಿಷಪ್‌ ಫ್ರಾಂಕೋ ರಕ್ಷಣೆಗೆ ನಿಂತಿರುವುದು ಚರ್ಚ್‌ನ ವಿಶ್ವಾಸಾರ್ಹತೆಯನ್ನು ಕುಗ್ಗಿಸಲಿದೆ ಎಂದು ಸಂತ್ರಸ್ತೆ ದೂರಿದ್ದಾರೆ.

ಕೇರಳ ಪ್ರವಾಹಕ್ಕೂ ಮುನ್ನಾ ಕ್ರೈಸ್ತ ಸನ್ಯಾಸಿನಿ ಮಾಡಿದ್ದ ಈ ಆರೋಪ ದೊಡ್ಡ ಸದ್ದು ಮಾಡಿತ್ತು. ಕೇರಳ ಪ್ರವಾಹದ ಸಂದರ್ಭದಲ್ಲಿ ಹಲವರು ಈ ಪ್ರಕರಣಕ್ಕೂ ಪ್ರವಾಹಕ್ಕೂ ತಳಕು ಹಾಕಿದ್ದರು. ಬಿಷಪ್‌ ಫ್ರಾಂಕೋ ವಿರುದ್ಧ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಆರೋಪ ಮಾಡಿದ ಕಾರಣಕ್ಕೇ ಕೇರಳದಲ್ಲಿ ಪ್ರವಾಹ ಉಂಟಾಗಿದೆ ಎಂದು ಹಲವರು ವಿತಂಡವಾದ ಮಂಡಿಸಿದ್ದರು.