ಜಪಾನ್‌ಗೆ ಅಪ್ಪಳಿಸಿದ ಜೆಬಿ ಚಂಡಮಾರುತ; ಬಿರುಗಾಳಿಗೆ ಮನೆ- ಮಠ ಅಕ್ಷರಶಃ ದೂಳೀಪಟ
ಸುದ್ದಿ ಸಾರ

ಜಪಾನ್‌ಗೆ ಅಪ್ಪಳಿಸಿದ ಜೆಬಿ ಚಂಡಮಾರುತ; ಬಿರುಗಾಳಿಗೆ ಮನೆ- ಮಠ ಅಕ್ಷರಶಃ ದೂಳೀಪಟ

ಜಪಾನ್‌ಗೆ ಅಪ್ಪಳಿಸಿರುವ ಜೆಬಿ ಚಂಡಮಾರುತ ಜಪಾನೀಯರ ಬದುಕನ್ನು ಅತಂತ್ರವಾಗಿಸಿದೆ. ಜನ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಜಪಾನ್‌ನಲ್ಲಿ ಎದ್ದಿರುವ ಜೆಬಿ ಚಂಡಮಾರುತದಿಂದಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದಿಂದಾಗಿ ನೂರಾರು ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಈವರೆಗೆ ಜೆಬಿ ಚಂಡಮಾರುತದಿಂದಾಗಿ ಆರು ಮಂದಿ ಮೃತಪಟ್ಟಿದ್ದಾರೆ.

ಭಾರೀ ಮಳೆಯ ಜತೆಗೆ 200 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಬಿರುಗಾಳಿಗೆ ಕಟ್ಟಡಗಳ ಭಾಗಗಳು, ವಿದ್ಯುತ್‌ ಕಂಬಗಳು, ಮರಗಳು ಉರುಳಿ ಬೀಳುತ್ತಿವೆ. ತೀರ ಪ್ರದೇಶಗಳಲ್ಲಿ ಸಮುದ್ರದ ಅಲೆಗಳು ಆಕಾಶದೆತ್ತರಕ್ಕೆ ಏಳುತ್ತಿವೆ.

ಕೊರಿಯನ್‌ ಭಾಷೆಯಲ್ಲಿ ‘ಜೆಬಿ’ ಎಂದರೆ ನುಂಗಿಹಾಕುವುದು ಎಂಬ ಅರ್ಥವಿದೆ. ಎದುರಿಗೆ ಸಿಕ್ಕಿದ್ದೆಲ್ಲವನ್ನೂ ನುಂಗಿಹಾಕುವಂತೆ ಅಪ್ಪಳಿಸುತ್ತಿರುವ ಈ ಚಂಡಮಾರುತಕ್ಕೆ ಜಪಾನ್‌ನಲ್ಲಿ ಜೆಬಿ ಎಂಬ ಹೆಸರು ನೀಡಲಾಗಿದೆ.

ಮನೆಗಳ ಛಾವಣಿಗಳು ಹಾರಿಹೋಗುವ, ಭೂಕುಸಿತ ಉಂಟಾಗುವ, ತೀರ ಪ್ರದೇಶಗಳು ಮುಳುಗುವ ಸನ್ನಿವೇಶವನ್ನು ಈ ಜೆಬಿ ಚಂಡಮಾರುತ ಸೃಷ್ಟಿಸುತ್ತಲೇ ಬಂದಿದೆ. 25 ವರ್ಷಗಳ ಬಳಿಕ ಈ ಪ್ರಮಾಣದ ಭಾರೀ ಬಿರುಗಾಳಿಯ ಚಂಡಮಾರುತವನ್ನು ಜಪಾನ್‌ ಕಾಣುತ್ತಿದೆ.

ಚಂಡಮಾರುತದಿಂದಾಗಿ ರಸ್ತೆ ಮೇಲೆ ಚಲಿಸುತ್ತಿರುವ ವಾಹನಗಳು, ತೀರ ಪ್ರದೇಶದಲ್ಲಿ ಲಂಗರು ಹಾಕಿರುವ ದೋಣಿಗಳು, ಮನೆಗಳ ಛಾವಣಿ, ದೊಡ್ಡ ಜಾಹೀರಾತು ಫಲಕಗಳು ಅಕ್ಷರಶಃ ತೂರಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.