‘ಮುಂಬೈ ಟ್ರೈನ್ಸ್’: ನಿತ್ಯ ರೈಲು ಪ್ರಯಾಣಕ್ಕೆ ಕನಿಷ್ಠ ಇಬ್ಬರ ಬಲಿ
ಸುದ್ದಿ ಸಾರ

‘ಮುಂಬೈ ಟ್ರೈನ್ಸ್’: ನಿತ್ಯ ರೈಲು ಪ್ರಯಾಣಕ್ಕೆ ಕನಿಷ್ಠ ಇಬ್ಬರ ಬಲಿ

ಮುಂಬೈನಲ್ಲಿ ರೈಲು ಸೇವೆ ಬಳಸುವವರ ಪೈಕಿ ಈ ವರ್ಷದ ಜನವರಿಯಿಂದ ಜುಲೈ ನಡುವೆ ಒಟ್ಟು 406 ಮಂದಿ ಸಾವನ್ನಪ್ಪಿದ್ದು, 871 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಾಣಿಜ್ಯ ನಗರಿ ಮುಂಬೈನ ನಗರ ಸಂಚಾರದ ಜೀವನಾಡಿ ಅಲ್ಲಿನ ಸಬ್‌ಅರ್ಬನ್‌ ರೈಲ್ವೆ ವ್ಯವಸ್ಥೆ. ರೈಲ್ವೆ ಪೊಲೀಸರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಪ್ರತಿ ದಿನ ಇಬ್ಬರು ರೈಲ್ವೆ ಸಂಚಾರದ ಸಮಯದಲ್ಲಿ ಸಾವನ್ನಪ್ಪುತ್ತಿದ್ದು, ಕನಿಷ್ಠ ನಾಲ್ವರು ಗಾಯಗೊಳ್ಳುತ್ತಿದ್ದಾರೆ. ಈ ವರ್ಷದ ಜನವರಿಯಿಂದ ಜುಲೈ ನಡುವೆ ಒಟ್ಟು 406 ಮಂದಿ ಸಾವನ್ನಪ್ಪಿದ್ದು, 871 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುಮಾರು 2 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಮುಂಬೈ ನಗರದಲ್ಲಿ ಪ್ರತಿ ದಿನ ಇಲ್ಲಿನ ಉಪನಗರ ರೈಲ್ವೆ ಸೇವೆಯನ್ನು ಬಳಸುತ್ತಿರುವವರ ಸಂಖ್ಯೆ ಸುಮಾರು 75 ಲಕ್ಷ. “ವರ್ಷದಿಂದ ವರ್ಷಕ್ಕೆ ರೈಲ್ವೆ ಸೇವೆ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿಯಾದ ನೂಕುನುಗ್ಗಲು ಹಾಗೂ ಸಮಯದ ಅಭಾವವೇ ಪ್ರಯಾಣಿಕರ ಸಾವುಗಳಿಗೆ ಕಾರಣ,” ಎಂದು ರೈಲ್ವೆ ಪೊಲೀಸ್‌ ಆಯುಕ್ತ ನಿಕಿತ್ ಕೌಶಿಕ್ ಹೇಳುತ್ತಾರೆ.

ರೈಲ್ವೆ ಸೇವೆ ಬಳಸುವಾಗ ನಡೆದ ಸಾವುಗಳ ಅಂಕಿ ಅಂಶಗಳನ್ನು ಸೋಮವಾರ ಬಿಡುಗಡೆಗೊಳಿಸಿದ ಅವರು, “ರೈಲಿನಿಂದ ಬಿದ್ದು ಸಾಯುವವರ ಹಾಗೂ ಗಾಯಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. 2011ರಲ್ಲಿಯೇ ಮುಂಬೈ ರೈಲ್ ವಿಕಾಸ್ ನಿಗಮ (ಎಂಆರ್‌ವಿಸಿ) ಈ ಕುರಿತು ಅಧ್ಯಯನ ನಡೆಸಿತ್ತು. ಅದರ ವರದಿಯಲ್ಲಿ ನೀಡಿದ ಶಿಫಾರಸುಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಇದೂ ಕೂಡ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ,” ಎಂದು ಆಯುಕ್ತ ನಿಕಿತ್ ತಿಳಿಸಿದರು.

ಎಂಆರ್‌ವಿಸಿ ಅಧ್ಯಯನ ವರದಿಯು, 12 ಹಾಗೂ 15 ಬೋಗಿಗಳ ರೈಲುಗಳನ್ನು ಪರಿಚಯಿಸುವುದು, ಸಿಗ್ನಲಿಂಗ್‌ ವ್ಯವಸ್ಥೆಯನ್ನು ಬಲಗೊಳಿಸುವುದು ಹಾಗೂ ರೈಲುಗಳ ಓಡಾಟ ನಿಯಂತ್ರಣಕ್ಕೆ ‘ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡಿತ್ತು. ಈ ಮೂಲಕ ಪಶ್ಚಿಮ ಹಾಗೂ ಕೇಂದ್ರ ರೈಲ್ವೆ ನಿಗಮಗಳ ರೈಲುಗಳ ನಡುವೆ ಕನಿಷ್ಠ 2 ನಿಮಿಷಗಳ ಅಂತರವನ್ನು ಕಾಯ್ದುಕೊಳ್ಳಲು ಹೇಳಿತ್ತು. ಆದರೆ ಕಳೆದ ಏಳು ವರ್ಷಗಳಲ್ಲಿ 12-15 ಬೋಗಿಗಳ ರೈಲುಗಳನ್ನು ಅಳವಡಿಸಿಕೊಂಡಿದ್ದು ಬಿಟ್ಟರೆ ಈವರೆಗೆ ಯಾವುದೇ ಶಿಫಾರಸುಗಳ ಅನುಷ್ಠಾನ ನಡೆದಿಲ್ಲ.

