ಉಪವಾಸ ಸತ್ಯಾಗ್ರಹದಿಂದ ಕ್ಷೀಣಿಸಿದ ಆರೋಗ್ಯ, 14ನೇ ದಿನಕ್ಕೆ ಆಸ್ಪತ್ರೆ ಸೇರಿದ ಹಾರ್ದಿಕ್ ಪಟೇಲ್
ಸುದ್ದಿ ಸಾರ

ಉಪವಾಸ ಸತ್ಯಾಗ್ರಹದಿಂದ ಕ್ಷೀಣಿಸಿದ ಆರೋಗ್ಯ, 14ನೇ ದಿನಕ್ಕೆ ಆಸ್ಪತ್ರೆ ಸೇರಿದ ಹಾರ್ದಿಕ್ ಪಟೇಲ್

14 ದಿನಗಳ ಉಪವಾಸದ ಅಂತ್ಯಕ್ಕೆ ಹಾರ್ದಿಕ್‌ ಪಟೇಲ್‌ ಸುಮಾರು 20 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ಕಿಡ್ನಿ, ಲಿವರ್‌ಗೆ ಹಾನಿಯಾಗಿದ್ದು, ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ

ಕಳೆದ 14 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಾರ್ದಿಕ್‌ ಪಟೇಲ್‌ ಆರೋಗ್ಯದಲ್ಲಿ ತೀವ್ರ ಏರು ಪೇರು ಕಂಡು ಬಂದಿದ್ದು ಅವರನ್ನಿಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಗಸ್ಟ್‌ 25ರಿಂದ ಅಹಮದಾಬಾದ್‌ನಲ್ಲಿ ಪಟೇಲ್‌ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಪಟೇಲ್‌ ಸಮುದಾಯದ ಯುವ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಮತ್ತು ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಅವರು ನಿರಶನ ಆರಂಭಿಸಿದ್ದರು. ಇದರ ನಡುವೆ ರಾಜ್ಯ ಸರಕಾರ ಮಾತುಕತೆಗೆ ಬರಬೇಕು ಎಂದು ‘ಪಾಟೀದಾರ್‌ ಅನಾಮತ್‌ ಆಂದೋಲನ್‌ ಸಮಿತಿ (ಪಾಸ್)’ 24 ಗಂಟೆಗಳ ಗಡುವು ನೀಡಿತ್ತು. ಈ ಗಡುವು ಗುರುವಾರಕ್ಕೆ ಅಂತ್ಯವಾಗುತ್ತಿದ್ದಂತೆ ಹಾರ್ದಿಕ್‌ ಪಟೇಲ್‌ ನೀರು ಸೇವನೆಯನ್ನೂ ನಿಲ್ಲಿಸಿದ್ದರು. ಇದಾದ ಬೆನ್ನಿಗೆ ಅವರ ಆರೋಗ್ಯ ಮತ್ತಷ್ಟು ವಿಷಮಿಸಿದೆ.

“14 ದಿನಗಳ ಉಪವಾಸದ ಅಂತ್ಯಕ್ಕೆ ಹಾರ್ದಿಕ್‌ ಪಟೇಲ್‌ ಸುಮಾರು 20 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ಕಿಡ್ನಿ ಮತ್ತು ಲಿವರ್‌ಗೆ ಹಾನಿಯಾಗಿದ್ದು, ಇಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಲಾ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ,” ಎಂದು ಪಾಸ್‌ ನಾಯಕ ಮನೋಜ್‌ ಪನರ ತಿಳಿಸಿದ್ದಾರೆ.

ಹರಿದು ಬಂದ ಬೆಂಬಲ

ಹಾರ್ದಿಕ್‌ ಪಟೇಲ್ ಆಸ್ಪತ್ರೆ ಸೇರುತ್ತಿದ್ದಂತೆ ಸೋಲಾ ದವಾಖಾನೆ ಮುಂದೆ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾರೆ. ಹಾರ್ದಿಕ್‌ ಪಟೇಲ್‌ಗೆ ಸಾಮಾನ್ಯ ಜನರಲ್ಲದೆ ಹಲವು ಪಕ್ಷದ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿದೆ.

