samachara
www.samachara.com
ಮತ್ತೆ ‘ಮೋದಿ ಹತ್ಯೆ’ ಗುಮ್ಮ:  ದೇಶಾದ್ಯಂತ ಹೋರಾಟಗಾರರ ಬಂಧನ
ಸುದ್ದಿ ಸಾರ

ಮತ್ತೆ ‘ಮೋದಿ ಹತ್ಯೆ’ ಗುಮ್ಮ: ದೇಶಾದ್ಯಂತ ಹೋರಾಟಗಾರರ ಬಂಧನ

ಮಂಗಳವಾರ ದೇಶದ ಹಲವಾರು ಮಾನವ ಹಕ್ಕು ಹೋರಾಟಗಾರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಭೀಮಾ ಕೋರೆಂಗಾವ್‌ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ನಡೆದಿದೆ.

ಪುಣೆ ಪೊಲೀಸರು ಸೋಮವಾರ ತಡರಾತ್ರಿಯಿಂದಲೇ ದೇಶದ ಪ್ರಮುಖ ಬರಹಗಾರರು, ವಕೀಲರು, ಮಾನವ ಹಕ್ಕುಗಳ ಹೋರಾಟಗಾರರ ಮನೆ ಮೇಲೆ ದಾಳಿ ಆರಂಭಿಸಿದ್ದಾರೆ. ಈವೆರಗು 4 ಜನರನ್ನು ಬಂಧಿಸಿದ್ದು, ಹಲವರ ಮನೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಮಂಗಳವಾರ ಬೆಳಗ್ಗೆ 5. 30ರ ವೇಳೆಗೆ ಪುಣೆ ಪೊಲೀಸರು ಹರ್ಯಾಣದಲ್ಲಿ ವಕೀಲೆ ಸುಮಾ ಭಾರಧ್ವಜ್‌ ಮನೆ ಮೇಲೆ ದಾಳಿ ನಡೆಸಿ, ಬಂಧಿಸಿದ್ದಾರೆ. ಜತೆಗೆ ಅವರ ಲ್ಯಾಪ್‌ಟಾಪ್‌, ಮೊಬೈಲ್‌, ಪೆನ್‌ಡ್ರೈವ್‌, ಡೈರಿ ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ವೆರ್ನನ್‌ ಗೋನ್ಸಾಲ್ವೆನ್ಸ್‌ರನ್ನು ಪೊಲೀಸರು ಬಂಧಿಸಿದ್ದು, ಈ ಬಂಧನ ನಡೆದದ್ದಾರೂ ಏಕೆ ಎಂದು ಈವರೆಗೂ ಗೋನ್ಸಾಲ್ವೆನ್ಸ್ ಕುಟುಂಬಸ್ಥರಿಗೆ ತಿಳಿದಿಲ್ಲ. ಕವಿ ವರವರರಾವ್‌ರನ್ನು ಹೈದರಾಬಾದ್‌ನ ಅವರ ನಿವಾಸದಲ್ಲೇ ಬಂಧಿಸಿ, ನಾಮಪಲ್ಲಿ ನ್ಯಾಯಾಲಯಕ್ಕೆ ಕರದೊಯ್ಯಲಾಗಿದೆ.

ವರವರರಾವ್‌ ಬಂಧನದ ಕುರಿತು ‘ಸಾಕ್ಷಿ’ ಸುದ್ದಿ ವಾಹಿನಿ ಜತೆ ಮಾತನಾಡಿರುವ ವರವರರಾವ್‌ರವರ ಅಳಿಯ ಮತ್ತು ‘ವೀಕ್ಷಣಂ’ ತೆಲುಗು ಪತ್ರಿಕೆಯ ಸಂಪಾದಕ ವೇಣು ಗೋಪಾಲ್‌, “ಗಡ್‌ಚಿರೋಲಿಗಳಂತಹ ಪ್ರದೇಶಗಳಲ್ಲಿ ನಡೆಯುವ ದಲಿತರ ಆದಿವಾಸಿಗಳ ಹತ್ಯೆಗಳನ್ನು ಪ್ರಶ್ನಿಸುವವರ ಧ್ವನಿಯನ್ನು ಅಡಗಿಸುವ ಪ್ರಯತ್ನವಿದು. ರಾವ್‌ ಜತೆಗೆ ಅವರ ಮಕ್ಕಳು ಮತ್ತು ಅಳಿಯಂದಿರನ್ನು ಕೂಡ ಗುರಿಯಾಗಿಸಲಾಗಿದೆ. ರಾವ್‌ ರಾಜಕಾರಣಕ್ಕೂ, ಇವರಿಗೂ ಯಾವ ಸಂಬಂಧವೂ ಇಲ್ಲ. ಕೇಂದ್ರ ಸರಕಾರ, ಮಹಾರಾಷ್ಟ್ರ ಸರಕಾರ ಮತ್ತು ತೆಲಂಗಾಣ ಸರಕಾರಗಳು ಒಟ್ಟಾಗಿ ಸೇರಿ ಪ್ರಜಾಪ್ರಭುತ್ವದ ಧ್ವನಿಗಳನ್ನು ಅಡಗಿಸಲು ಪ್ರಯತ್ನಿಸುತ್ತಿವೆ,” ಎಂದಿದ್ದಾರೆ.

