ಅಂತೂ ಇಂತೂ ಬೆಂಗಳೂರಿನಲ್ಲೇ ಏರೋ ಇಂಡಿಯಾ-2019
ಸುದ್ದಿ ಸಾರ

ಅಂತೂ ಇಂತೂ ಬೆಂಗಳೂರಿನಲ್ಲೇ ಏರೋ ಇಂಡಿಯಾ-2019

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು 2019ರ ಫೆಬ್ರುವರಿ 20ರಿಂದ 24ರವರೆಗೆ ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯಲಿದೆ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿಂದ ಸ್ಥಳಾಂತರವಾಗಲಿದೆ ಎಂಬ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. 12ನೇ ಏರೋ ಇಂಡಿಯಾ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

2019ರ ಫೆಬ್ರುವರಿ 20ರಿಂದ 24ರವರೆಗೆ ಐದು ದಿನಗಳ ಕಾಲ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಬೆಂಗಳೂರು ಏರೋ ಇಂಡಿಯಾ ಎಂದಿನಂತೆ ಯಲಹಂಕ ವಾಯು ನೆಲೆಯಲ್ಲಿ ನಡೆಯಲಿದೆ. 1996ರಿಂದ ಎರಡು ವರ್ಷಕ್ಕೊಮ್ಮೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಾ ಬಂದಿದೆ.

ಮುಂದಿನ ಏರೋ ಇಂಡಿಯಾ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿದೆ ಎನ್ನಲಾಗಿತ್ತು. ಭಾರತದ ಡಿಫೆನ್ಸ್‌ ಕಾರಿಡಾರ್‌ ಎನಿಸಿರುವ ಲಖನೌನಲ್ಲಿ ಏರೋ ಇಂಡಿಯಾ ನಡೆಸಲು ರಕ್ಷಣಾ ಇಲಾಖೆ ಮುಂದಾಗಿದೆ ಎಂಬ ಸುದ್ದಿ ಹಬ್ಬಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಏರೋ ಇಂಡಿಯಾ ಲಖನೌನಲ್ಲಿ ನಡೆಸುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದ್ದರು.

ಏರ್‌ ಶೋ ನಡೆಸಲು ದೇಶದ ಬೇರೆ ಬೇರೆ ರಾಜ್ಯಗಳು ಮನವಿ ಸಲ್ಲಿಸಿವೆ ಎಂಬುದನ್ನು ನಿರ್ಮಲಾ ಸೀತಾರಾಮನ್‌ ಸಹ ಒಪ್ಪಿಕೊಂಡಿದ್ದರು. ಆದರೆ, ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರಿಸದಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಉತ್ತರ ಪ್ರದೇಶದ ಹೊರತಾಗಿ ಗುಜರಾತ್‌, ಒಡಿಶಾ, ರಾಜಸ್ತಾನ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಏರೋ ಇಂಡಿಯಾ ತಮ್ಮ ರಾಜ್ಯದಲ್ಲಿ ನಡೆಸಲು ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸಿದ್ದವು. ಆದರೆ, ಅಂತಿಮವಾಗಿ ಏರೋ ಇಂಡಿಯಾ ಬೆಂಗಳೂರಿನಲ್ಲೇ ನಡೆಯುವುದು ಖಚಿತವಾಗಿದೆ.