‘ಧೂಮ್’ ಸಿನಿಮಾ ಸ್ಟೈಲಲ್ಲಿ ನಿಜಾಮನ 50 ಕೋಟಿಯ ‘ಲಂಚ್‌ ಬಾಕ್ಸ್‌’ ಕಳ್ಳತನ
ಸುದ್ದಿ ಸಾರ

‘ಧೂಮ್’ ಸಿನಿಮಾ ಸ್ಟೈಲಲ್ಲಿ ನಿಜಾಮನ 50 ಕೋಟಿಯ ‘ಲಂಚ್‌ ಬಾಕ್ಸ್‌’ ಕಳ್ಳತನ

ನಿಜಾಮರ ಬೆಲೆಬಾಳುವ ವಸ್ತುಗಳ ಕಳ್ಳತನ ಇದೇ ಮೊದಲೇನೂ ಅಲ್ಲ. 10 ವರ್ಷಗಳ ಹಿಂದೆ ರಾಜ ಕುಟುಂಬಕ್ಕೆ ಸೇರಿದ ಬೆಲೆ ಬಾಳುವ ಖಡ್ಗವನ್ನು ಕಳ್ಳತನ ಮಾಡಲಾಗಿತ್ತು. ಅದಿನ್ನೂ ಪತ್ತೆಯಾಗಿಲ್ಲ.

ನಿಜಾಮರ ರಾಜ ಕುಟುಂಬಕ್ಕೆ ಸೇರಿದ ಸುಮಾರು 50 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರ ಖಚಿತ ಚಿನ್ನದ ಊಟದ ಡಬ್ಬಿಯೊಂದು ಹೈದರಾಬಾದ್‌ನ ಮ್ಯೂಸಿಯಂನಿಂದ ಕಳ್ಳತನವಾಗಿದೆ. ಧೂಮ್‌ ಸಿನಿಮಾ ಮಾದರಿಯಲ್ಲಿ ನಡೆದ ಈ ಕಳ್ಳತನ ಪ್ರಕರಣ ನಗರ ಪೊಲೀಸರ ನಿದ್ದೆಗೆಡಿಸಿದೆ.

ಊಟದ ಡಬ್ಬಿ ಜತೆಗೆ ದುಬಾರಿ ಕೆಂಪು ಹರಳು, ಚಿನ್ನದ ಚಹಾ ಲೋಟ, ತಟ್ಟೆ ಹಾಗೂ ಚಮಚವೂ ಕಳ್ಳತನವಾಗಿದೆ. ಇವುಗಳ ತೂಕವೇ ಸುಮಾರು ಮೂರು ಕೆಜಿಯಾಗಿದ್ದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 7 ಮಿಲಿಯನ್‌ ಬೆಲೆಬಾಳುತ್ತಿತ್ತು ಎಂದು ಅಂದಾಜಿಸಲಾಗಿದೆ. ಇವೆಲ್ಲಾ ನಿಜಾಮರ ಕೊನೆಯ ರಾಜ ಮಿರ್‌ ಒಸ್ಮಾನ್‌ ಅಲಿ ಖಾನ್‌ ಸೇರಿದ್ದಾಗಿದೆ.

ದೇಶದ ಅತೀ ದೊಡ್ಡ ಪ್ರಾಂತೀಯ ರಾಜ್ಯ ಹೈದರಾಬಾದ್‌ನ ನಿಜಾಮನಾಗಿದ್ದ ಮಿರ್‌ ಒಸ್ಮಾನ್‌ ಅಲಿ ಖಾನ್‌ ಒಂದು ಕಾಲದಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದ. ಈತನ ಬಳಿ ಐಶಾರಾಮಿ ವಸ್ತುಗಳ ದೊಡ್ಡ ಸಂಗ್ರಹಗಾರವೇ ಇತ್ತು. ಅವುಗಳಲ್ಲಿ ಮೊಟ್ಟೆ ಗಾತ್ರದ ಜಾಕೋಬ್‌ ವಜ್ರ, ವಿಶಿಷ್ಟ ವಿನ್ಯಾಸದ ಆಭರಣಗಳು ಸೇರಿದ್ದವು. ತನ್ನ 50ನೇ ವರ್ಷಾಚರಣೆ ವೇಳೆ 1937ರಲ್ಲಿ ಆತನಿಗೆ ಈ ಎಲ್ಲಾ ದುಬಾರಿ ಉಡುಗೊರೆಗಳನ್ನು ನೀಡಲಾಗಿತ್ತು.

