samachara
www.samachara.com
ಕೊಡಗು ಮರು ನಿರ್ಮಾಣಕ್ಕೆ ಸರಕಾರದ ಮುಂದೆ 19 ಆಗ್ರಹಗಳು
ಸುದ್ದಿ ಸಾರ

ಕೊಡಗು ಮರು ನಿರ್ಮಾಣಕ್ಕೆ ಸರಕಾರದ ಮುಂದೆ 19 ಆಗ್ರಹಗಳು

ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆಗಳು ಬಿರುಸುಗೊಂಡಿರುವ ಹೊತ್ತಲ್ಲಿ 19 ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ. ಅವುಗಳ ವಿವರ ಇಲ್ಲಿದೆ.

ಕೊಡಗು ಪ್ರಾಕೃತಿಕ ವಿಕೋಪದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಈ ವಿಕೋಪದ ಸಂದರ್ಭದಲ್ಲಿ ಸಂತ್ರಸ್ತರು ಮತ್ತು ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಿತ್ತು ‘ಪೀಪಲ್‌ ಪಾರ್‌ ಕೊಡಗು’ ತಂಡ. ಕೊಡಗಿನಲ್ಲಿ ಪರಿಹಾರ ಕಾರ್ಯಾಚರಣೆಗಳು ಬಿರುಸುಗೊಂಡಿರುವ ಈ ಹೊತ್ತಲ್ಲಿ ತಂಡವೀಗ 19 ಮನವಿಗಳೊಂದಿಗೆ ಸರಕಾರಕ್ಕೆ ಪತ್ರ ಬರೆದಿದೆ.

ಈ ಕುರಿತು ಪೀಪಲ್‌ ಫಾರ್‌ ಕೊಡಗು ತಂಡದ ಪರವಾಗಿ ಚಕ್ರವರ್ತಿ ಚಂದ್ರಚೂಡ್‌ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರಿಗೆ ಪತ್ರವನ್ನು ಬರೆದಿದ್ದಾರೆ. ಇದರ ಪ್ರತಿಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಣ್ಣ ನೀರಾವರಿ ಸಚಿವ ಪುಟ್ಟರಾಜು ಮತ್ತು ಶಿಕ್ಷಣ ಸಚಿವ ಎನ್‌. ಮಹೇಶ್‌ ಅವರಿಗೂ ಕಳುಹಿಸಲಾಗಿದೆ. ಈ ಪತ್ರದಲ್ಲಿನ 19 ಬೇಡಿಕೆಗಳು ಹೀಗಿವೆ,

1. ಜಿಲ್ಲಾ ಉಸ್ತುವಾರಿ ಸಚಿವರಾದ ಸಾರಾ ಮಹೇಶ್ ರವರು ಮಾತು ಕೊಟ್ಟಂತೆ ಸ್ವಯಂ ಪ್ರೇರಿತವಾಗಿ ಹರಿದು ಬರುತ್ತಿರುವ ಅನೇಕ ಸಂಘ ಸಂಸ್ಥೆಗಳ ನೆರವನ್ನು ಉದಾಹರಣೆಗೆ ರಾಜ್ಯ ರೈತ ಸಂಘ, ಆದಿಚುಂಚನಗಿರಿ ಮಠ ಮತ್ತು ಅನೇಕ ಸಂಘ ಸಂಸ್ಥೆಗಳ ನೆರವನ್ನು ಪಡೆಯಬೇಕು. ಈ‌ ಎಲ್ಲರ ಎಲ್ಲಾ ಬಗೆಯ ನೆರವನ್ನು ಪಡೆಯಲು ಈ ಕೂಡಲೆ ಸಿಂಗಲ್ ವಿಂಡೋ ತೆರೆಯಬೇಕು. ಈ ಸಿಂಗಲ್ ವಿಂಡೋ ಮೂಲಕ ಹರಿದು ಬರಲಿರುವ ಎಲ್ಲಾ ರೂಪದ ಸಹಾಯಗಳನ್ನು ಕೊಡಗಿನ ಮರು ನಿರ್ಮಾಣಕ್ಕೆ ಬಳಸಬೇಕು.

2. ಎಲ್ಲಾ ನಿರಾಶ್ರಿತರ ಪುನರ್ವಸತಿ ಆಗುವವರೆಗೂ ಯಾವುದೇ ನಿರಾಶ್ರಿತ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಸೂಕ್ತ ವ್ಯವಸ್ಥೆಗಳನ್ನು ಕ್ಯಾಂಪುಗಳಲ್ಲಿ ಮುಂದುವರಿಸಬೇಕು.

3. ಶಿಬಿರಗಳಲ್ಲಿರುವ ಮತ್ತು ಶಿಬಿರಗಳಿಗೆ ಬಾರದೆ ಇರುವ ಒಟ್ಟು ಎಂಟು ನೂರಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ವಸತಿ ಶಾಲೆಗಳಿಗೆ ಮಕ್ಕಳನ್ನು ಸ್ಥಳಾಂತರಿಸುವ ಮತ್ತು ವಸತಿ ಶಾಲೆಗೆ ಹೋಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ವ್ಯವಸ್ಥೆಗೆ ಇಲಾಖೆ ಮುಂದಾಗಬೇಕು.

