samachara
www.samachara.com
ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನ ಸೆ.12ರವರೆಗೆ ಮುಂದುವರಿಕೆ
ಸುದ್ದಿ ಸಾರ

ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನ ಸೆ.12ರವರೆಗೆ ಮುಂದುವರಿಕೆ

ಐದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಸೆ. 12ರವರೆಗೆ ಗೃಹ ಬಂಧನದಲ್ಲಿ ಮುಂದುವರಿಸಲು ಸುಪ್ರೀಂಕೋರ್ಟ್‌ ಆದೇಶಿಸಿದೆ.

ಮೋದಿ ಹತ್ಯೆ ಸಂಚಿನ ಆರೋಪ ಹೊರಿಸಲಾಗಿರುವ ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನದ ಅವಧಿಯನ್ನು ಸುಪ್ರೀಂಕೋರ್ಟ್‌ ಸೆಪ್ಟೆಂಬರ್‌ 12ರವರೆಗೆ ವಿಸ್ತರಿಸಿದೆ.

ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪೊಲೀಸರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಲು ನಿರ್ದೇಶನ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ನ್ಯಾಯಪೀಠ ಸೂಚಿಸಿದೆ.

ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌, ಪಿ. ವರವರ ರಾವ್‌, ಗೌತಮ್‌ ನೌಲಖಾ, ಅರುಣ್‌ ಫೆರೀರಿಯ ಮತ್ತು ವೆರ್ನನ್‌ ಗೋನ್ಸಾಲ್ವೆನ್ಸ್‌ ಅವರನ್ನು ಪುಣೆ ಪೊಲೀಸರು ಆಗಸ್ಟ್‌ 28ರಂದು ಬಂಧಿಸಿದ್ದರು. ಸಂಶೋಧಕಿ ರೊಮಿಲಾ ಥಾಪರ್‌, ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ, ದುಶ್ಯಂತ್‌ ದವೆ ಸೇರಿದಂತೆ ಹಲವರು ಈ ಬಂಧನವನ್ನು ಪ್ರಶ್ನಿಸಿ ಮರುದಿನವೇ (ಆಗಸ್ಟ್‌ 29) ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು

ಬಂಧನ ಪ್ರಶ್ನಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಬಂಧಿಸಿರುವ ಐದೂ ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಸೆಪ್ಟೆಂಬರ್‌ 6ರವರೆಗೆ ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿತ್ತು. ಇಂದು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಬಂಧಿತರನ್ನು ಗೃಹ ಬಂಧನದಲ್ಲಿ ಮುಂದುವರಿಸಲು ಸೂಚಿಸಿದೆ.