2007ರ ಹೈದ್ರಾಬಾದ್ ಅವಳಿ ಸ್ಫೋಟ ಪ್ರಕರಣ; ಇಬ್ಬರು ತಪ್ಪಿತಸ್ಥರು, ಇಬ್ಬರು ಖುಲಾಸೆ
ಸುದ್ದಿ ಸಾರ

2007ರ ಹೈದ್ರಾಬಾದ್ ಅವಳಿ ಸ್ಫೋಟ ಪ್ರಕರಣ; ಇಬ್ಬರು ತಪ್ಪಿತಸ್ಥರು, ಇಬ್ಬರು ಖುಲಾಸೆ

ಸುದೀರ್ಘ 11 ವರ್ಷಗಳ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ ಅನೀಕ್ ಶಫೀಕ್ ಸಯೀದ್ ಮತ್ತು ಇಸ್ಲಾಮಿಕ್ ಚೌಧರಿ ಎಂಬ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

ಹನ್ನೊಂದು ವರ್ಷಗಳ ಹಿಂದೆ ಹೈದ್ರಾಬಾದ್‌ನಲ್ಲಿ ನಡೆದಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರನ್ನು ದೋಷಿಗಳು ಎಂದು ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಆಗಸ್ಟ್ 25, 2007ರಲ್ಲಿ ನಡೆದಿದ್ದ ಈ ಘಟನೆಯಲ್ಲಿ 42 ಮಂದಿ ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಸುದೀರ್ಘ 11 ವರ್ಷಗಳ ವಿಚಾರಣೆ ನಡೆಸಿದ ಎನ್ಐಎ ನ್ಯಾಯಾಲಯ ಅನೀಕ್ ಶಫೀಕ್ ಸಯೀದ್ ಮತ್ತು ಇಸ್ಲಾಮಿಕ್ ಚೌಧರಿ ಎಂಬ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಜತೆಗೆ ಇಬ್ಬರನ್ನು ಕೋರ್ಟ್‌ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಪ್ರಕರಣ ನಡೆದು ಬಂದ ಹಾದಿ

ಆಗಸ್ಟ್ 25, 2007 ರಂದು ಸಂಜೆ 7.45ಕ್ಕೆ ಎರಡು ಬಾಂಬ್‌ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದವು. ಇದರಲ್ಲಿ ಮೊದಲ ಸ್ಫೋಟ ಹುಸೇನ್ ಸಾಗರ್ ಸರೋವರದ ಸಮೀಪದಲ್ಲಿರುವ ಲುಂಬಿಣಿ ಪಾರ್ಕ್‌ನ ಲೇಸರ್‌ ಶೋ ಸಭಾಂಗಣದಲ್ಲಿ ನಡೆದಿತ್ತು. ಇದರಲ್ಲಿ 32 ಜನರು ಸಾವನ್ನಪ್ಪಿದ್ದರು. ಎರಡನೇ ಬಾಂಬ್‌ ಸ್ಫೋಟ ಗೋಕುಲ್‌ ಚಾಟ್ಸ್‌ನಲ್ಲಿ ನಡೆದಿತ್ತು. ಇಲ್ಲಿ 10 ಜನರು ಸಾವನ್ನಪ್ಪಿದ್ದರು. ಈ ಎರಡು ಘಟನೆಗಳಲ್ಲಿ 58 ಮಂದಿ ಗಾಯಗೊಂಡಿದ್ದರು. ಇದೇ ವೇಳೆ ಸ್ಫೋಟಗೊಳ್ಳದ ಬಾಂಬೊಂದು ದಿಲ್ಸುಕ್‌ನಗರದ ಸೇತುವೆಯ ಕೆಳಗೆ ಪತ್ತೆಯಾಗಿತ್ತು.

ಆಗಸ್ಟ್ 27, 2007: ಘಟನೆಗೆ ಸಂಬಂಧಿಸಿದಂತೆ ಹೈದ್ರಾಬಾದ್ ಪೊಲೀಸರ ಕೌಂಟರ್‌ ಇಂಟಲಿಜೆನ್ಸ್‌ ವಿಭಾಗ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಪ್ರಾಥಮಿಕ ತನಿಖೆಯ ನಂತರ ಘಟನೆಯಲ್ಲಿ ನೈಟ್ರೇಟ್ ಆಧಾರಿತ ನಿಯೋಜಲ್-90 ರಾಸಾಯನಿಕ ಬಳಸಿ ಬಾಂಬ್‌ಗಳನ್ನು ತಯಾರಿಸಲಾಗಿದೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು. ಈ ಬಾಂಬ್‌ ಸ್ಫೋಟಗಳ ಹಿಂದೆ ಬಾಂಗ್ಲಾದೇಶ ಮೂಲದ ಹರ್ಕತ್‌-ಉಲ್‌-ಜಿಹಾದ್‌-ಅಲ್‌-ಇಸ್ಲಾಮಿ ಸಂಘಟನೆಯ ಕೈವಾಡ ಎಂದು ಆರಂಭದಲ್ಲಿ ಪೊಲೀಸರು ಶಂಕಿಸಿದ್ದರು.

