samachara
www.samachara.com
ಅವಧಿ ಪೂರ್ವ ಚುನಾವಣೆಗೆ ತೆಲಂಗಾಣ ಸಜ್ಜು; ನಾಳೆ ವಿಧಾನಸಭೆ ವಿಸರ್ಜನೆ ಸಾಧ್ಯತೆ
ಸುದ್ದಿ ಸಾರ

ಅವಧಿ ಪೂರ್ವ ಚುನಾವಣೆಗೆ ತೆಲಂಗಾಣ ಸಜ್ಜು; ನಾಳೆ ವಿಧಾನಸಭೆ ವಿಸರ್ಜನೆ ಸಾಧ್ಯತೆ

ತೆಲಂಗಾಣ ವಿಧಾನಸಭೆ ವಿಸರ್ಜಿಸಲು ಮುಂದಾಗಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌, ನಾಳೆ ಮಧ್ಯಾಹ್ನ ರಂಗಾರೆಡ್ಡಿ ಜಿಲ್ಲೆಯಲ್ಲಿ ಬೃಹತ್‌ ಸಮಾವೇಶ ಏರ್ಪಡಿಸಿದ್ದಾರೆ.

ತೆಲಂಗಾಣ ವಿಧಾನಸಭೆ ವಿಸರ್ಜಿಸಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಮುಂದಾಗಿದ್ದಾರೆ ಎನ್ನಲಾಗಿದೆ. ಭಾನುವಾರ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಅಧಿಕೃತ ಹೇಳಿಕೆ ಹೊರ ಬೀಳಲಿದೆ.

ನಾಳೆಗೆ (ಸೆಪ್ಟೆಂಬರ್‌ 2) ನಾಲ್ಕು ವರ್ಷ ಪೂರೈಸಲಿರುವ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಸರಕಾರ ಅವಧಿ ಪೂರ್ವ ಚುನಾವಣೆಗೆ ಸಜ್ಜಾಗಿದೆ ಎಂದು ವರದಿಯಾಗಿದೆ. 2019ರ ಮೇ ತಿಂಗಳವರೆಗೆ ಈ ಸರಕಾರದ ಅಧಿಕಾರಾವಧಿಯಿದೆ. ಆದರೆ, ಅವಧಿ ಪೂರೈಸುವ ಮೊದಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಮುಂದಾಗುತ್ತಿರುವುದರ ಹಿಂದಿರುವ ಕೆ.ಚಂದ್ರಶೇಖರ್‌ ರಾವ್‌ ರಾಜಕೀಯ ಲೆಕ್ಕಾಚಾರ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಧಾನಸಭೆ ವಿಸರ್ಜನೆ ಘೋಷಣೆಯ ಬಳಿಕ ಭಾನುವಾರ ಮಧ್ಯಾಹ್ನ ರಂಗಾರೆಡ್ಡಿ ಜಿಲ್ಲೆಯಲ್ಲಿ ಬೃಹತ್‌ ಸಮಾವೇಶ ನಡೆಸಲು ಟಿಆರ್‌ಎಸ್‌ ಸಿದ್ಧತೆ ನಡೆಸಿದೆ. ಎರಡು ಸಾವಿರ ಎಕರೆ ಪ್ರದೇಶದಲ್ಲಿ ‘ಪ್ರಗತಿ ನಿವೇದನ ಸಭಾ’ ಹೆಸರಿನ ಬೃಹತ್‌ ಸಮಾವೇಶ ಏರ್ಪಡಿಸಲಾಗಿದೆ.

“ಪಕ್ಷದ ನಾಯಕರಿಂದ ನಾಳೆ ಪ್ರಮುಖ ರಾಜಕೀಯ ಘೋಷಣೆಯನ್ನು ನಿರೀಕ್ಷಿಸಬಹುದು. ಸಮಾವೇಶದ ಬಳಿಕ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಲಿದೆ” ಎಂದು ಕೆಸಿಆರ್‌ ಪುತ್ರ ಹಾಗೂ ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮ ರಾವ್‌ ಹೇಳಿದ್ದಾರೆ.

ವಿಧಾನಸಭೆ ವಿಸರ್ಜನೆ ಹಾಗೂ ಅವಧಿ ಪೂರ್ವ ಚುನಾವಣೆಯ ಬಗ್ಗೆ ರಾಮ ರಾವ್‌ ಅಥವಾ ಕೆಸಿಆರ್‌ ಈವರೆಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ನಾಳೆ ತೆಲಂಗಾಣ ವಿಧಾನಸಭೆ ವಿಸರ್ಜನೆಯಾದರೆ ಡಿಸೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ.

ಅವಧಿ ಪೂರ್ವ ಚುನಾವಣೆಯಲ್ಲಿ ಟಿಆರ್‌ಎಸ್‌ ಪಕ್ಷ ಬಿಜೆಪಿ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆಯೇ, 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಟಿಆರ್‌ಎಸ್‌ ಈ ನಡೆಗೆ ಮುಂದಾಗಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ನಾಳೆ ಮಧ್ಯಾಹ್ನದ ಹೊತ್ತಿಗೆ ಉತ್ತರ ದೊರೆಯಲಿದೆ.