‘ಭಕ್ತ’ರ ಮೂಢನಂಬಿಕೆ ಪ್ರಶ್ನಿಸಿದ್ದಕ್ಕೆ ಜೈಲು ಶಿಕ್ಷೆ; #JusticeForAshraf ಅಶ್ರಫ್‌ ಪರ ಅಭಿಯಾನ
ಸುದ್ದಿ ಸಾರ

‘ಭಕ್ತ’ರ ಮೂಢನಂಬಿಕೆ ಪ್ರಶ್ನಿಸಿದ್ದಕ್ಕೆ ಜೈಲು ಶಿಕ್ಷೆ; #JusticeForAshraf ಅಶ್ರಫ್‌ ಪರ ಅಭಿಯಾನ

ಭಕ್ತರ ಮೂಢನಂಬಿಕೆ ಪ್ರಶ್ನಿಸಿದ್ದ ಮಂಗಳೂರಿನ ಅಶ್ರಫ್‌ ಸಾಲೆತ್ತೂರು ಅವರನ್ನು ಪೊಲೀಸರು ಬಂಧಿಸಿದ ಕ್ರಮದ ವಿರುದ್ಧ #JusticeForAshraf ಅಭಿಯಾನ ಆರಂಭವಾಗಿದೆ.

ಮೂಢನಂಬಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ ಕಾರಣಕ್ಕೆ ಪೊಲೀಸರು ಬಂಧಿಸಿದ್ದ ಮಂಗಳೂರಿನ ಅಶ್ರಫ್‌ ಸಾಲೆತ್ತೂರು ಪರವಾಗಿ ‘ಜಸ್ಟೀಸ್‌ ಫಾರ್‌ ಅಶ್ರಫ್‌’ (#justiceforashraf) ಅಭಿಯಾನ ಆರಂಭವಾಗಿದೆ. ಮಂಗಳೂರು ಪೊಲೀಸರ ಈ ಕ್ರಮದ ವಿರುದ್ಧ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ಮೂಲದ ಅಶ್ರಫ್‌ ಆಗಸ್ಟ್‌ 19ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ‘ಭಕ್ತರೊಬ್ಬರು ಹೇಳಿದ್ದು: ಋತುಮತಿಯಾದ ಮಹಿಳೆಯರನ್ನು ಶಬರಿಮಲೆ ಪ್ರವೇಶಿಸಲು ಕೋರ್ಟು ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ. ಅಶ್ರಫ್‌ ಸಾಲೆತ್ತೂರು ಕೇಳಿದ್ದು: ಹಾಗಾದರೆ ಪರಶುರಾಮನ ಸೃಷ್ಟಿ ತುಳು ನಾಡಿನಲ್ಲಿ ನೆರೆ ಬರಲು ಕಾರಣವೇನು’ ಎಂಬ ಪೋಸ್ಟ್‌ ಹಾಕಿದ್ದರು.

ಈ ಪೋಸ್ಟ್‌ ಮೂಲಕ ಅಶ್ರಫ್‌ ಶಾಂತಿ ಕದಡಲು ಮತ್ತು ಗಲಭೆ ಸೃಷ್ಟಿಸಲು ಯತ್ನ, ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಮಂಗಳೂರು ಪೊಲೀಸರು ಅಶ್ರಫ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಮಂಗಳೂರು ಉತ್ತರ ಠಾಣೆ ಪೊಲೀಸರು ನಿಯಮ ಉಲ್ಲಂಘಿಸಿ ಲಾಕಪ್‌ನಲ್ಲಿರಿಸಿ, ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ಅಶ್ರಫ್‌ ಆರೋಪಿಸಿದ್ದಾರೆ.

ಅಶ್ರಫ್‌ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಆಗಸ್ಟ್‌ 21ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಠಾಣೆಯ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್ ಎಂ.ಸುಂದರ ಅವರೇ ದೂರುದಾರರಾಗಿದ್ದಾರೆ. ‘ಬರಹದ ಮೂಲಕ ಶಾಂತಿ ಕದಡಲು, ಗಲಭೆ ಸೃಷ್ಟಿಸಲು ಯತ್ನ, ಕೋಮು ಗಲಭೆ ಸೃಷ್ಟಿಸಲು ಯತ್ನ ಮತ್ತು ಕ್ರಿಮಿನಲ್‌ ಮಧ್ಯಪ್ರವೇಶ’ ಆರೋಪದಡಿ ಅಶ್ರಫ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಆದರೆ, ಮಾಡದ ತಪ್ಪಿಗಾಗಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಕ್ಕೆ ಅಶ್ರಫ್‌ ನೋವು ತೋಡಿಕೊಂಡಿದ್ದಾರೆ. “ಪೊಲೀಸರ ವರ್ತನೆಯಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ನನ್ನನ್ನು ಬಟ್ಟೆ ಬಿಚ್ಚಿ ಲಾಕಪ್‌ ಹಾಕಿ ಕ್ರಿಮಿನಲ್‌ ಮಾಡಿಬಿಟ್ಟರು” ಎಂದು ಅಶ್ರಫ್‌ ನೊಂದು ನುಡಿದಿದ್ದಾರೆ.

