ವಿವಾದದ ನಡುವೆಯೇ ಭಾರತದ ನಭದಲ್ಲಿ ರಫೇಲ್‌ ವಿಮಾನಗಳ ಅಭ್ಯಾಸ ಹಾರಾಟ
ಸುದ್ದಿ ಸಾರ

ವಿವಾದದ ನಡುವೆಯೇ ಭಾರತದ ನಭದಲ್ಲಿ ರಫೇಲ್‌ ವಿಮಾನಗಳ ಅಭ್ಯಾಸ ಹಾರಾಟ

ಕಾಂಗ್ರೆಸ್‌ ರಫೇಲ್‌ ಹಗರಣದ ಬಗ್ಗೆ ಆರೋಪಗಳನ್ನು ಮಾಡುತ್ತಿರುವ ನಡುವೆಯೇ ಭಾರತದ ಆಕಾಶದಲ್ಲಿ ರಫೇಲ್‌ ಜೆಟ್‌ಗಳು ಅಭ್ಯಾಸ ನಡೆಸುತ್ತಿವೆ.

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ಕಾಂಗ್ರೆಸ್‌ ದಿನ ನಿತ್ಯ ಆರೋಪ ಮಾಡುತ್ತಿರುವ ಮಧ್ಯೆಯೇ ಭಾರತಕ್ಕೆ ಬಂದಿರುವ ಮೂರು ರಫೇಲ್‌ ಜೆಟ್‌ಗಳು ಭಾರತೀಯ ವಾಯು ಪಡೆಯ ಜೆಟ್‌ಗಳೊಂದಿಗೆ ಗ್ವಾಲಿಯರ್‌ ಮತ್ತು ಆಗ್ರಾ ವಾಯುನೆಲೆಯಲ್ಲಿ ಅಭ್ಯಾಸ ನಡೆಸುತ್ತಿವೆ.

ಬರುವ ದಿನಗಳಲ್ಲಿ ಭಾರತೀಯ ವಾಯು ಪಡೆಯ ಪೈಲಟ್‌ಗಳು ರಫೇಲ್‌ ಜೆಟ್‌ಗಳನ್ನು ಚಾಲನೆ ಮಾಡಲಿದ್ದಾರೆ. ಒಪ್ಪಂದದಂತೆ ಮೊದಲ ಹಂತದ ರಫೇಲ್‌ ಜೆಟ್‌ಗಳು ಮುಂದಿನ ವರ್ಷದ ಮಧ್ಯಂತರದಲ್ಲಿ ಭಾರತಕ್ಕೆ ಹಸ್ತಾಂತರವಾಗಲಿವೆ ಎನ್ನಲಾಗಿದೆ.

ರಫೇಲ್‌ ಜೆಟ್‌ಗಳೊಂದಿಗೆ ಭಾರತಕ್ಕೆ ಬಂದಿರುವ ಫ್ರೆಂಚ್‌ ವಾಯು ಪಡೆಯ ಪೈಲಟ್‌ಗಳು ಮೂರು ದಿನಗಳ ಕಾಲ ಭಾರತದಲ್ಲಿ ಯುದ್ಧ ವಿಮಾನಗಳ ಜಂಟಿ ಅಭ್ಯಾಸ ನಡೆಸಲಿದ್ದಾರೆ. “ಫ್ರಾನ್ಸ್‌ ಮತ್ತು ಭಾರತದ ನಡುವಿನ ಬಾಂಧವ್ಯ ವೃದ್ಧಿಯ ಭಾಗವಾಗಿ ವಾಯು ಪಡೆಯ ಈ ಅಭ್ಯಾಸ ನಡೆಯಲಿದೆ” ಎಂದು ನವದೆಹಲಿಯಲ್ಲಿರುವ ಫ್ರೆಂಚ್‌ ರಾಯಭಾರ ಕಚೇರಿ ತಿಳಿಸಿದೆ.

ರಫೇಲ್‌ ಜೆಟ್‌ಗಳು ಭಾರತದ ಆಕಾಶದಲ್ಲಿ ಹಾರಾಡುತ್ತಿರುವುದು ಇದೇ ಮೊದಲೇನಲ್ಲ. ಬೆಂಗಳೂರಿನ ಏರೋ ಇಂಡಿಯಾ ಸೇರಿದಂತೆ ಭಾರತದ ಹಲವು ಏರ್‌ ಷೋಗಳಲ್ಲಿ ರಫೇಲ್‌ ಜೆಟ್‌ಗಳು ಈಗಾಗಲೇ ಹಾರಾಟ ನಡೆಸಿವೆ.

36 ರಫೇಲ್‌ ಜೆಟ್‌ಗಳನ್ನು 58 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಭಾರತ ಸರಕಾರ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ಸ್‌ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಮೋದಿ ನೇತೃತ್ವದ ಸರಕಾರ ಈ ಹಿಂದಿನ ಒಪ್ಪಂದವನ್ನು ರದ್ದುಗೊಳಿಸಿ ಹೆಚ್ಚಿನ ಹಣಕ್ಕೆ ಕಡಿಮೆ ಜೆಟ್‌ಗಳ ಖರೀದಿಗೆ ಮುಂದಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಈ ಖರೀದಿಯ ಮೂಲಕ ಕೇಂದ್ರ ಸರಕಾರ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಸಮೂಹಕ್ಕೆ ಲಾಭ ಮಾಡಿಕೊಡುತ್ತಿದೆ ಎಂದು ದೂರಿದೆ.

ರಫೇಲ್‌ ಯುದ್ಧ ವಿಮಾನ ಹಗರಣದ ಬಗ್ಗೆ ‘ಸಮಾಚಾರ’ ಈ ಹಿಂದೆ ಪ್ರಕಟಿಸಿದ್ದ ವಿಸ್ತೃತ ವರದಿ ಇಲ್ಲಿದೆ:

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?