samachara
www.samachara.com
ಗೋಕರ್ಣ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ರಾಮಚಂದ್ರಾಪುರ ಮಠಕ್ಕೆ ಹಿನ್ನಡೆ
ಸುದ್ದಿ ಸಾರ

ಗೋಕರ್ಣ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ರಾಮಚಂದ್ರಾಪುರ ಮಠಕ್ಕೆ ಹಿನ್ನಡೆ

ಆಗಸ್ಟ್‌ 10ರ ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದ ರಾಮಚಂದ್ರಾಪುರ ಮಠಕ್ಕೆ ಆರಂಭಿಕ ಹಿನ್ನಡೆಯಾಗಿದೆ.

ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಸರಕಾರ ವಾಪಸ್‌ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಇದರಿಂದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಿನ್ನಡೆಯಾಗಿದೆ.

2008ರ ಆಗಸ್ಟ್‌ 12ರಂದು ಅಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಇಲ್ಲಿನ ಉಪಾಧಿವಂತರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಂಬಂಧ ಆಗಸ್ಟ್‌ 10ರಂದು ಆದೇಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ ದೇವಸ್ಥಾನವನ್ನು ಸರಕಾರ ವಾಪಸ್‌ ಪಡೆದುಕೊಳ್ಳಬೇಕು ಎಂದು ಆದೇಶ ನೀಡಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ. ಎ.ಎಂ. ಖನ್ವಿಲ್ಕರ್‌ ಮತ್ತು ನ್ಯಾ. ಡಿ.ವೈ. ಚಂದ್ರಚೂಡ್‌ ಅವರಿದ್ದ ತ್ರಿ ಸದಸ್ಯ ಪೀಠ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಹೀಗಿದ್ದೂ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ ಪ್ರತಿಕ್ರಿಯೆ ಕೋರಿ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ನೋಟಿಸ್‌ಗೆ ಉತ್ತರಿಸುವಂತೆ 8 ವಾರಗಳ ಕಾಲವಕಾಶ ನೀಡಿದ್ದು ಮುಂದಿನ ವಿಚಾರಣೆಯನ್ನು ನವೆಂಬರ್‌ 12ಕ್ಕೆ ಮುಂದೂಡಿದೆ. ಈ ಸಂದರ್ಭ ಮುಂದಿನ ಆದೇಶದವರೆಗೆ ಹೈಕೋರ್ಟ್‌ ಆದೇಶ ಜಾರಿಯಲ್ಲಿರಲಿದೆ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಹೈಕೋರ್ಟ್‌ ಈ ಹಿಂದೆ ಜಿಲ್ಲಾಧಿಕಾರಿ ನೇತೃತ್ವದ ದೇಖರೇಖಿ ಸಮಿತಿ ಇದೇ ಸೆಪ್ಟೆಂಬರ್ 10ರ ಒಳಗೆ ದೇಗುಲವನ್ನು ತನ್ನ ವಶಕ್ಕೆ ಪಡೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡದೇ ಇರುವುದರಿಂದ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ದೇವಸ್ಥಾನವನ್ನು ವಶಕ್ಕೆ ಪಡೆದುಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ.

ಈಗಾಗಲೇ ದೇವಾಲಯವನ್ನು ಮುಜುರಾಯಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಭಾಗವಾಗಿ ಆಗಸ್ಟ್‌ 22ರಂದೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್‌ ಮತ್ತು ಕುಮಟಾ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಸ್ಥಿರ ಮತ್ತು ಚರ ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದರು. ಜತೆಗೆ ಚಿನ್ನಾಭರಣ, ಒಡವೆ, ಬೆಳ್ಳಿಯ ವಸ್ತುಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆದುಕೊಂಡಿದ್ದರು.

ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಜಿಲ್ಲಾಧಿಕಾರಿ ನಡೆಯನ್ನು ಪ್ರಶ್ನಿಸಿ ‘ನಮಗೆ ಸೆಪ್ಟೆಂಬರ್ 10ರವರೆಗೆ ಸಮಯಾವಕಾಶ ಇದೆ. ಅಲ್ಲಿಯವರೆಗೆ ನೀವು ದೇವಸ್ಥಾನವನ್ನು ವಶಕ್ಕೆ ಪಡೆಯಲು ಸಾಧ್ಯವಿಲ್ಲ’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಬೆಳವಣಿಗೆ ನಡುವೆಯೇ ಮಠದ ಪರ ವಕೀಲ ಎಜಾಜ್‌ ಮಕ್ಬೂಲ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದರಲ್ಲಿ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಇದನ್ನು ನ್ಯಾಯಾಲಯ ತಳ್ಳಿ ಹಾಕುವುದರೊಂದಿಗೆ ದೇವಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳುವ ಮಠದ ಪ್ರಯತ್ನಕ್ಕೆ ಆರಂಭಿಕ ಹಿನ್ನಡೆಯಾಗಿದೆ.