4. ತಜ್ಞರ ಸಲಹೆ ಮೇರೆಗೆ ನಿರಾಶ್ರಿತರಿಗೆ ಸದೃಢ ಮನೆಗಳನ್ನು ಕಟ್ಟಲು ಏಕರೂಪದ ಮಾಡೆಲ್ ಪ್ರಕಟಿಸಬೇಕು.

5. ಪಶು ಸಂಗೋಪನಾ ಇಲಾಖೆ ತನ್ನ ಕಾರ್ಯನಡೆಸುವಲ್ಲಿ ವಿಫಲವಾಗಿದೆ. ಅದನ್ನು ಕೂಡಲೇ ತ್ವರಿತಗೊಳಿಸಬೇಕು.

6. ಎರಡನೇ ಮೊಣ್ಣಂಗೇರಿಯ ಕ್ಯಾಂಪಿನಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಆಟಗಾರ್ತಿ ತಶ್ಮಾ ಸೇರಿದಂತೆ ಹಲವಾರು ಪ್ರತಿಭೆಗಳ ಮನೆಗಳು ಜಲ ಸಮಾಧಿಯಾಗಿವೆ. ಅಂತಹವರನ್ನು ಪತ್ತೆ ಹಚ್ಚಿ ಸಂಬಂಧಪಟ್ಟ ಇಲಾಖೆಗಳು, ಕ್ರೀಡಾ ಪ್ರಾಧಿಕಾರಿಗಳು ಉದ್ಯೋಗ ಭದ್ರತೆ ಸೇರಿದಂತೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಬೇಕು.

7. ಸಂಪರ್ಕ ರಸ್ತೆಗಳು‌, ಶಾಲೆಗಳು, ಕಟ್ಟಡ, ತಡೆಗೋಡೆಗಳನ್ನು ಕಟ್ಟುವಾಗ ಭೂಕಂಪನ ಮತ್ತು ಭೂಪದರಗಳ ಅಗಲುವಿಕೆ ಇವುಗಳನ್ನು ಗಮನಿಸಿ ಪೂರ್ವ ಪ್ರಜ್ಞೆಯಿಂದ ಮುಂದಿನ ದಿನಮಾನಗಳಲ್ಲಿ ಅನಾಹುತಗಳಾಗದಂತೆ ನಿರ್ಮಾಣ ಕಾರ್ಯ ನಡೆಯಬೇಕು.

8. ಕೊಡಗಿನ ಯಾವುದೇ ಭಾಗದಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡ ಮಟ್ಟದ ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳ ನಿರ್ಮಾಣದ ಕುರಿತಂತೆ ಪರಿಸರ ಪ್ರೇಮಿ ನೀತಿ ಜಾರಿಗೊಳಿಸಬೇಕು. ಜಿಲ್ಲಾಡಳಿತವು ವಿಧಿಸಿರುವ ಕಾನೂನುಗಳನ್ನು ಮೀರಿ ನಡೆಯುತ್ತಿರುವ ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳನ್ನು ಈ ಕೂಡಲೆ ಮುಚ್ಚಬೇಕು. ಈ ಕುರಿತಂತೆ ಹೊಸ ನಿಯಮಾವಳಿಗಳ ಜಾರಿಯಾಗಲೇಬೇಕು .

9. ಮೈಸೂರು, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ, ಕುಟ್ಟ, ತಲಚೇರಿ ಮಾರ್ಗವಾಗಿ ಹೋಗಲಿರುವ ರೈಲ್ವೇ ಕಾಮಗಾರಿಯು ಅಭಿವೃದ್ಧಿ ಹೆಸರಲ್ಲಿ ಸುಮಾರು 60,000 ಮರಗಳನ್ನು ನಾಶ ಮಾಡಲಿದೆ. ಭೂಕಂಪನಕ್ಕೂ ಇದು ಕಾರಣವಾಗಲಿದೆ. ಈ ಯೋಜನೆಯು ಪರಿಸರ ವಿರೋಧಿಯಾಗಿದ್ದು ಇದರ ವಿರುದ್ಧ ಈಗಾಗಲೇ ಧ್ವನಿ ಎದ್ದಿದೆ. ಅದನ್ನು ಪರಿಗಣಿಸಿ ರೈಲ್ವೆ ಕಾಮಗಾರಿಯನ್ನು ನಿಲ್ಲಿಸಬೇಕು.

10. ಶಿಬಿರಗಳಲ್ಲಿ ದಿನದ 24 ಗಂಟೆಯೂ ಸೂಕ್ತ ವೈದ್ಯಕೀಯ ವ್ಯವಸ್ಥೆ ಆಗಬೇಕು. ಮಾನಸಿಕ ರೋಗ ತಜ್ಞರು ಕಡ್ಡಾಯವಾಗಿ ಹಾಜರಿರಬೇಕು .