ಅಕ್ಟೋಬರ್ 10, 2008: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಮುಂಬೈನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಪೊಲೀಸರ ತಂಡ ಮಹಮ್ಮದ್ ಸಾದಿಕ್, ಅನಿಕ್ ಸೈಯದ್, ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನ್ಸರ್ ಅಹ್ಮದ್‌ರನ್ನು ಬಂಧಿಸಿತ್ತು. ನಂತರ ನಡೆದ ವಿಚಾರಣೆ ವೇಳೆ ಹೈದ್ರಾಬಾದ್ ಬಾಂಬ್ ಸ್ಫೋಟದಲ್ಲಿ ಈ ನಾಲ್ವರು ತಮ್ಮ ಪಾತ್ರ ಇರುವುದಾಗಿ ಒಪ್ಪಿಕೊಂಡಿದ್ದರು. ಮತ್ತು ಇದರ ಹಿಂದೆ ಇರುವ ಸೂತ್ರದಾರ ರಿಯಾಜ್ ಭಟ್ಕಳ್ ಎಂದು ಬಾಯ್ಬಿಟ್ಟಿದ್ದರು. ಇಕ್ಬಾಲ್ ಭಟ್ಕಲ್ ಹೆಸರನ್ನೂ ಇವರು ಈ ಸಂದರ್ಭದಲ್ಲಿ ಹೇಳಿದ್ದರು.

ಫೆಬ್ರವರಿ 9, 2009: ಆರೋಪಿಗಳು ಹೈದರಾಬಾದ್ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದವರಾಗಿದ್ದರಿಂದ ನಾಲ್ಕೂ ಜನರನ್ನು ಮುಂಬೈ ಎಟಿಎಸ್‌ ಪೊಲೀಸರು ಹೈದ್ರಾಬಾದ್‌ ಪೊಲೀಸರಿಗೆ ಹಸ್ತಾಂತರಿಸಿದ್ದರು.

ಜೂನ್ 21, 2009: ಕೌಂಟರ್‌ ಇಂಟಲಿಜೆನ್ಸ್‌ ವಿಭಾಗವು ಮೊಹಮ್ಮದ್ ಸಾದಿಕ್, ಅನೀಕ್ ಸೈಯದ್, ಅಕ್ಬರ್ ಇಸ್ಮಾಯಿಲ್ ಚೌಧರಿ, ಅನ್ಸಾರ್ ಅಹ್ಮದ್, ರಿಯಾಜ್ ಭಟ್ಕಲ್, ಇಕ್ಬಾಲ್ ಭಟ್ಕಲ್ ಹಾಗೂ ಅಮೀರ್ ರಾಜಾ ವಿರುದ್ಧ 1,125 ಪುಟದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ ರಿಯಾಜ್, ಇಕ್ಬಾಲ್ ಮತ್ತು ಅಮೀರ್‌ ತಲೆ ಮರೆಸಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ಪ್ರಕರಣದ ವಿಚಾರಣೆಗಾಗಿ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ವಿಶೇಷ ನ್ಯಾಯಾಲಯವನ್ನು ತೆರೆಯಲಾಗಿತ್ತು. ಇಲ್ಲಿ ಬರೋಬ್ಬರಿ 11 ವರ್ಷಗಳ ಕಾಲ ವಿಚಾರಣೆ ನಡೆಯಿತು.

ಆಗಸ್ಟ್ 7, 2018: ಎರಡೂ ಕಡೆಯ ವಾದ ಪ್ರತಿವಾದಗಳು ಮುಗಿದು ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2018ರ ಆಗಸ್ಟ್‌ 27ಕ್ಕೆ ಮುಂದೂಡಿತ್ತು. ಅಂದು ನ್ಯಾಯಾಲಯ ಪ್ರಕರಣದ ತೀರ್ಪು ನೀಡಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಪ್ರಕರಣದ ತೀರ್ಪನ್ನು ಸೆಪ್ಟೆಂಬರ್‌ 4ನೇ ತಾರೀಕಿಗೆ ಮುಂದೂಡಲಾಗಿತ್ತು.

ಸೆಪ್ಟೆಂಬರ್ 4, 2018: ಇದೀಗ ಪ್ರಕರಣದಲ್ಲಿ ಅನೀಕ್ ಸೈಯದ್ ಹಾಗೂ ಅಕ್ಬರ್ ಇಸ್ಮಾಯಿಲ್ ಚೌಧರಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇವರಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಸೋಮವಾರ ಪ್ರಕಟಿಸಲಿದೆ. ಇದೇ ವೇಳೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮಹಮ್ಮದ್ ಸಾದಿಕ್ ಮತ್ತು ಅನ್ಸಾರ್ ಅಹ್ಮದ್ ಎಂಬವರನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣದಿಂದ ಕೈಬಿಡಲಾಗಿದೆ.