ಕೇರಳದಲ್ಲಿ ಅಂತ್ಯವಾದ ಪ್ರವಾಹ: ಆರಂಭವಾಯ್ತು ಇಲಿಜ್ವರದ ಸಪ್ತಾಹ
ಸುದ್ದಿ ಸಾರ

ಕೇರಳದಲ್ಲಿ ಅಂತ್ಯವಾದ ಪ್ರವಾಹ: ಆರಂಭವಾಯ್ತು ಇಲಿಜ್ವರದ ಸಪ್ತಾಹ

ಕಳೆದೆರಡು ದಿನದಲ್ಲಿ ಅಪಾಯಕಾರಿ ಇಲಿ ಜ್ವರ ಕೇರಳದಲ್ಲಿ 11 ಜನರನ್ನು ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಐದು ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ.

ವಿನಾಶಕಾರಿ ಪ್ರಾಕೃತಿಕ ವಿಕೋಪದಿಂದ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲೀಗ ಇಲಿ ಜ್ವರದ ಭೀತಿ ಹಬ್ಬಿದೆ. ಕಳೆದೆರಡು ದಿನದಲ್ಲಿ ಅಪಾಯಕಾರಿ ಇಲಿ ಜ್ವರ 11 ಜನರನ್ನು ಬಲಿ ಪಡೆದಿದ್ದು, ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಲಾಗಿದೆ.

ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂ ಕುಸಿತದಲ್ಲಿ 400ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದರು. ಲಕ್ಷಾಂತರ ಜನ ನಿರಾಶ್ರಿತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಈಗ ಮನೆಗಳಿಗೆ ಮರಳುತ್ತಿದ್ದಂತೆ ಇಲಿ ಜ್ವರದ ಭೀತಿ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಪ್ರವಾಹ ಇಳಿದ ಮೇಲೆ ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತವೆ.

ಈ ಹಿನ್ನೆಲೆಯಲ್ಲಿ, ಪ್ರವಾಹಕ್ಕೆ ಗುರಿಯಾದ ಜನರು ಮುನ್ನೆಚ್ಚರಿಕಾ ಕ್ರಮವಾಗಿ ಚುಚ್ಚು ಮದ್ದುಗಳನ್ನು ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರವಾಹದ ನಂತರ ಇಂಥಹದ್ದೊಂದು ರೋಗ ಹಬ್ಬುವ ಬಗ್ಗೆ ಮೊದಲೇ ಅಂದಾಜಿಸಿದ್ದ ರಾಜ್ಯದ ಆರೋಗ್ಯ ಇಲಾಖೆ, ‘ಸದ್ಯ ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿದೆ. ತುರ್ತು ಪರಿಸ್ಥಿತಿಯ ಯಾವ ಲಕ್ಷಣಗಳೂ ಇಲ್ಲ’ ಎಂದು ಹೇಳಿದೆ.

ಈ ಕುರಿತು ಬಿಬಿಸಿಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಆರೋಗ್ಯಾಧಿಕಾರಿ ಡಾ. ಇಕ್ಬಾಲ್‌ ಬಾಬುಕುಂಜು, "ಪ್ರವಾಹದ ನಂತರ ನಾವು ನೀರಿನ ಮೂಲಕ ಬರಬಹುದಾದ ಕಾಲರಾ, ಟೈಫಾಯ್ಡ್‌, ಡಯೇರಿಯಾ, ಹೆಪಟೈಟಿಸ್‌ ಮತ್ತು ಇಲಿ ಜ್ವರ ಹುಟ್ಟಿಕೊಳ್ಳಬಹುದು ಎಂದು ಮೊದಲೇ ಅಂದಾಜಿಸಿದ್ದೆವು,” ಎಂದಿದ್ದಾರೆ. ಸದ್ಯ, ಜನರು ನಿರಾಶ್ರಿತ ಕೇಂದ್ರಗಳಿಂದ ಮನೆಗಳಿಗೆ ವಾಪಾಸಾಗುತ್ತಿದ್ದಾರೆ. ನೀರು ನಿಂತ ಮನೆಗಳನ್ನು ಕ್ಲೋರಿನ್‌ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಈ ಮೂಲಕ ರೋಗ ಬರದಂತೆ ತಡೆಯಲಾಗುತ್ತಿದೆ ಎಂದವರು ವಿವರಿಸಿದ್ದಾರೆ.

