ಪರಿಹಾರಕ್ಕೆ6000 ಕೋಟಿ ವಿದೇಶಿ ಸಾಲ ಪಡೆಯಲು ಕೇರಳ ಸರಕಾರದ ಸಿದ್ಧತೆ
ಸುದ್ದಿ ಸಾರ

ಪರಿಹಾರಕ್ಕೆ6000 ಕೋಟಿ ವಿದೇಶಿ ಸಾಲ ಪಡೆಯಲು ಕೇರಳ ಸರಕಾರದ ಸಿದ್ಧತೆ

ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ವಿಶ್ವಬ್ಯಾಂಕ್‌ ಸೇರಿದಂತೆ ವಿದೇಶದ ಹಣಕಾಸು ಸಂಸ್ಥೆಗಳಿಂದ 6000 ಕೋಟಿ ರೂಪಾಯಿ ಸಾಲ ಪಡೆಯಲು ಕೇರಳ ಮುಂದಾಗಿದೆ.

ಪ್ರವಾಹದಿಂದ ತತ್ತರಿಸಿರುವ ಕೇರಳ ಪರಿಹಾರಕ್ಕಾಗಿ ವಿದೇಶಿ ಸಾಲ ತೆಗೆಯಲು ಮುಂದಾಗಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 4.5ರಷ್ಟು ವಿದೇಶಿ ಸಾಲ ಪಡೆಯಲು ಕೇರಳ ಸರಕಾರ ಪ್ರಯತ್ನಿಸುತ್ತಿದೆ.

ಅರಬ್‌ ಸಂಯುಕ್ತ ಸಂಸ್ಥಾನದಿಂದ (ಯುಎಇ) 700 ಕೋಟಿ ರೂಪಾಯಿ ನೆರವು ಡೋಲಾಯಮಾನ ಪರಿಸ್ಥಿತಿಯಲ್ಲಿರುವುದರಿಂದ ವಿದೇಶಿ ಸಾಲ ಪಡೆದು ಪರಿಹಾರ ಕಾರ್ಯ ನಡೆಸಲು ಕೇರಳ ನಿರ್ಧರಿಸಿದೆ.

ಇದಕ್ಕಾಗಿ ವಿದೇಶಗಳ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಲು ಕೇರಳ ಸರಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಸದ್ಯ ವಿದೇಶಗಳ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಮಿತಿ ರಾಜ್ಯಗಳ ಜಿಡಿಪಿಯ ಶೇಕಡ 3ರಷ್ಟಿದೆ. ಈ ಮಿತಿಯನ್ನು ಶೇಕಡ 4.5ಕ್ಕೆ ಹೆಚ್ಚಿಸಲು ಕೇರಳ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರ ಸರಕಾರ ಕೇರಳದ ಮನವಿಗೆ ಒಪ್ಪಿದಲ್ಲಿ ಕೇರಳ ಸುಮಾರು 6000 ಕೋಟಿ ವಿದೇಶಿ ಸಾಲ ಪಡೆಯಬಹುದು. ವಿಶ್ವಬ್ಯಾಂಕ್‌, ಏಷ್ಯನ್‌ ಡೆವಲಪ್‌ಮೆಂಟ್ ಬ್ಯಾಂಕ್‌, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಫ್‌ಸಿ) ಮೊದಲಾದ ವಿದೇಶಿ ಹಣಕಾಸು ಸಂಸ್ಥೆಗಳಿಂದ ಪರಿಹಾರಕ್ಕೆ ಸಾಲದ ನೆರವು ಪಡೆಯಲು ಕೇರಳ ನಿರ್ಧರಿಸಿದೆ.

ಈ ಸಂಬಂಧ ವಿಶ್ವಬ್ಯಾಂಕ್‌ನ ಭಾರತೀಯ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಮುಖ್ಯ ಕಾರ್ಯದರ್ಶಿ ಟಾಮ್‌ ಜೋಸ್‌ ಮತ್ತು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್‌ ಜೋಶಿ ಅವರೊಂದಿಗೆ ಮಾತುಕತೆ ನಡೆಸಲಿದೆ.

ಕೇರಳದಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ವಿಶ್ವಬ್ಯಾಂಕ್‌ ತಂಡ ವಿವರವಾದ ಮಾಹಿತಿ ಕಲೆಹಾಕುತ್ತಿದೆ ಎನ್ನಲಾಗಿದೆ. ಹಾನಿಯ ಪ್ರಮಾಣವನ್ನು ತಂಡ ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ. ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ಪಿಣರಾಯಿ ವಿಜಯನ್‌ ವಿಧಾನಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ.

ಪ್ರವಾಹದಿಂದ 19,512 ಕೋಟಿ ರೂಪಾಯಿ ಹಾನಿಯಾಗಿದೆ ಎಂಬ ಪ್ರಾಥಮಿಕ ಅಂದಾಜಿತ್ತು. ಆದರೆ, ಈವರೆಗೆ 25 ಸಾವಿರ ಕೋಟಿ ಹಾನಿಯಾಗಿದೆ ಎಂಬುದು ಪರಿಷ್ಕೃತ ಅಂದಾಜು ಎಂದು ಸರಕಾರದ ಮೂಲಗಳು ಹೇಳಿವೆ. ಈ ಹಾನಿಯ ಪೈಕಿ ಕನಿಷ್ಠ ನಾಲ್ಕನೇ ಒಂದು ಭಾಗದಷ್ಟನ್ನು ವಿದೇಶಿ ಸಾಲದ ಮೂಲಕ ಪಡೆಯಬೇಕೆಂಬುದು ಕೇರಳ ಸರಕಾರದ ಉದ್ದೇಶ. ವಿಶ್ವಬ್ಯಾಂಕ್‌ ಕೇರಳಕ್ಕೆ ಈಗಾಗಲೇ ಆರ್ಥಿಕ ಸಹಕಾರ ನೀಡಿದ್ದು, ಕೇರಳ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಜಲನಿಧಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡಿದೆ. ಆದರೂ, ಪರಿಹಾರಕ್ಕಾಗಿ ಸಾಲ ಪಡೆಯಲು ಸಾಧ್ಯವಾದಷ್ಟೂ ಪ್ರಯತ್ನ ನಡೆಸಲು ಸರಕಾರ ಮುಂದಾಗಿದೆ.

ಈ ಮಧ್ಯೆ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪೊನ್‌ ರಾಧಾಕೃಷ್ಣನ್‌ ಅವರ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳ ತಂಡ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ ಸಭೆ ನಡೆಸಲಿದೆ. ಪ್ರವಾಹದಿಂದ ಹಾನಿಗೊಳಗಾದ ವ್ಯಾಪಾರಿಗಳಿಗೆ ಕಾನೂನಿನ ತೊಡಕಾಗದಂತೆ ಸಾಲ ಕೊಡಿಸಲು ಈ ಸಭೆ ನಡೆಸಲಾಗುತ್ತಿದೆ. ಪ್ರವಾಹದಿಂದಾಗಿ ದಾಖಲೆಗಳನ್ನು ಕಳೆದುಕೊಂಡಿರುವ ಸಂತ್ರಸ್ತ ಪಾಲಿಸಿದಾರರಿಗೆ ಮಾನವೀಯ ದೃಷ್ಟಿಯಿಂದ ವಿಮಾ ಹಣ ನೀಡುವಂತೆ ವಿಮಾ ಕಂಪೆನಿಗಳಿಗೆ ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್‌ ಮನವಿ ಮಾಡಿದ್ದಾರೆ.