ಬಿ. ಕಾಂ ಪದವೀಧರ ಬೈಲುಕುಪ್ಪೆಯ ಶುಂಠಿ ಫಾರ್ಮ್‌ನಲ್ಲಿ ಜೀತದಾಳುವಾಗಿದ್ದ...!
ಸುದ್ದಿ ಸಾರ

ಬಿ. ಕಾಂ ಪದವೀಧರ ಬೈಲುಕುಪ್ಪೆಯ ಶುಂಠಿ ಫಾರ್ಮ್‌ನಲ್ಲಿ ಜೀತದಾಳುವಾಗಿದ್ದ...!

ಏಳು ಮಂದಿ ಐದು ತಿಂಗಳಿನಿಂದ ಈ ಫಾರ್ಮ್‌ನಲ್ಲಿ ದುಡಿಯುತ್ತಿದ್ದರೆ, ಉಳಿದವರು ಮೂರು ತಿಂಗಳಿನಿಂದ ದುಡಿಯುತ್ತಿದ್ದರು. ಗದಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಡ್ಯ, ಲಿಂಗಸಗೂರು, ಹುಬ್ಬಳ್ಳಿ ಮತ್ತು ನೆಲಮಂಗಲದಿಂದ ಕರೆತರಲಾಗಿತ್ತು.

ಓರ್ವ ಬಿ. ಕಾಂ ಪದವೀಧರ ಸೇರಿದಂತೆ 14 ಜನ ಜೀತದಾಳುಗಳನ್ನು ಕೊಡಕು ಜಿಲ್ಲೆ ಬೈಲುಕುಪ್ಪೆಯಲ್ಲಿ ರಕ್ಷಿಸಿದ ವರದಿ ಹೊರಬಿದ್ದಿದೆ. ಟಿಬೆಟಿಯನ್‌ಗಳ ಆಶ್ರಯ ತಾಣ ಬೈಲುಕುಪ್ಪೆಯ ಶುಂಠಿ ಫಾರ್ಮ್‌ ಒಂದರಲ್ಲಿ ಇವರುಗಳನ್ನು ಹೀನಾಯವಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಸರಿಯಾದ ಊಟವನ್ನೂ ನೀಡದೆ, ಸೈಕಲ್ ಚೈನ್‌ಗಳಿಂದ ಹಲ್ಲೆ ನಡೆಸಲಾಗುತ್ತಿತ್ತು ಎಂದು ರಕ್ಷಣೆಗೆ ಒಳಗಾದವರು ಮಾಹಿತಿ ನೀಡಿದ್ದಾರೆ.

ಸದ್ಯ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಜೀತದಾಳುಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಲಾಗಿದೆ. ಹೊಸ ಬದುಕು ಕಟ್ಟಿಕೊಳ್ಳಲು ತಲಾ 20 ಸಾವಿರ ರೂಪಾಯಿ ನೀಡಲಾಗಿದೆ. ಫಾರ್ಮ್‌ ಮಾಲೀಕನನ್ನು ಬಂಧಿಸಲಾಗಿದ್ದು, ಬೈಕೆಕುಪ್ಪೆ ಪೊಲೀಸ್‌ ಠಾಣೆಯಲ್ಲಿ ಐಪಿಸಿಯ 370 (ಮಾನವ ಕಳ್ಳಸಾಗಣೆ) ಮತ್ತು ಜೀತಕಾರ್ಮಿಕ ನಿರ್ಮೂಲನಾ ಕಾಯ್ದೆಯ ಸೆಕ್ಷನ್‌ 16,17, ಮತ್ತು 18 ಅಡಿ ಈ ಪ್ರಕರಣ ದಾಖಲು ಮಾಡಲಾಗಿದೆ.

ರಕ್ಷಣೆಗೆ ಒಳಗಾಗಿರುವ ಈ ಎಲ್ಲ ಜೀತ ಕಾರ್ಮಿಕರು 28ರಿಂದ 60ವರ್ಷ ವಯಸ್ಸಿನ ಒಳಗಿನವರು. ಹೆಚ್ಚಿನವರು 30ರ ಆಸುಪಾಸು ಪ್ರಾಯದವರು. ಇವರ ಪೈಕಿ ಏಳು ಮಂದಿ ಐದು ತಿಂಗಳಿನಿಂದ ಈ ಫಾರ್ಮ್‌ನಲ್ಲಿ ದುಡಿಯುತ್ತಿದ್ದರೆ, ಉಳಿದವರು ಮೂರು ತಿಂಗಳಿನಿಂದ ದುಡಿಯುತ್ತಿದ್ದರು. ಈ ಎಲ್ಲಾ ಕಾರ್ಮಿಕರನ್ನು ಗದಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಡ್ಯ, ಲಿಂಗಸಗೂರು, ಹುಬ್ಬಳ್ಳಿ ಮತ್ತು ನೆಲಮಂಗಲದಿಂದ ಕರೆತರಲಾಗಿತ್ತು. ಫಾರ್ಮ್‌ನ ಮಾಲೀಕನ ಸಹೋದರ ಇವರಿಗೆ ಸುಳ್ಳು ಆಮಿಷ ಒಡ್ಡಿ ಇಲ್ಲಿಗೆ ಕರೆತಂದಿದ್ದ.

