samachara
www.samachara.com
ನೋಟು ರದ್ದು, ರಫೇಲ್‌ ಡೀಲ್‌; ಹಳೆಯ ಆರೋಪಗಳನ್ನೇ ಮತ್ತೆ ತೂರಿದ ರಾಹುಲ್‌
ಸುದ್ದಿ ಸಾರ

ನೋಟು ರದ್ದು, ರಫೇಲ್‌ ಡೀಲ್‌; ಹಳೆಯ ಆರೋಪಗಳನ್ನೇ ಮತ್ತೆ ತೂರಿದ ರಾಹುಲ್‌

ನೋಟು ರದ್ಧತಿ ಹಾಗೂ ರಫೇಲ್‌ ಒಪ್ಪಂದದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಹಳೆಯ ಆರೋಪಗಳನ್ನೇ ಮತ್ತೊಮ್ಮೆ ಹೇಳಿದ್ದಾರೆ.

ನೋಟು ರದ್ಧತಿ ಹಾಗೂ ರಫೇಲ್‌ ಯುದ್ಧ ವಿಮಾನಗಳ ಖರೀದಿ ಹಗರಣ ಸಂಬಂಧ ಗುರುವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೋದಿ ಸರಕಾರದ ವಿರುದ್ಧ ಹಳೆಯ ಆರೋಪಗಳನ್ನೇ ಪುನರುಚ್ಛರಿಸಿದ್ದಾರೆ.

“ನೋಟು ರದ್ಧತಿಯ ಕ್ರಮ ದೇಶದ ಜನರ ಒಳಿತಿಗಾಗಿ ಮಾಡಿದ್ದಲ್ಲ. ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಜೇಬು ತುಂಬಿಸಲು ಈ ನೊಟು ರದ್ಧತಿಯ ಪ್ರಹಸನ ನಡೆಸಲಾಯಿತು. ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಿಗಳ ಜೇಬಿನಿಂದ ಕಸಿದುಕೊಂಡ ಹಣವನ್ನು ದೊಡ್ಡ ಉದ್ಯಮಿಗಳ ಜೇಬಿಗೆ ತುಂಬಲು ನೋಟು ರದ್ಧತಿಯನ್ನು ಬಳಸಿಕೊಳ್ಳಲಾಯಿತು” ಎಂದಿದ್ದಾರೆ ರಾಹುಲ್‌.

ನೋಟು ರದ್ಧತಿ ಮಾತ್ರವಲ್ಲ, ರಫೇಲ್‌ ಹಗರಣದಲ್ಲೂ ರಾಹುಲ್‌ ಹೊಸ ವಿಚಾರಗಳಿಲ್ಲದೆ ಹಳೆಯ ಆರೋಪಗಳನ್ನೇ ಮತ್ತೆ ಮಾಡಿದ್ದಾರೆ. “ಅಂಬಾನಿಗೆ ಅನುಕೂಲ ಮಾಡಿಕೊಡಲು ರಫೇಲ್‌ ಯುದ್ಧ ವಿಮಾನಗಳ ಖರೀದಿಯ ಹೊಸ ಒಪ್ಪಂದ ಮಾಡಿಕೊಳ್ಳಲಾಯಿತು. ಎಚ್‌ಎಎಲ್‌ ಅನ್ನು ದೂರ ಇಟ್ಟು ಅನಿಲ್‌ ಅಂಬಾನಿ ಕಂಪೆನಿಗೆ ಲಾಭ ಮಾಡಿಕೊಡಲು ಮೋದಿ ಸರಕಾರ ಮುಂದಾಗಿದೆ” ಎಂದು ರಾಹುಲ್‌ ಹೇಳಿದ್ದಾರೆ.

“ಅನಿಲ್‌ ಅಂಬಾನಿ ಕಾಂಗ್ರೆಸ್ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರು ಎಷ್ಟಾದರೂ ಮೊಕದ್ದಮೆ ಹಾಕಿಕೊಳ್ಳಲಿ. ಮಾನನಷ್ಟ ಮೊಕದ್ದಮೆ ಹಾಕುವ ಮೂಲಕ ಸತ್ಯವನ್ನು ಮುಚ್ಚಿಸಲು ಸಾಧ್ಯವಿಲ್ಲ” ಎಂದಿದ್ದಾರೆ ರಾಹುಲ್.

ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದ್ದು, 15 ಲಕ್ಷ ರೂಪಾಯಿಯನ್ನು ದೇಶದ ನಾಗರಿಕರ ಬ್ಯಾಂಕ್‌ ಅಕೌಂಟ್‌ಗೆ ಹಾಕುತ್ತೇನೆ ಎಂದು ಹೇಳಿ ಮಾತು ತಪ್ಪಿದ್ದು, ಕಪ್ಪುಹಣಕ್ಕೆ ಕಡಿವಾಣ ಹಾಕಲು ಸೋತಿದ್ದು ಮೋದಿ ಸರಕಾರದ ವೈಫಲ್ಯಗಳು ಎಂದು ಹೇಳಿದ ರಾಹುಲ್‌ ತಮ್ಮ ಹಳೆಯ ಆರೋಪಗಳಿಗೆ ಹೊಸ ಸಾಕ್ಷ್ಯ ಒದಗಿಸಲಿಲ್ಲ.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೂ ಪೂರ್ತಿಯಾಗಿ ಉತ್ತರಿಸಿದೆ ‘ಥ್ಯಾಂಕ್ಯೂ’ ಹೇಳಿ ಎದ್ದು ಹೊರಟ ರಾಹುಲ್‌ ಹಳೆಯ ಆರೋಪಗಳ ಪಟ್ಟಿಯನ್ನೇ ಮತ್ತೆ ಹೊಸದಾಗಿ ಹೇಳುವ ಮೂಲಕ ಪುನರುಚ್ಛಾರದ ಚಕ್ರವನ್ನು ಮುಂದುವರಿಸಿದ್ದಾರೆ.