samachara
www.samachara.com
ಖತಾರ್‌ ಇನ್ನು ದ್ವೀಪರಾಷ್ಟ್ರ; ಜಲ ಗಡಿ ನಿರ್ಮಿಸಲು ಮುಂದಾದ ಸೌದಿ ಅರೇಬಿಯ
ಸುದ್ದಿ ಸಾರ

ಖತಾರ್‌ ಇನ್ನು ದ್ವೀಪರಾಷ್ಟ್ರ; ಜಲ ಗಡಿ ನಿರ್ಮಿಸಲು ಮುಂದಾದ ಸೌದಿ ಅರೇಬಿಯ

‘ಸಲ್ವಾ ದ್ವೀಪ ಯೋಜನೆ’ ಎಂಬ ಗಡಿ ತೋಡುವ ಯೋಜನೆಯನ್ನು ಸೌದಿ ಜಾರಿಗೆ ತರುತ್ತಿದ್ದು, ಇದರಿಂದ ಖತಾರ್‌ ಸೌದಿ ನಂಟನ್ನು ಕಡಿದುಕೊಂಡು ಸಂಪೂರ್ಣವಾಗಿ ದ್ವೀಪ ರಾಷ್ಟ್ರವಾಗಲಿದೆ

ಖತಾರ್‌ ಜತೆಗಿನ ನಂಟನ್ನು ಸಂಪೂರ್ಣವಾಗಿ ಕಡಿದುಕೊಳ್ಳಲು ಮುಂದಾಗಿರುವ ಸೌದಿ, ಖತಾರ್‌ ಅನ್ನು ದ್ವೀಪವಾಗಿ ಬೇರ್ಪಡಿಸಲು ಮುಂದಾಗಿದೆ. ಖತಾರ್‌ ಗಡಿಯ ಭೂ ಭಾಗದಲ್ಲಿ ಬೃಹತ್‌ ಕಾಲುವೆ ನಿರ್ಮಿಸಿ ಖತಾರ್‌ ಅನ್ನು ಪ್ರತ್ಯೇಕ ದ್ವೀಪವಾಗಿಸಲು ಸೌದಿ ಸರಕಾರ ಸಿದ್ಧತೆ ನಡೆಸಿದೆ.

ಗಲ್ಫ್‌ ರಾಷ್ಟ್ರಗಳ ಜತೆಗೆ ಖತಾರ್‌ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದು, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪಕ್ಕೆ ಗುರಿಯಾಗಿದೆ. ಹೀಗಾಗಿ ಖತಾರ್‌ ಜತೆಗಿನ ನೆಲದ ನಂಟನ್ನೂ ಕಡಿದುಕೊಳ್ಳಲು ಸೌದಿ ಮುಂದಾಗಿದೆ.

“ಸಲ್ವಾ ದ್ವೀಪ ಯೋಜನೆ ಅನುಷ್ಠಾನದ ಮಾಹಿತಿ ಪಡೆಯಲು ನಾನು ಕಾತರನಾಗಿದ್ದೇನೆ. ಈ ಐತಿಹಾಸಿಕ ಯೋಜನೆ ಜಾರಿಗೆ ಬಂದರೆ ಈ ಪ್ರದೇಶದ ಭೌಗೋಳಿಕತೆಯೇ ಬದಲಾಗಲಿದೆ” ಎಂದು ಸೌದಿ ದೊರೆಯ ಹಿರಿಯ ಸಲಹೆಗಾರ ಸೌದ್‌ ಅಲ್‌-ಖಹ್ತಾನಿ ಟ್ವೀಟ್‌ ಮಾಡಿದ್ದಾರೆ.

ಈ ಯೋಜನೆ ಜಾರಿಗೆ ಬಂದರೆ ಸೌದಿಯಿಂದ ಖತಾರ್‌ ಭೂ ಪ್ರದೇಶ ಬೇರೆಯಾಗಲಿದೆ. ಸೌದಿ ಮತ್ತು ಖತಾರ್‌ ನಡುವಿನ ದೀರ್ಘಕಾಲದ ಸಂಘರ್ಷಕ್ಕೆ ಈ ಯೋಜನೆ ಇನ್ನಷ್ಟು ಕಿಚ್ಚು ಹಚ್ಚಲಿದೆ ಎನ್ನಲಾಗುತ್ತಿದೆ.