ಹಾಗಂತ ಮುಂಬೈ ಉಪನಗರ ರೈಲ್ವೆ ಯೋಜನೆಯ ಕ್ಷಮತೆಯನ್ನು ಹೆಚ್ಚಿಸಲು ಇಷ್ಟು ಮಾತ್ರದ ಬದಲಾವಣೆ ಸಾಕಾಗುವುದಿಲ್ಲ. ಕಳೆದ ಏಳು ವರ್ಷಗಳ ಅಂತರದಲ್ಲಿ 65 ಲಕ್ಷ ಜನರಿಂದ ನಿತ್ಯ ರೈಲ್ವೆ ಸೇವೆ ಬಳಸುವವರ ಸಂಖ್ಯೆ 80 ಲಕ್ಷಕ್ಕೆ ಏರಿಕೆಯಾಗಿದೆ. ಪರಿಣಾಮ, 2,160 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ 12 ಬೋಗಿಗಳ ರೈಲುಗಳು ಸದ್ಯ 5,500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿವೆ.

“ಇತ್ತೀಚೆಗೆ ಕೇಂದ್ರ ಹಾಗೂ ಪಶ್ಚಿಮ ರೈಲ್ವೆ ವಿಭಾಗಗಳು ತಮ್ಮ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿವೆ. ಆದರೆ, ಅದು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ,” ಎನ್ನುತ್ತಾರೆ ತಜ್ಞರು. “ಪ್ರತಿ ದಿನ ನೂರಕ್ಕೂ ಹೆಚ್ಚು ರೈಲುಗಳು ಯಾವುದೇ ಮುನ್ಸೂಚನೆ ನೀಡದೆ ರದ್ದುಗೊಳ್ಳುತ್ತವೆ. ಹೀಗಾಗಿ ಇತರೆ ರೈಲುಗಳಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ. ಇದೂ ಕೂಡ ರೈಲ್ವೆ ಅಪಘಾತಗಳಿಗೆ ಕಾರಣ,” ಎನ್ನುತ್ತಾರೆ ತಜ್ಞರೊಬ್ಬರು. ಕಳೆದ 15 ವರ್ಷಗಳಲ್ಲಿ ರೈಲು ರದ್ದುಗೊಳ್ಳುವ ಪ್ರಮಾಣ ಶೇ. 0.1ರಿಂದ ಶೇ. 4ಕ್ಕೆ ಏರಿಕೆಯಾಗಿದೆ.

ಈ ಸಮಸ್ಯೆಗಳ ನಿವಾರಣೆಗೆ ಇರುವ ಪರಿಹಾರ, ರೈಲುಗಳನ್ನು ರದ್ದುಗೊಳಿಸುವುದನ್ನು ಕಡಿಮೆ ಮಾಡುವುದು ಮತ್ತು ಈಗಿರುವ ರೈಲುಗಳ ಜತೆಗೆ ಕನಿಷ್ಠ 200 ಹೊಸ ರೈಲುಗಳನ್ನು ಸೇವೆಗೆ ಇಳಿಸುವುದು ಎನ್ನುತ್ತಾರೆ ಮಾಜಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿವೇಕ್ ಸಹಾಯ್.

ಹೀಗೆ, ಮುಂಬೈ ಉಪನಗರ ರೈಲ್ವೆ ಸೇವೆಯನ್ನು ಬಲಪಡಿಸಲು ಹಾಗೂ ಸಾವುಗಳಿಗೆ ಕಡಿವಾಣ ಹಾಕಲು ಸಲಹೆಗಳು ಕೇಳಿಬರುತ್ತಿವೆ. ಆದರೆ ಇರುವ ಮೂಲಸೌಕರ್ಯದ ಅಡಿಯಲ್ಲಿ ಹೊಸ ರೈಲುಗಳನ್ನು ಒದಗಿಸುವುದು ಕಷ್ಟ ಎನ್ನುತ್ತಿದ್ದಾರೆ ನಿಗಮದ ಅಧಿಕಾರಿಗಳು. ಇಂತಹ ವಾದ ವಿವಾದಗಳ ನಡುವೆಯೇ ಪ್ರತಿ ದಿನ ಕನಿಷ್ಠ ಇಬ್ಬರು ಮುಂಬೈ ನಗರ ರೈಲುಗಳ ಸೇವೆಯನ್ನು ಬಳಸುವ ವೇಳೆ ಸಾವನ್ನಪ್ಪುತ್ತಿದ್ದಾರೆ. ನಾಲ್ವರು ಗಾಯಗೊಳ್ಳುತ್ತಿದ್ದಾರೆ. ವಾಣಿಜ್ಯ ನಗರ ಧಾವಂತ, ದಟ್ಟಣೆ ನಡುವೆ ಈ ಸಾವುಗಳ ಸಂಖ್ಯೆ ದೊಡ್ಡದು ಅಂತ ಅನ್ನಿಸುತ್ತಿಲ್ಲ ಅಷ್ಟೆ.