ಗುರುವಾರವಷ್ಟೇ 25 ಶಾಸಕರೊಂದಿಗೆ ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿಯನ್ನು ಭೇಟಿಯಾಗಿದ್ದ ವಿರೋಧ ಪಕ್ಷದ ನಾಯಕ ಪರೇಶ್‌ ಧನಾನಿ ಹಾರ್ದಿಕ್‌ ಎತ್ತಿರುವ ವಿಚಾರಗಳ ಜತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಶುಕ್ರವಾರ ಗುಜರಾತ್‌ನಾದ್ಯಂತ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಅವರು ಕರೆ ನೀಡಿದ್ದರು. ಹೀಗಾಗಿ ಇಂದು ರಾಜ್ಯದಲ್ಲಿ ಕಾಂಗ್ರೆಸ್‌ ನಿರಶನ ನಡೆಸುತ್ತಿದೆ.

ಕಾಂಗ್ರೆಸ್ ಪಕ್ಷವಲ್ಲದೆ ವಿವಿಧ ಪಕ್ಷಗಳ ನಾಯಕರು ಹಾರ್ದಿಕ್‌ ಪಟೇಲ್‌ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮಂಗಳವಾರ ಗುಜರಾತ್‌ಗೆ ತೆರಳಿ ಹಾರ್ದಿಕ್‌ ಭೇಟಿಯಾಗಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮತ್ತು ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದ್ದರು. ಅದೇ ದಿನ ಮೌನ ಮುರಿದಿದ್ದ ಗುಜರಾತ್‌ ಬಿಜೆಪಿ ಸರಕಾರ, ‘ಹಾರ್ದಿಕ್‌ ಪಟೇಲ್‌ ಹೋರಾಟ ಕಾಂಗ್ರೆಸ್ ಬೆಂಬಲಿತ ಹೋರಾಟ’ ಎಂದು ಟೀಕಿಸಿತ್ತು.

ಗುಜರಾತ್‌ಗೆ ತೆರಳಿ ಹಾರ್ದಿಕ್‌ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮತ್ತು ಮಾಜಿ ಬಿಜೆಪಿಗ ಯಶವಂತ್‌ ಸಿನ್ಹಾ
ಗುಜರಾತ್‌ಗೆ ತೆರಳಿ ಹಾರ್ದಿಕ್‌ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮತ್ತು ಮಾಜಿ ಬಿಜೆಪಿಗ ಯಶವಂತ್‌ ಸಿನ್ಹಾ

ಇವರಲ್ಲದೆ ಮಾಜಿ ಪ್ರಧಾನಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಹಾರ್ದಿಕ್‌ ಹೋರಾಟವನ್ನು ಬೆಂಬಲಿಸಿದ್ದಾರೆ. ಈ ಸಂಬಂಧ ಸೆಪ್ಟೆಂಬರ್‌ 3ರಂದು ಅವರು ಹಾರ್ದಿಕ್‌ ಪಟೇಲ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದರು. ಪತ್ರದಲ್ಲಿ ಅವರು ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಆಯೋಗವನ್ನು ರಚಿಸುವಂತೆ ಮೋದಿಯನ್ನು ಒತ್ತಾಯಿಸಿದ್ದರು. ಜತೆಗೆ ಹಾರ್ದಿಕ್‌ ಆರೋಗ್ಯ ಹದಗೆಡುತ್ತಿದ್ದು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದರು.

ಇದೇ ಸಂದರ್ಭದಲ್ಲಿ ಹಾರ್ದಿಕ್‌ ಪಟೇಲ್‌ಗೆ ಬರೆದ ಪತ್ರದಲ್ಲಿ ಗೌಡರು, ತಮ್ಮ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಅಲ್ಲದೆ ‘ಮುಂದೆಯೂ ಉತ್ತಮ ವಿಚಾರಗಳಿಗೆ ಹೋರಾಡಲು ದೇಶಕ್ಕೆ ನಿಮ್ಮಂತ ಯುವ ಮತ್ತು ಶಕ್ತಿಯುತ ನಾಯಕರ ಅಗತ್ಯವಿದ್ದು ನಿರಶನವನ್ನು ಅಂತ್ಯಗೊಳಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದರು.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಗುಜರಾತ್‌ ಬಿಜೆಪಿ ನಿರಶನ ಅಂತ್ಯಗೊಳಿಸುವಂತೆ ಹಾರ್ದಿಕ್‌ ಪಟೇಲ್‌ಗೆ ಮನವಿ ಮಾಡಿಕೊಂಡಿದೆ. ಆದರೆ ಅವರು ಎತ್ತರುವ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆಗಳನ್ನು ನೀಡಿಲ್ಲ. ಮತ್ತು ಅವರ ಜತೆಗೆ ಮಾತುಕತೆಗೂ ಮುಂದಾಗಿಲ್ಲ.