ಹೈದರಾಬಾದ್‌ನ ಕೊನೆಯ ನಿಜಾಮ ಮಿರ್‌ ಮಿರ್‌ ಒಸ್ಮಾನ್‌ ಅಲಿ ಖಾನ್‌
ಹೈದರಾಬಾದ್‌ನ ಕೊನೆಯ ನಿಜಾಮ ಮಿರ್‌ ಮಿರ್‌ ಒಸ್ಮಾನ್‌ ಅಲಿ ಖಾನ್‌
/ಜೆಟ್ಟಿ

1967 ಖಾನ್ ಸಾವನ್ನಪ್ಪಿದ ನಂತರ ಆತ ವಾಸಿಸುತ್ತಿದ್ದ ‘ನಿಜಾಮ್‌ ಅರಮನೆ’ಯನ್ನು ವಸ್ತು ಸಂಗ್ರಹಾಲಯವಾಗಿ ಬದಲಾಯಿಸಲಾಗಿತ್ತು. ‘ನಿಜಾಮ್‌ ಮ್ಯೂಸಿಯಂ’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡ ಈ ವಸ್ತು ಸಂಗ್ರಹಾಲಯ 2000ನೇ ಇಸವಿಯಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿತ್ತು.

ಇದೇ ಮ್ಯೂಸಿಯಂಗೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ಬೆಲೆ ಕಟ್ಟಲಾಗದ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳ್ಳತನದ ವೇಳೆ ಚಾಣಾಕ್ಷತೆ ತೋರಿರುವ ಕಳ್ಳರು ಮ್ಯೂಸಿಯಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಬೇರೆ ದಿಕ್ಕಿಗೆ ತಿರುಗಿಸಿದ್ದಾರೆ. ಹೀಗಾಗಿ ಇಡೀ ಕಳ್ಳತನದ ಒಂದೇ ಒಂದು ದೃಶ್ಯಾವಳಿಗಳೂ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ.

ಬೆಲೆಬಾಳುವ ವಸ್ತುಗಳನ್ನು ಬಲಶಾಲಿ ಗಾಜಿನ ಬಾಗಿಲಿನ ಹಿಂಭಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಕಳ್ಳರು ಗಾಜಿನ ಬಾಗಿಲನ್ನು ಒಡೆಯದೆ ಸ್ಕ್ರೂಗಳನ್ನು ಉಪಾಯದಿಂದ ಬಿಚ್ಚಿ ಲಂಚ್‌ ಬಾಕ್ಸ್‌, ಚಿನ್ನದ ತಟ್ಟೆ, ಲೋಟ ಚಮಚಗಳ ಸಮೇತ ಪರಾರಿಯಾಗಿದ್ದಾರೆ.

ಈ ಕಳ್ಳತನವನ್ನು ಇಬ್ಬರು ಕಳ್ಳರು ಮಾಡಿರಬಹುದು ಎಂದು ಹೈದರಾಬಾದ್ ಪೊಲೀಸರು ಅಂದಾಜಿಸಿದ್ದಾರೆ. ಆದರೆ, ಸಿನಿಮಾ ಮಾದರಿಯಲ್ಲಿ ಕಳ್ಳರು ತೋರಿರುವ ಚಮಾತ್ಕಾರ ಪೊಲೀಸರಿಗೆ ಹೆಚ್ಚಿನ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಪ್ರಕರಣ ಭೇದಿಸುವುದು ತಲೆನೋವು ತಂದಿದೆ.

ಹಾಗಂಥ ನಿಜಾಮರ ಬೆಲೆಬಾಳುವ ವಸ್ತುಗಳ ಕಳ್ಳತನ ಇದೇ ಮೊದಲೇನೂ ಅಲ್ಲ. 10 ವರ್ಷಗಳ ಹಿಂದೆ ರಾಜ ಕುಟುಂಬಕ್ಕೆ ಸೇರಿದ ಬೆಲೆ ಬಾಳುವ ಖಡ್ಗವನ್ನು ಕಳ್ಳತನ ಮಾಡಲಾಗಿತ್ತು. ಅದಿನ್ನೂ ಪತ್ತೆಯಾಗಿಲ್ಲ. ಇದರ ಮಧ್ಯದಲ್ಲೇ 7 ಮಿಲಿಯನ್‌ ಡಾಲರ್‌ ಮೌಲ್ಯದ ಲಂಚ್‌ ಬಾಕ್ಸ್‌ ಕಳ್ಳತನವಾಗಿದೆ.