“ನಾನು ಕಾನೂನಿಗೆ ವಿರುದ್ಧವಾಗಿ ಏನನ್ನೂ ಬರೆದಿಲ್ಲ. ಮೂಢನಂಬಿಕೆಯನ್ನು ಪ್ರಶ್ನಿಸಿದ್ದೇ ತಪ್ಪು ಎನ್ನುವಂತೆ ಪೊಲೀಸರು ನನ್ನನ್ನು ಬಂಧಿಸಿದರು. ಬಂಧನದ ಬಳಿಕ ನನ್ನೊಂದಿಗೆ ಅಮಾನವೀಯವಾಗಿ ನಡೆದುಕೊಂಡರು” ಎಂದು ಅಶ್ರಫ್‌ ಹೇಳಿದ್ದಾರೆ.

“ನಾನು ಬಡ ಕುಟುಂಬದಲ್ಲಿ ಹುಟ್ಟಿದವ. ಬಡತನದ ಕಾರಣ ಹೈಸ್ಕೂಲ್ ಶಿಕ್ಷಣವನ್ನು ಊರಿನಿಂದ ದೂರದ ಸರಕಾರಿ ವಸತಿ ಶಾಲೆಯಲ್ಲಿದ್ದು ಓದಿದೆ. ಹಗಲು ದುಡಿಮೆ ಮಾಡಿ, ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಪಿಯುಸಿ ಓದಿದೆ. ಪದವಿ ಪಡೆದದ್ದು, ಎಂ.ಎ. ಓದಿದ್ದು ದೂರ ಶಿಕ್ಷಣದ ಮೂಲಕ. ಬುದ್ದಿ ಬಂದಂದಿನಿಂದ ಸಿಕ್ಕ ಸಿಕ್ಕ ಕೆಲಸ ಮಾಡಿದ್ದೇನೆ. ಕೆಲಸ ಮಾಡುತ್ತಲೇ ಓದಿದ್ದೇನೆ. ಎಂ.ಎ. ಪೂರ್ಣಗೊಂಡಿದ್ದರಿಂದ ನೆಟ್ ಪರೀಕ್ಷೆ ಬರೆಯಬೇಕು, ಅಧ್ಯಾಪಕ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಅದಕ್ಕಾಗಿ ಸಿದ್ದತೆಯಲ್ಲಿ ತೊಡಗಿದ್ದೆ” ಎಂದು ಅಶ್ರಫ್‌ ಹೇಳಿಕೊಂಡಿದ್ದಾರೆ.

“ಅಧ್ಯಾಪಕನಾಗಿ ಸಮಾಜದಲ್ಲಿ ಗೌರವದ ಬದುಕು ನಡೆಸಬೇಕು ಎಂಬ ಅಭಿಲಾಷೆ ಇತ್ತು. ಈಗ ಪೊಲೀಸರು ಅದನ್ನೆಲ್ಲ ಮಣ್ಣುಪಾಲು ಮಾಡಿದರು. ಬಟ್ಟೆ ಬಿಚ್ಚಿ ಬೆತ್ತಲೆಮಾಡಿ ಲಾಕಪ್ ಗೆ ಹಾಕಿದರು. ವಾರಗಳ ಕಾಲ ಜೈಲಿಗೆ ಕಳುಹಿಸಿ ಕ್ರಿಮಿನಲ್ ಮಾಡಿಬಿಟ್ಟರು. ನನ್ನ ಕನಸು ನುಚ್ಚು ನೂರಾಯಿತು. ನನ್ನ ಬದುಕು ನಾಶವಾಯಿತು. ನಾನೀಗ ಕ್ರಿಮಿನಲ್” ಎಂದು ಅವರು ನೋವು ಹಂಚಿಕೊಂಡಿದ್ದಾರೆ.

ಅಶ್ರಫ್‌ ಪರವಾಗಿ ನಿಂತಿರುವ ಹಲವರು ಅಶ್ರಫ್‌ ಪ್ರಶ್ನಿಸಿದ್ದರಲ್ಲಿ ಕಾನೂನಿಗೆ ವಿರುದ್ಧವಾದುದು ಏನಿದೆ?, ಅಶ್ರಫ್‌ಗೆ ನ್ಯಾಯ ಸಿಗಬೇಕು, ಅಶ್ರಫ್‌ ಬಂಧಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಶ್ರಫ್‌ ವಿರುದ್ಧ ಹಾಕಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.