ಉಡುಪಿಯಲ್ಲಿ ಬೂದಿ ಮಳೆ: ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ 7 ಪ್ರಶ್ನೆಗಳು
ಸುದ್ದಿ ಸಾರ

ಉಡುಪಿಯಲ್ಲಿ ಬೂದಿ ಮಳೆ: ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ 7 ಪ್ರಶ್ನೆಗಳು

ಬೂದಿ ಮಳೆ ಸಮಸ್ಯೆ ಮತ್ತು ಅದರ ಹಿಂದಿರುವ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅರ್ಥ ಮಾಡಿಕೊಳ್ಳಲು ಈ ಪ್ರಶ್ನೆಗಳು ಸಹಾಯಕವಾಗಿವೆ. ಈ ಕಾರಣಕ್ಕೆ ಅವನ್ನಿಲ್ಲಿ ನೀಡುತ್ತಿದ್ದೇವೆ.

ಉಡುಪಿಯಲ್ಲಿ ಆಘಾತಕಾರಿ ಬೂದಿ ಮಳೆ ಬಿದ್ದಿದ್ದು ಎನ್‌ಐಟಿಕೆ ವರದಿಯಿಂದ ಖಚಿತಪಟ್ಟಿದೆ. ಇದಾದ ಬೆನ್ನಲ್ಲೇ ಬುಧವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸಾಮಾಜಿಕ ಕಾರ್ಯಕರ್ತ ರಾಜಾರಾಂ ತಲ್ಲೂರು ಮತ್ತು ಮನೋ ವೈದ್ಯರಾದ ಡಾ. ಪಿ.ವಿ.ಭಂಡಾರಿ ಜಿಲ್ಲಾಡಳಿತ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 7 ಪ್ರಶ್ನೆಗಳನ್ನು ಕೇಳಿದ್ದಾರೆ.

ಒಟ್ಟಾರೆ ಬೂದಿ ಮಳೆ ಸಮಸ್ಯೆ ಮತ್ತು ಅದರ ಹಿಂದಿರುವ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅರ್ಥ ಮಾಡಿಕೊಳ್ಳಲು ಈ ಪ್ರಶ್ನೆಗಳು ಸಹಾಯಕವಾಗಿವೆ. ಈ ಕಾರಣಕ್ಕೆ ಅವನ್ನಿಲ್ಲಿ ನೀಡುತ್ತಿದ್ದೇವೆ.

1. ಎನ್ ಐ ಟಿ ಕೆ ತಪಾಸಣಾ ವರದಿಯಲ್ಲಿ ಬಿದ್ದಿರುವುದು ಬೂದಿ ಎಂದು ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಈವತ್ತಿನ ತನಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಏನೇನು ಕ್ರಮಗಳನ್ನು ಕೈಗೊಂಡಿದೆ?

2. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಉಲ್ಲೇಖಿಸಿ ಮಾಧ್ಯಮಗಳ ಒಂದು ವರ್ಗ ಬಿದ್ದದ್ದು ಬೂದಿ ಅಲ್ಲ ಮರಳು (ಸಿಲಿಕಾ) ಎಂದು ಸಾರ್ವಜನಿಕರ ಹಾದಿ ತಪ್ಪಿಸಿದೆ. ಇದನ್ನು ಯಾರು, ಯಾವ ಉದ್ದೇಶಕ್ಕಾಗಿ ಮಾಡಿದರು ಎಂಬ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ ಅಲ್ಲವೆ?

3. ಉಡುಪಿ ಜಿಲ್ಲಾಡಳಿತಕ್ಕೆ ಈ ಎನ್ಐಟಿಕೆ ತಪಾಸಣಾ ವರದಿ ತಲುಪಿದೆಯೆ? ತಲುಪಿದ್ದರೆ, ಈ ನಿಟ್ಟಿನಲ್ಲಿ ಈವತ್ತಿನ ತನಕ ಏನು ಕ್ರಮ ಕೈಗೊಳ್ಳಲಾಗಿದೆ?

