ಮೋದಿ ಹತ್ಯೆ ಸಂಚು; ಬಂಧಿತರನ್ನು ಗೃಹ ಬಂಧನಕ್ಕೊಪ್ಪಿಸಿದ ಸುಪ್ರೀಂಕೋರ್ಟ್‌
ಸುದ್ದಿ ಸಾರ

ಮೋದಿ ಹತ್ಯೆ ಸಂಚು; ಬಂಧಿತರನ್ನು ಗೃಹ ಬಂಧನಕ್ಕೊಪ್ಪಿಸಿದ ಸುಪ್ರೀಂಕೋರ್ಟ್‌

ಮೋದಿ ಹತ್ಯೆ ಸಂಚಿನಡಿ ಬಂಧಿಸಿರುವ ಐದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿಸಲು ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಐದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಸೆಪ್ಟೆಂಬರ್‌ 6ರವರೆಗೆ ಗೃಹ ಬಂಧನದಲ್ಲಿರಿಸುವಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

“ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಂಬುದು ಸೇಫ್ಟಿ ವಾಲ್ವ್‌ ಇದ್ದಂತೆ. ಇಂಥ ಸೇಫ್ಟಿ ವಾಲ್ವ್‌ ಇಲ್ಲವಾದರೆ ಪ್ರೆಷರ್‌ ಕುಕ್ಕರ್‌ ಸ್ಪೋಟಗೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಬಂಧಿಸಿರುವ ಸಾಮಾಜಿಕ ಕಾರ್ಯಕರ್ತರನ್ನು ಜೈಲಿನಲ್ಲಿಡದಂತೆ ಸೂಚನೆ ನೀಡಿದೆ.

ಸೆಪ್ಟೆಂಬರ್‌ 6ಕ್ಕೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌, ಪಿ. ವರವರ ರಾವ್‌, ಗೌತಮ್‌ ನೌಲಖಾ, ಅರುಣ್‌ ಫೆರೀರಿಯ ಮತ್ತು ವೆರ್ನನ್‌ ಗೋನ್ಸಾಲ್ವೆನ್ಸ್‌ ಅವರನ್ನು ಪುಣೆ ಪೊಲೀಸರು ಮಂಗಳವಾರ ಬಂಧಿಸಿದ್ದರು.

ಸಂಶೋಧಕಿ ರೊಮಿಲಾ ಥಾಪರ್‌, ಮಾನವ ಹಕ್ಕು ಹೋರಾಟಗಾರರಾದ ದೇವಕಿ ಜೈನ್‌, ಪ್ರಭಾತ್‌ ಪಟ್ನಾಯಕ್‌, ಸತೀಶ್‌ ದೇಶಪಾಂಡೆ ಮತ್ತು ಮಾಯಾ ಧಾರುವಾಲ ಈ ಬಂಧನವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಹಿರಿಯ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ, ದುಶ್ಯಂತ್‌ ದವೆ, ಇಂದಿರಾ ಜೈಸಿಂಗ್‌ ಕೂಡಾ ಈ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಗಳಿಗೆ ಮನವಿ ಸಲ್ಲಿಸಿದ್ದರು.