"ದಿನದಲ್ಲಿ ಎಂಟು ಗಂಟೆ ಕೆಲಸ ಮಾಡಬೇಕು. ದಿನ ಒಂದಕ್ಕೆ 350 ರೂಪಾಯಿಗಳನ್ನು ನೀಡಲಾಗುವುದು. ಇದರ ಜತೆಗೆ ಉಳಿದುಕೊಳ್ಳಲು ಮನೆ, ಮೂರು ಹೊತ್ತು ಒಳ್ಳೆಯ ಊಟ, ಪ್ರತಿ ರಾತ್ರಿ ಮದ್ಯವನ್ನು ನೀಡಲಾಗುವುದು ಎಂದು ಆತ ಎಲ್ಲರಿಗೂ ವಾಗ್ದಾನ ನೀಡಿದ್ದ,’’ ಎಂದು ಜೀತದಾಳುಗಳಾಗಿ ದುಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೈಲುಕುಪ್ಪೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಕೃಷಿ ಕಾರ್ಮಿಕರಿಗೆ ಬಿಡುಗಡೆ ಪತ್ರ ನೀಡಿದ ಸಂದರ್ಭ. 
ಬೈಲುಕುಪ್ಪೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಕೃಷಿ ಕಾರ್ಮಿಕರಿಗೆ ಬಿಡುಗಡೆ ಪತ್ರ ನೀಡಿದ ಸಂದರ್ಭ. 

ಎಲ್ಲರೂ ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಈ ವಾಗ್ದಾನದಂತೆ ಆತ ಒಂದು ದಿನವೂ ನಡೆದುಕೊಳ್ಳಲಿಲ್ಲ. ಅಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಗುತ್ತಿತ್ತು. ಜೊತೆಗೆ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಕೂಲಿ ಹಣವನ್ನೂ ನೀಡಿರಲಿಲ್ಲ. ಈ ಎಲ್ಲ ಜೀತ ಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 7 ಗಂಟೆಯವರೆಗೆ ದುಡಿಯಬೇಕಿತ್ತು. ಶುಂಠಿಯ ಫಾರ್ಮ್‌ನಲ್ಲಿ ಗಿಡ ನೆಡುವುದು, ಕಳೆ ಕೀಳುವುದು, ಕೀಟನಾಶಕ ಸಿಂಪಡಿಸುವುದು, ಗೊಬ್ಬರ ಹಾಕುವುದು ಇತ್ಯಾದಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಅಡುಗೆ ಮಾಡಲು ಒಬ್ಬರಿಗೆ ತೀರಾ ಕಡಿಮೆ ಅವಧಿ ನೀಡಲಾಗುತ್ತಿತ್ತು. ಆ ಸಮಯದಲ್ಲಿ ಅವರು ಅಡುಗೆ ಮಾಡಿ ಪುನಃ ಕೆಲಸ ಮಾಡಬೇಕಿತ್ತು. ಮಾಲೀಕ, ಅವನ ಸಹೋದರ ಅಥವಾ ಭಾವ ಸದಾ ಕಣ್ಣಿಡುತ್ತಿದ್ದರು. ಮಲಗಲು ಚಿಕ್ಕ ಕೋಣೆಯನ್ನು ನೀಡಲಾಗಿತ್ತು. ಅವರು ಹೊರಗೆ ಹೋಗದಂತೆ ಕಾವಲು ಕಾಯುವ ಸಂಬಂಧ ಅಲ್ಲಿಯೇ ಸಮೀಪ ಮಾಲೀಕ ಮಂಚದ ಮೇಲೆ ಮಲಗುತ್ತಿದ್ದ. ತಮ್ಮ ಸಂಬಳ ನೀಡುವಂತೆ ಅಥವಾ ರಜೆ ಕೇಳಿದರೆ ಮಾಲೀಕ ಎಲ್ಲರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಜೊತೆಗೆ ಹೀನಾಯವಾಗಿ ಬೈಯುತ್ತಿದ್ದ. ಮೋಟಾರ್‌ಸೈಕಲ್‌ ಚೈನಿನಿಂದ ಹಾಗೂ ಕೋಲಿನಿಂದ ಥಳಿಸಲಾಗುತ್ತಿತ್ತು ಎಂದು ಘಟನೆಯನ್ನು ಇಲಾಖೆ ಗಮನಕ್ಕೆ ತಂದ ‘ಐಜೆಎಂ’ ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.

