samachara
www.samachara.com
ತೆಲಂಗಾಣ ವಿಧಾನಸಭೆ ವಿಸರ್ಜನೆ ನಿರ್ಧಾರ ಸೆ.6ಕ್ಕೆ ಘೋಷಣೆ?
ಸುದ್ದಿ ಸಾರ

ತೆಲಂಗಾಣ ವಿಧಾನಸಭೆ ವಿಸರ್ಜನೆ ನಿರ್ಧಾರ ಸೆ.6ಕ್ಕೆ ಘೋಷಣೆ?

ತೆಲಂಗಾಣ ವಿಧಾನಸಭೆ ವಿಸರ್ಜನೆ ನಿರ್ಧಾರವನ್ನು ಇನ್ನೂ ಗುಟ್ಟಾಗಿಟ್ಟಿರುವ ಕೆಸಿಆರ್‌ ಭಾನುವಾರ ‘ಪ್ರಗತಿ ನಿವೇದನ ಸಭಾ’ ಬೃಹತ್‌ ಸಮಾವೇಶ ನಡೆಸಿದ್ದಾರೆ.

Team Samachara

ತೆಲಂಗಾಣ ವಿಧಾನಸಭೆ ವಿಸರ್ಜನೆಯ ಬಗ್ಗೆ ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಅವಧಿಗೆ ಮುನ್ನಾ ವಿಧಾನಸಭೆ ವಿಸರ್ಜನೆಯ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ನಿರ್ಧಾರ ಘೋಷಣೆಯನ್ನು ಕೆಸಿಆರ್‌ ಮುಂದೂಡಿದ್ದಾರೆ ಎನ್ನಲಾಗಿದೆ.

6 ಅನ್ನು ತಮ್ಮ ಅದೃಷ್ಟ ಸಂಖ್ಯೆ ಎಂದು ನಂಬುವ ಕೆಸಿಆರ್‌ ಸೆಪ್ಟೆಂಬರ್‌ 6ರಂದು ವಿಧಾನಸಭೆ ವಿಸರ್ಜನೆಯ ನಿರ್ಧಾರವನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ಮೂಲಗಳ ಪ್ರಕಾರ ಕೆಸಿಆರ್‌ ಅವಧಿ ಪೂರ್ವ ಚುನಾವಣೆಯ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.

ಚುನಾವಣೆ ಘೊಷಣೆಯ ಬಗ್ಗೆ ಇನ್ನೂ ಗೊಂದಲಗಳಿರುವ ಬೆನ್ನಲ್ಲೇ ರಂಗಾ ರೆಡ್ಡಿ ಜಿಲ್ಲೆಯ ಕೊಂಗರಕಲಾನ್‌ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಪಕ್ಷ ಬೃಹತ್‌ ಸಮಾವೇಶ ಏರ್ಪಿಡಿಸಿದೆ. ‘ಪ್ರಗತಿ ನಿವೇದನ ಸಭಾ’ ಹೆಸರಿನ ಸಮಾವೇಶದಲ್ಲಿ ಕೆಸಿಆರ್‌ ರೈತರಿಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. 6ರ ಸಂಖ್ಯೆಯ ನಂಬಿಕೆಯ ಮೇಲೆಯೇ ಕೆಸಿಆರ್‌ ಈ ಕಾರ್ಯಕ್ರಮವನ್ನೂ ಸಂಜೆ 6 ಗಂಟೆಗೆ ಆರಂಭಿಸಿದ್ದಾರೆ ಎನ್ನಲಾಗಿದೆ.

ತಮ್ಮ ಭಾಷಣದಲ್ಲಿ ಈ ಹಿಂದಿನ ಅವಿಭಜಿತ ಆಂಧ್ರಪ್ರದೇಶ ಸರಕಾರವನ್ನು ಕೆಸಿಆರ್‌ ಟೀಕಿಸಿದ್ದಾರೆ. “ಹಿಂದೆ ತೆಲಂಗಾಣ ಹೋರಾಟವನ್ನು ಲೇವಡಿ ಮಾಡಿದವರಿಗೆ ಈಗ ನಮ್ಮ ಶಕ್ತಿ ಗೊತ್ತಾಗಿದೆ” ಎಂದಿದ್ದಾರೆ.

ರೈತರಿಗೆ ಪ್ರತಿ ಬೆಳೆಯ ಅವಧಿಗೆ ಒಂದು ಎಕರೆಗೆ 4 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವ ‘ರೈತು ಬಂಧು’ ಯೋಜನೆಯನ್ನು ಕೆಸಿಆರ್ ಈ ಸಮಾವೇಶದಲ್ಲಿ ಘೋಷಿಸಲಿದ್ದಾರೆ ಎನ್ನಲಾಗಿದೆ. ಈ ಯೋಜನೆಗಾಗಿ 12 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.