samachara
www.samachara.com
ಟ್ವಿಟರ್‌ನಲ್ಲೂ ಪ್ರಧಾನಿ ಮೋದಿಯನ್ನು ಫಾಲೋ ಮಾಡದ ದೇವೇಗೌಡರು!
ಸುದ್ದಿ ಸಾರ

ಟ್ವಿಟರ್‌ನಲ್ಲೂ ಪ್ರಧಾನಿ ಮೋದಿಯನ್ನು ಫಾಲೋ ಮಾಡದ ದೇವೇಗೌಡರು!

ಅಚ್ಚರಿಯೆಂದರೆ ಪ್ರಧಾನಿ ನರೇಂದ್ರ ಮೋದಿಯನ್ನಾಗಲೀ ಯಾವುದೇ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ದೇವೇಗೌಡರು ಫಾಲೋ ಮಾಡುತ್ತಿಲ್ಲ.

ರಾಜಕೀಯದಲ್ಲಿ ತನ್ನದೇ ಆದ ಪರಿಣಾಮ ಮತ್ತು ಪಾತ್ರವನ್ನು ನಿರ್ವಹಿಸುತ್ತಾ ಬಂದ ಸಾಮಾಜಿಕ ಜಾಲತಾಣ ಟ್ಟಿಟ್ಟರ್‌. ರಾಷ್ಟ ರಾಜಕಾರಣದಲ್ಲೂ ಟ್ಟಿಟ್ಟರ್‌ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಾದೇಶಿಕ ರಾಜಕಾರಣಕ್ಕೆ ಬಂದಾಗ ಟ್ಟಿಟ್ಟರ್‌ ಪ್ರಭಾವಶಾಲಿಯಾಗಿ ರೂಪುಗೊಂಡಿಲ್ಲ. ಇದೀಗ ಇದೇ ಟ್ಟಿಟ್ಟರ್‌ಗೆ ಪ್ರಾದೇಶಿಕ ರಾಜಕಾರಣದ ರಾಷ್ಟ್ರ ನಾಯಕರೊಬ್ಬರ ಪ್ರವೇಶವಾಗಿದೆ. ಅವರು ಮತ್ಯಾರೂ ಅಲ್ಲ, ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು.

ಎಚ್‌. ಡಿ. ದೇವೇಗೌಡರು ತೀರಾ ತಡವಾಗಿ ಸಾಮಾಜಿಕ ಜಾಲತಾಣ ಟ್ಟಿಟ್ಟರ್‌ಗೆ ಆಗಸ್ಟ್‌ 22ರಂದು ಎಂಟ್ರಿಯಾಗಿದ್ದಾರೆ. @H_D_Devegowda ಹೆಸರಿನಲ್ಲಿ ಟ್ಟಿಟ್ಟರ್‌ ಖಾತೆಯನ್ನು ತೆರೆಯಲಾಗಿದ್ದು, ಅದರಲ್ಲಿ ‘ಭಾರತದ ಮಾಜಿ ಪ್ರಧಾನಿ, ಜನತಾದಳ (ಜಾತ್ಯಾತೀತ) ರಾಷ್ಟ್ರೀಯ ಅಧ್ಯಕ್ಷರು’ ಎಂದು ಅವರ ಬಗ್ಗೆ ವಿವರಣೆ ನೀಡಲಾಗಿದೆ.

ದೇವೇಗೌಡರ ಟ್ಟಿಟ್ಟರ್‌ ಖಾತೆ
ದೇವೇಗೌಡರ ಟ್ಟಿಟ್ಟರ್‌ ಖಾತೆ

ಆಗಸ್ಟ್‌ 22ರಂದು ಟ್ಟಿಟ್ಟರ್‌ಗೆ ಬಂದಿರುವ ಗೌಡರು ಇಲ್ಲಿಯವರೆಗೆ ಒಟ್ಟು 8 ಟ್ಟೀಟ್‌ಗಳನ್ನು ಮಾಡಿದ್ದಾರೆ. ಕೊನೆಯದಾಗಿ ಡಿಎಂಕೆ ನಾಯಕ ಕರುಣಾನಿಧಿಯವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರಗಳನ್ನು ಟ್ಟೀಟ್‌ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ವೈಎಸ್‌ವಿ ದತ್ತಾ ಪತ್ನಿಗೆ ಅಂತಿಮ ನಮನ ಸಲ್ಲಿಸಿದ ಚಿತ್ರಗಳು ಸೇರಿ ಜೆಡಿಎಸ್‌ ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಶತದಿನ ಪೂರೈಸಿದ್ದಕ್ಕೆ ಅಭಿನಂದನೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಜನತೆಗೆ ಶುಭ ಕೋರಿ ಅವರು ಟ್ಟೀಟ್‌ಗಳನ್ನು ಮಾಡಿದ್ದಾರೆ.