4. ಮಾಹಿತಿ ಹಕ್ಕಿನಡಿ ಕೇಳಿದಾಗ, ಇಂತಹ ಮಳೆಯಾದರೆ ಅದನ್ನು ತಪಾಸಣೆ ನಡೆಸಲು, ಮಾದರಿ ಸಂಗ್ರಹಿಸಲು ತಮ್ಮಲ್ಲಿ ಯಾವುದೇ ಸ್ಟಾಂಡರ್ಡ್ ಪ್ರೊಸೀಜರ್ ಇಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಲಿಖಿತವಾಗಿ ಹೇಳಿದೆ. ಉಡುಪಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲೇ ಇಟ್ಟು ದೊಡ್ಡ ಉಷ್ಣ ವಿದ್ಯುತ್ ಸ್ಥಾವರದಂತ ಕಾರ್ಖಾನೆಗಳು ಇರುವಾಗ ಈ ರೀತಿಯ ಮುನ್ನೆಚ್ಚರಿಕೆ ವಹಿಸುವುದು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತದ ಕರ್ತವ್ಯವಲ್ಲವೇ?

5. ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ಹರಡುವ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮದ ಅಲರ್ಜಿ ತೊಂದರೆಗಳು, ಶ್ವಾಸಕೋಶದ ಅಲರ್ಜಿಯಂತಹ ತೊಂದರೆಗಳ ಬಗ್ಗೆ ಸಮಗ್ರ ಅಧ್ಯಯನ ಆಗಿದೆಯೆ? ಆಗಿರದಿದ್ದರೆ ಅದು ನಡೆಯಬೇಕು ಮತ್ತು ಈ ಸಮೀಕ್ಷಾ ವರದಿ ಸಾರ್ವಜನಿಕರಿಗೆ ಸಿಗುವಂತಾಗಬೇಕು.

6. ಉಷ್ಣ ವಿದ್ಯುತ್ ಸ್ಥಾವರದ ಮಾಲಿನ್ಯ ನಿಗಾ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಕಾರ್ಖಾನೆಯವರು ಇಲಾಖೆಗೆ ಸಲ್ಲಿಸುವ ಅಂಕಿ-ಅಂಶ, ರೀಡಿಂಗ್‌ಗಳು ವಾಸ್ತವದಲ್ಲಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಾಸ್‌ ಚೆಕ್‌ ಮಾಡಿದೆಯಾ? ಈ ಬಗ್ಗೆ ತಪಾಸಣೆ ನಡೆಸಿದೆಯೇ? ಎಂಬುದನ್ನು ಮಂಡಳಿಯವರು ಸಾರ್ವಜನಿಕರಿಗೆ ತಿಳಿಸಬೇಕು. ಯಾಕೆಂದರೆ ಮಂಡಳಿ ಕೊಟ್ಟಿರುವ ಪರವಾನಗಿಯಲ್ಲಿ ಈ ರೀತಿಯ ತಪಾಸಣೆಗಳನ್ನು ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.

7. ಮಾಲಿನ್ಯ ನಿಯಂತ್ರಣ ಮಂಡಳಿ ಯುಪಿಸಿಎಲ್ ಗೆ ನೀಡಿರುವ ಪರವಾನಗಿ ಪತ್ರದಲ್ಲಿ ಹಾಕಿರುವ ಷರತ್ತುಗಳಲ್ಲಿ (ಜನರಲ್ ಕಂಡೀಷನ್ಸ್ ಎಚ್-5) ಅಕಸ್ಮಾತ್ ಆಗಿ ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಕಲುಷಿತ ವಸ್ತುಗಳು ವಾತಾವರಣಕ್ಕೆ ಬಿಡುಗಡೆಯಾದರೆ, ಕಾರ್ಖಾನೆ ಆ ಬಗ್ಗೆ ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿಗೆ ತುರ್ತು ಮಾಹಿತಿ ನೀಡಬೇಕು ಎಂದಿದೆ. ಅಂತಹ ಮಾಹಿತಿ ಮಂಡಳಿಗೆ ಕಾರ್ಖಾನೆಯಿಂದ ಬಂದಿದೆಯೆ?

ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಳಿರುವ ಈ ಪ್ರಶ್ನೆಗಳಿಗೆ ಜಿಲ್ಲಾಡಳಿತ ಆದಷ್ಟು ಬೇಗ ಉತ್ತರಿಸುವ ಮೂಲಕ ಜನರ ಆತಂಕವನ್ನು ದೂರ ಮಾಡಬೇಕಿದೆ.

Also read: ಇದು ಅದಾನಿ ‘ಪವರ್’: ಪ್ರಕೃತಿಗೆ ವಿಷ ಉಣಿಸಿ ಬೂದಿ ಮಳೆ ಬರಿಸಿದ ಉಡುಪಿ ಯುಪಿಸಿಎಲ್‌