11. ರಾಜಕೀಯ ಲಾಬಿಗಳಿಗೆ ಒಳಗಾಗದೆ ತಂತ್ರಜ್ಞರು ಹೇಳುವ ಕಡೆಯಲ್ಲಿ ಗ್ರಾಮಸ್ಥರ ಮನವೊಲಿಸಿ ಸಂಪೂರ್ಣವಾಗಿ ನಾಶವಾಗಿರುವ ಹಳ್ಳಿಗಳ ಮರು ನಿರ್ಮಾಣ ಆಗಬೇಕು.

12. ಪ್ಲಾಸ್ಟಿಕ್ ರಹಿತ ಕೊಡಗು ಆಂದೋಲನಕ್ಕೆ ಮರು ಚಾಲನೆ ಸಿಗಬೇಕು . ಪ್ಲಾಸ್ಟಿಕ್ ನಿರ್ಮೂಲನೆ ಆಗಬೇಕು.

13. ಭೂಕಂಪನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕು . ಸಹ್ಯಾದ್ರಿಯ ಈ ಭಾಗದಲ್ಲಾಗುವ ಭೂಕಂಪನದ ಮಾಹಿತಿ ಗ್ರಾಮಸ್ಥರಿಗೆ ತಿಳಿಯುವಂತಾಗಬೇಕು.

14. ಕಾವೇರಿ, ಪಯಸ್ವಿನಿ, ಒಲಪಟ್ಟಣಂ, ಲಕ್ಷ್ಮಣತೀರ್ಥ ನದಿಗಳ ಅಚ್ಚುಕಟ್ಟು ಮತ್ತು ನದಿ ಹರಿವಿನ ಮರು ನಿರ್ಮಾಣ ಆಗಲೇಬೇಕು.

15. ಕೊಡಗಿನ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ರೂಪಿಸುವ ಕಾರ್ಯಕ್ರಮಗಳನ್ನು ನಡೆಸುವುದು ಈಗಿನ ತುರ್ತು ಅಗತ್ಯವಾಗಿದೆ. ಅದಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು.

16. ಮೂರು ಸಾವಿರಕ್ಕೂ ಹೆಚ್ಚು (ನೆರೆಹಾನಿಗೊಳಗಾದ ಭೂ ಪ್ರದೇಶಗಳ ಪೈಕಿ ) ಕೂಲಿ ಕಾರ್ಮಿಕರಿದ್ದಾರೆ. ಅವರಿಗೂ ಸೂಕ್ತ ವ್ಯವಸ್ಥೆ ಆಗಬೇಕು .

17. ಈಗಾಗಲೇ ಚೆಕ್ ಮೂಲಕ ವಿತರಣೆಯಾಗಿರುವ ಪರಿಹಾರ ಮೊತ್ತದ ಬಗ್ಗೆ ‘ಪೀಪಲ್ ಫಾರ್ ಕೊಡಗು’ ತಂಡ ನಡೆಸಿದ ಅಭಿಯಾನದ ನಂತರ ಜಿಲ್ಲಾಡಳಿತವು 3,800 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡುತ್ತಿದೆ. ಆ ಪರಿಹಾರ ಧನವನ್ನು ಐದು ಸಾವಿರ ರೂಪಾಯಿಗಳಿಗೆ ಹೆಚ್ಚಿಸಬೇಕು. ಪರಿಹಾರ ಧನ ಇನ್ನೂ ಎಲ್ಲರಿಗೂ ತಲುಪಿಲ್ಲ . ಇದು ಎಲ್ಲರಿಗೂ ತಲುಪಬೇಕು.

18. ನಾಡಿನಾದ್ಯಂತ ಇರುವ ಸಂಘ ಸಂಸ್ಥೆಗಳ ಮಾನವ ಶ್ರಮವನ್ನು ಕೊಡಗಿನ ಮರು ನಿರ್ಮಾಣಕ್ಕೆ ಬಳಸಿಕೊಳ್ಳುವ ಏಕರೂಪದ ವ್ಯವಸ್ಥೆ ಆಗಬೇಕು .

19. ಫಾರಂ ನಂಬರ್ 53ರ ಅನ್ವಯ ಆರ್‌ಟಿಸಿ ಪಡೆಯಲು ನಿರಾಶ್ರಿತರು ಅರ್ಜಿ ಹಾಕಿದ್ದಾರೆ. ಅದರಲ್ಲಿ ದಾಖಲೆಗಳಿಲ್ಲದವರು ಹಲವರಿದ್ದಾರೆ. ಅಂತಹವರನ್ನೂ ಪರಿಗಣಿಸಿ ಜಮೀನು ಮತ್ತು ಮನೆಗಳನ್ನು ನೀಡಬೇಕು. ಈವರೆಗೂ ಪೂರ್ಣಗೊಳ್ಳದ ಇಲಾಖಾ ಕಾರ್ಯಕ್ರಮಗಳನ್ನು ಕಂದಾಯ ಇಲಾಖೆ ತ್ವರಿತಗತಿಯಲ್ಲಿ ಮಾಡಬೇಕು.