ಒಟ್ಟು ಏಳು ಜನರನ್ನು ಟ್ಟಿಟ್ಟರ್‌ನಲ್ಲಿ ದೇವೇಗೌಡರು ಫಾಲೋ ಮಾಡುತ್ತಿದ್ದಾರೆ. ಪುತ್ರ ಎಚ್‌. ಡಿ. ಕುಮಾರಸ್ವಾಮಿ, ಕರ್ನಾಟಕ ಮುಖ್ಯಮಂತ್ರಿಗಳ ಟ್ಟಿಟ್ಟರ್‌ ಖಾತೆ, ರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಬಿಲ್‌ ಗೇಟ್ಸ್‌, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ದೇವೇಗೌಡರು ಫಾಲೋ ಮಾಡುತ್ತಿದ್ದಾರೆ. ಅಚ್ಚರಿಯೆಂದರೆ ಪ್ರಧಾನಿ ನರೇಂದ್ರ ಮೋದಿಯನ್ನಾಗಲೀ ಯಾವುದೇ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ದೇವೇಗೌಡರು ಫಾಲೋ ಮಾಡುತ್ತಿಲ್ಲ.

ಪದ್ಮನಾಭನಗರದ ಮೂಲಗಳ ಪ್ರಕಾರ, ಇದು ದೇವೇಗೌಡರದ್ದೇ ಅಧಿಕೃತ ಟ್ಟಿಟ್ಟರ್‌ ಖಾತೆಯಾಗಿದ್ದು ಇದನ್ನು ಅವರೇ ಹೇಳಿ ತೆರೆಸಿದ್ದಾರೆ. ಸದ್ಯ ಇದಕ್ಕೆ ಟ್ಟಿಟ್ಟರ್‌ನ ಅಧಿಕೃತ ಮುದ್ರೆ ಸಿಕ್ಕಿಲ್ಲ ಅಷ್ಟೇ. ಅವರೇ ಖುದ್ದು ಖಾತೆ ತೆರೆಸಿರುವುದರಿಂದ ಆಸ್ಥೆ ವಹಿಸಿ ಯಾರನ್ನು ಫಾಲೋ ಮಾಡಬೇಕು ಎಂಬುದನ್ನು ನಿರ್ಧರಿಸಿರುವಂತಿದೆ. ಈ ಕಾರಣಕ್ಕೆ ಅವರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಸಾಮಾಜಿಕ ಜಾಲತಾಣಗಳಿಂದಲೂ ದೂರವಿಟ್ಟಿದ್ದಾರೆ.

ಕಳೆದ ಎಂಟರಿಂದ ಒಂಭತ್ತು ದಿನಗಳಲ್ಲಿ ಅವರು 87 ಟ್ಟೀಟ್‌ಗಳನ್ನು ಲೈಕ್‌ ಮಾಡಿದ್ದಾರೆ. ಸಿದ್ದರಾಮಯ್ಯ, ರಾಹುಲ್‌ ಗಾಂಧಿ, ಪ್ರಶಾಂತ್‌ ಭೂಷಣ್‌ ಹಾಗೂ ತಾವೂ ಫಾಲೋ ಮಾಡುತ್ತಿರುವವರ ಟ್ಟೀಟ್‌ಗಳಲ್ಲದೆ ಟ್ಟೀಟರ್‌ಗೆ ಸ್ವಾಗತ ಕೋರಿರುವ ಒಂದಷ್ಟು ಟ್ಟೀಟ್‌ಗಳಿಗೂ ದೇವೇಗೌಡರು ಲೈಕ್‌ ಬಟನ್‌ ಒತ್ತಿದ್ದಾರೆ.

ಹೀಗೆ ಸದ್ಯಕ್ಕೆ ಟ್ಟಿಟರ್‌ನಲ್ಲಿ ಆಕ್ಟಿವ್‌ ಆಗಿರುವ ಮಾಜಿ ಪ್ರಧಾನಿಗಳು ಇಲ್ಲಿ ತಮ್ಮ ಚಲವಲನಗಳನ್ನು ದಾಖಲಿಸುವ, ಜತೆಗೆ ಹೇಳಬೇಕಾಗಿದ್ದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೇಳುವ ಪರಿಪಾಠವನ್ನು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಟ್ಟಿಟ್ಟರ್‌ನಲ್ಲಿ ಮತ್ತಷ್ಟು ಆಕ್ಟಿವ್‌ ಆಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಅವರು ಮಾಡಲಿರುವ ಟ್ಟೀಟ್‌ಗಳ ಬಗ್ಗೆ ಕುತೂಹಲ ಹುಟ್ಟಿದೆ.