ಸೌದಿ ಅರೇಬಿಯಾ, ಬಹರೇನ್‌ ಮತ್ತು ಈಜಿಪ್ಟ್‌ ಖತಾರ್‌ ಜತೆಗಿನ ವ್ಯಾಪಾರ ಹಾಗೂ ರಾಜತಾಂತ್ರಿಕ ಸಂಬಂಧವನ್ನು 2017ರ ಜೂನ್‌ ತಿಂಗಳಿಂದಲೇ ಕಡಿದುಕೊಂಡಿವೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಜತೆಗೆ ಸೌದಿ ಅರೇಬಿಯಾದ ವಿರೋಧಿ ರಾಷ್ಟ್ರವಾದ ಇರಾನ್‌ ಜತೆಗೆ ಆತ್ಮೀಯ ಸಂಬಂಧ ಹೊಂದಿರುವ ಆರೋಪ ಖತಾರ್‌ ಮೇಲಿದೆ.

ಖತಾರ್‌ ಗಡಿಯುದ್ದಕ್ಕೂ 60 ಕಿ.ಮೀ. ಉದ್ದ ಹಾಗೂ 200 ಮೀಟರ್‌ ಅಗಲದ ಬೃಹತ್ ಕಾಲುವೆ ನಿರ್ಮಾಣ ಮಾಡುವುದು ಸಲ್ವಾ ದ್ವೀಪ ಯೋಜನೆ ಉದ್ದೇಶವಾಗಿದೆ. ಈ ಯೋಜನೆ ಜಾರಿಗೆ ಬಂದರೆ ಸೌದಿ ಅರೇಬಿಯಾ ಖತಾರ್‌ ಜತೆಗೆ ರಾಜತಾಂತ್ರಿಕ, ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವ ಜತೆಗೆ ನೆಲದ ಸಂಬಂಧವನ್ನೂ ಕಳೆದುಕೊಳ್ಳಲಿದೆ. ಈ ಮೂಲಕ ಖತಾರ್‌ ಸೌದಿ ಅರೇಬಿಯದಿಂದ ಕೃತಕವಾಗಿ ಬೇರ್ಪಟ್ಟ ದ್ವೀಪ ರಾಷ್ಟ್ರವಾಗಲಿದೆ.

2.8 ಬಿಲಿಯನ್‌ ಸೌದಿ ರಿಯಾಲ್ಸ್‌ (750 ಮಿಲಿಯನ್‌ ಅಮೆರಿಕನ್‌ ಡಾಲರ್‌) ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಸೌದಿ ಮುಂದಾಗಿದೆ. ಈ ಬೃಹತ್‌ ಕಾಲುವೆ ನಿರ್ಮಾಣದ ಯೋಜನೆಗೆ ಈಗಾಗಲೇ 5 ಕಂಪೆನಿಗಳು ಪ್ರಸ್ತಾವ ಸಲ್ಲಿಸಿದ್ದು ಈ ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಖತಾರ್‌ ಗಡಿಯಲ್ಲಿ ಸೌದಿ ಬೃಹತ್‌ ಕಾಲುವೆ ತೋಡುವ ಈ ಯೋಜನೆ ಜಾರಿಗೆ ಬಂದರೆ ಖತಾರ್‌ ಪೂರ್ತಿಯಾಗಿ ನೀರಿನ ಗಡಿ ಹೊಂದಲಿದ್ದು, ಕೃತಕ ಹೊಸ ದ್ವೀಪವಾಗಲಿದೆ. ಇದರೊಂದಿಗೆ ಜಾಗತಿಕ ಭೂಪಟದಲ್ಲಿ ಖತಾರ್‌ ಹಾಗೂ ಸೌದಿ ಕೃತಕ ಬೃಹತ್‌ ಕಾಲುವೆಯ ಗಡಿ ಹೊಂದಲಿವೆ.