ಬಿ.ಕಾಂ ಪದವೀಧರನಾದ ಒಬ್ಬ ಯುವಕ ಎರಡು ತಿಂಗಳ ಹಿಂದೆ ಹೇಗೋ ಇಲ್ಲಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದ. ಆತ ಪೊಲೀಸರಿಗೆ ನೀಡಿದ ಸುಳಿವಿನ ಮೇರೆಗೆ ಈ ವಿಷಯ ಬಹಿರಂಗಗೊಳ್ಳಲು ಸಾಧ್ಯವಾಯಿತು. ಆತ ಗದಗಕ್ಕೆ ಹಿಂದಿರುಗಿದ ಮೇಲೆ ಜೀತಕ್ಕಿದ್ದ ಇನ್ನೊಂದು ಕಾರ್ಮಿಕನ ಸಹೋದರನ ಹುಡುಕಾಟದಲ್ಲಿ ತೊಡಗಿದ. ಕೊನೆಗೂ ಆತ ಸಿಕ್ಕಿದ ಮೇಲೆ ಆತನ ಸಹೋದರ ಪಡುತ್ತಿರುವ ಕಷ್ಟದ ಬಗ್ಗೆ ವಿವರಿಸಿದ. ಆ ಸಹೋದರ ಮತ್ತು ತಪ್ಪಿಸಿಕೊಂಡ ಕಾರ್ಮಿಕ ನಂತರ ಸ್ಥಳೀಯ ಸಮುದಾಯದ ನಾಯಕರನ್ನು ಸಂಪರ್ಕಿಸಿ ಬೆಂಗಳೂರಿನ ಲೋಕಾಯುಕ್ತದ ಡಿವೈಎಸ್ಪಿಗೆ ವಿಷಯವನ್ನು ತಿಳಿಸಿದರು.ಅವರ ಸಕಾಲಿಕ ಕ್ರಮ ಮತ್ತು ಬೈಲೆಕುಪ್ಪೆ ಪೋಲಿಸ್ ಮತ್ತು ಜಿಲ್ಲಾಡಳಿತದ ಶೀಘ್ರ ಪ್ರತಿಕ್ರಿಯೆಯ ಕಾರಣದಿಂದ ಈ ಕಾರ್ಮಿಕರನ್ನು ರಕ್ಷಣೆ ಮಾಡಲು ಹಾಗೂ ಫಾರ್ಮ್ ಮಾಲೀಕರನ್ನು ಬಂಧಿಸಲು ಸಾಧ್ಯವಾಯಿತು ಎಂದು ಹೇಳಿಕೆ ತಿಳಿಸಿದೆ.

ಜೀತದಾಳು ನಿರ್ಮೂಲನಾ ಕಾಯ್ದೆ (ಬಿಎಲ್) 1976 ಅಡಿ ಜೀತದಾಳು ಪದ್ಧತಿಯು ಮನುಷ್ಯನ ಮೂಲ ಹಕ್ಕಿನ ಚ್ಯುತಿ ಮಾಡಿದಂತೆ. ಜೀತಪದ್ಧತಿ ಎಂದರೆ ಸಾಲ ಅಥವಾ ಮುಂಗಡ ಹಣಕ್ಕಾಗಿ ವ್ಯಕ್ತಿಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು. ಹೆಚ್ಚಿನ ಪ್ರಕರಣಗಳಲ್ಲಿ ಕಾರ್ಮಿಕರು ಪಡೆದಿರುವ ಮುಂಗಡ ಹಣವನ್ನೇ ನೆಪವಾಗಿಟ್ಟುಕೊಂಡು ಅವರ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುವುದು. ಈ ಕಾಯ್ದೆ ಮತ್ತು ಸುಪ್ರೀಂಕೋರ್ಟಿನ ತೀರ್ಪಿನ ಅನ್ವಯ, ಜೀತದಾಳುಗಳಾಗಬೇಕಿದ್ದರೆ ಅವರ ದೈಹಿಕವಾಗಿ ನಿಯಂತ್ರಣ ಹೇರಲಾಗಿತ್ತು ಎಂಬುದನ್ನು ಸಾಬೀತು ಪಡಿಸಬೇಕಾದ ಅಗತ್ಯವೇ ಇಲ್ಲ. ಜೀತದಾಳು ಪುರುಷ, ಮಹಿಳೆ ಅಥವಾ ಮಕ್ಕಳಾಗಿರಬಹುದು. ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲ ಸೌಲಭ್ಯ, ಹಕ್ಕುಗಳ ಚ್ಯುತಿ ಉಂಟುಮಾಡಿದರೆ ಅಂಥವರನ್ನು ಜೀತದಾಳು ಎನ್ನಬಹುದು.