ಇದರ ಜತೆಗೆ "ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಪೆನ್ಸಿಲಿನ್‌ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಿಗೂ ಇಲಿ ಜ್ವರಕ್ಕೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ,” ಎಂದು ಕೇರಳ ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಸರಿತಾ ತಿಳಿಸಿದ್ದಾರೆ.

ಇಲಿ ಜ್ವರದ ಭೀತಿ:

ವೈಜ್ಞಾನಿಕ ಭಾಷೆಯಲ್ಲಿ ಇಲಿ ಜ್ವರವನ್ನು ಲೆಫ್ಟೊಸ್ಪಿರೋಸಿಸ್ ಎಂದು ಕರೆಯಲಾಗುತ್ತದೆ. ಇಲಿ ಮತ್ತು ಪ್ರಾಣಿಗಳ ದ್ರವಗಳ ಮೂಲಕ ಮನುಷ್ಯ ದೇಹವನ್ನು ಗಾಯಗಳು, ಕಣ್ಣು, ಮೂಗು ಮತ್ತು ಬಾಯಿ ಮೂಲಕ ಲೆಪ್ಟೋಸ್ಪಿರೊ ಬ್ಯಾಕ್ಟೀರಿಯಾ ಪ್ರವೇಶಿಸುತ್ತದೆ. ನಂತರ ಅದು ಜ್ವರಕ್ಕೆ ಕಾರಣವಾಗುತ್ತದೆ.

ಕೇರಳದ ವಿಚಾರಕ್ಕೆ ಬಂದಾಗ ಮುಖ್ಯವಾಗಿ ಪ್ರವಾಹದ ನೀರಿನಲ್ಲಿ ಇಲಿಗಳು ಮುಳುಗಿ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಹರಡಿದೆ. ಇದೇ ನೀರಿನ ಮೂಲಕ ಮೂಲಕ ಲೆಪ್ಟೊಸ್ಪಿರೋ ಬ್ಯಾಕ್ಟೀರಿಯಾ ಮನುಷ್ಯ ಚರ್ಮದ ಒಳ ಹೊಕ್ಕು ದೇಹವನ್ನು ಪ್ರವೇಶಿಸುತ್ತದೆ.

ಈ ಜ್ವರಕ್ಕೆ ಗುರಿಯಾದವರಲ್ಲಿ ಜ್ವರ, ವಾಕರಿಕೆ, ಸ್ನಾಯು ಸೆಳೆತ, ವಾಂತಿ ಮತ್ತು ಅತಿಸಾರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕಂಡ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ಇಂಥಹ ಆರೋಗ್ಯ ಲಕ್ಷಣಗಳು ಕೇರಳದ ಪ್ರವಾಹ ಪೀಡಿತ 13 ಜಿಲ್ಲೆಗಳ ಪೈಕಿ ಐದು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ.

ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆ:

ಕೇರಳದ ಆರೋಗ್ಯ ಇಲಾಖೆ ಇಂಥಹದ್ದೊಂದು ರೋಗದ ಪರಿಸ್ಥಿತಿಯನ್ನು ಎದುರಿಸಲು ಮೊದಲೇ ಸಿದ್ಧವಾಗಿತ್ತು. ಇಂತಹದೇ ಪ್ರವಾಹ ಕರ್ನಾಟಕದ ಕೊಡಗು ಮತ್ತು ಇತರ ಭಾಗಗಳಲ್ಲಿಯೂ ಸಂಭವಿಸಿದೆ. ಅದೃಷ್ಟಕ್ಕೆ ಇಲ್ಲಿ ಇಲಿ ಜ್ವರದಂಥ ಯಾವುದೇ ರೋಗಗಳು ಕಾಣಿಸಿಕೊಂಡಿಲ್ಲವಾದರೂ, ಈ ರೀತಿಯ ರೋಗವನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಬೇಕಿದೆ.