samachara
www.samachara.com
ಯಾವುದೇ ಸಂದರ್ಭಕ್ಕೂ ನಾನು ಸಿದ್ಧ: ಇ.ಡಿ. ಬಂಧನ ಸಾಧ್ಯತೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ಸುದ್ದಿ ಸಾರ

ಯಾವುದೇ ಸಂದರ್ಭಕ್ಕೂ ನಾನು ಸಿದ್ಧ: ಇ.ಡಿ. ಬಂಧನ ಸಾಧ್ಯತೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ

“ಕಾನೂನಿದೆ, ನ್ಯಾಯಾಲಯ ಇದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಯಾವುದೇ ನೊಟೀಸ್‌ ಬಂದರೂ ಉತ್ತರ ಕೊಡಲು ಸಿದ್ಧ” ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸುವ ಸಾಧ್ಯತೆಯಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಯಾವುದೇ ಸಂದರ್ಭಕ್ಕೂ ನಾನು ಸಿದ್ಧನಿದ್ದೇನೆ. ನನಗೆ ಆತಂಕ ಗಾಬರಿ ಇಲ್ಲ ಎಂದಿದ್ದಾರೆ.

ಜಾರಿ ನಿರ್ದೇಶನಾಲಯವು ಡಿಕೆಶಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಅವರನ್ನು ಬಂಧಿಸಲಿದೆ ಎಂಬ ಬಗ್ಗೆ ಭಾನುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ನನಗೆ ಇ.ಡಿ. ನೊಟೀಸ್‌ ಬಂದಿಲ್ಲ. ಹಿಂದೆ ಆದಾಯ ತೆರಿಗೆ ಇಲಾಖೆಯವರು ವಿಚಾರಣೆಗೆ ಕರೆದಿದ್ದರು. ಆ ಸಂದರ್ಭದಲ್ಲಿ ವಿಚಾರಣೆಗೆ ಹೋಗಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕ್ರಿಮಿನಲ್‌ ಅಲ್ಲ” ಎಂದು ಹೇಳಿದ್ದಾರೆ.

“ದೆಹಲಿಯಲ್ಲಿ ನನಗೆ ಎರಡು ಸ್ವಂತ ಮನೆ ಇದೆ. ಅಲ್ಲಿ ಯಾವುದೇ ಹಣ ಇಲ್ಲ. ನನ್ನ ಎಲ್ಲಾ ಆಸ್ತಿಯನ್ನು ಘೋಷಣೆ ಮಾಡಿದ್ದೇನೆ. ರಾಜಕಾರಣ ಫ‌ುಟ್‌ಬಾಲ್‌ ಗೇಮ್‌ ಅಲ್ಲ. ರಾಜಕಾರಣ ಚೆಸ್‌ ಗೇಮ್‌” ಎಂದು ತಿಳಿಸಿದ್ದಾರೆ.

“ಕಾನೂನಿದೆ, ನ್ಯಾಯಾಲಯ ಇದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಯಾವುದೇ ನೊಟೀಸ್‌ ಬಂದರೂ ಉತ್ತರ ಕೊಡಲು ಸಿದ್ದ. ನನಗೆ ಆತಂಕ, ಗಾಬರಿ ಇಲ್ಲ. 40 ವರ್ಷ ರಾಜಕಾರಣ ಮಾಡಿದ್ದೇನೆ. ನನಗೆ ಯಾವುದೇ ಅಳುಕು ಇಲ್ಲ” ಎಂದಿದ್ದಾರೆ.

ಭಾನುವಾರ ಬೆಳಿಗ್ಗೆ ಬೆಂಗಳೂರಿನ ನಿವಾಸದಿಂದ ಹೊರಗೆ ಹೋದ ಡಿ.ಕೆ. ಶಿವಕುಮಾರ್‌, ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ, ಇ.ಡಿ. ಬಂಧನ ಸುದ್ದಿಗಳ ಬಗ್ಗೆ ಸ್ವಾಮೀಜಿ ಜತೆಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್‌ ಬಂಧನ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌, “ಇದು ಕೇವಲ ವದಂತಿ. ಇದೆಲ್ಲವೂ ಬಿಜೆಪಿಯ ಹುನ್ನಾರ” ಎಂದು ಹೇಳಿದ್ದಾರೆ.