ಪತ್ರಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗೌತಮ್‌ ನಾವ್ಲಖಾರನ್ನು ದೆಹಲಿಯ ಅವರ ನಿವಾಸದಲ್ಲಿ ನಿನ್ನೆ ತಡರಾತ್ರಿ 2 ಗಂಟೆಯ ವೇಳೆಗೆ ಬಂಧಿಸಲಾಗಿದೆ. ಅವರನ್ನು ಪುಣೆಗೆ ಕರೆದೊಯ್ಯಲು ಪೊಲೀಸರು ಚಿಂತಿಸುತ್ತಿದ್ದಾರೆ. ಹೋರಾಟಗಾರ ಫೆರೈರಾರನ್ನು ಥಾನೆಯಲ್ಲಿನ ಅವರ ಮನೆಯಿಂದ ನಿನ್ನೆ ರಾತ್ರಿ 3 ಗಂಟೆಯ ವೇಳೆಗೆ ಬಂಧಿಸಲಾಗಿದೆ. ಅವರನ್ನು ಪೊಲೀಸರು ಪುಣೆಯತ್ತ ಕರೆದೊಯ್ಯುತ್ತಿದ್ದಾರೆ ಎಂದು ಸುದ್ದಿಗಳು ಹೇಳುತ್ತಿವೆ.

ಸುಸಾನ್‌ ಅಬ್ರಹಾಮ್‌, ಪತ್ರಕರ್ತ ಕ್ರಾಂತಿ ತೆಕುಲ, ಫಾದರ್‌ ಸ್ಟಾನ್‌ ಸ್ವಾಮಿ, ಮತ್ತು ಅನಂದ್‌ ತೇಲ್ತುಂಬ್ಡೆ ಮಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವರವರರಾವ್‌ರ ಮಗಳು ಅನಲ ಮತ್ತು ಅಳಿಯ ಕೆ. ವಿ. ಕುರ್ಮನಾಥ್‌ರ ಮನೆಯ ಮೇಲೆ ಕೂಡ ಪೊಲೀಸರಿಂದ ದಾಳಿ ನಡೆದಿದೆ.

ಬೀಮಾ ಕೋರೆಂಗಾವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇವರೆಲ್ಲರ ಬಂಧನ ಮತ್ತು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ಇದೇ ವಿಯಷಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ನಾಗ್ಪುರದ ವಕೀಲ ಸುರೇಂದ್ರ ಗಾಡ್ಲಿಂಗ್‌, ದಲಿತ ಹೋರಾಟಗಾರ ಸುಧೀರ್‌ ಧಾವಲೆ, ಹೋರಾಟಗಾರ ಮಹೇಶ್‌ ರಾವತ್‌, ರೋನಾ ವಿಲ್ಸನ್‌ ಹಾಗೂ ನಾಗ್ಪುರ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಶೋಮಾ ಸೇನ್‌ರನ್ನು ಬಂಧಿಸಲಾಗಿತ್ತು.

ಸೋಮವಾರ ತಡರಾತ್ರಿಯಿಂದ ದಾಳಿ ಆರಂಭಿಸಿರುವ ಪೊಲೀಸರು, ಈಗಲು ಕೂಡ ಬಂಧನ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಂಧಿತರ ಲ್ಯಾಪ್‌ಟಾಪ್‌, ಫೋನ್‌ ಇತ್ಯಾದಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುಣೆಯ ವಿಶ್ರಾಮ್‌ಬಾಗ್‌ ಪೊಲೀಸ್‌ ಠಾಣೆಯ ಪೊಲೀಸರು ಈ ಅನಿಶ್ಚಿತ ದಾಳಿಯನ್ನು ನಡೆಸಿದ್ದು, ಇದಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಹೀಗೆ, ಒಂದು ಕಡೆ ವಿಚಾರವಾದಿಗಳ ಹತ್ಯೆ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾದಂತಹ ಹಿಂದುತ್ವವಾದಿ ಸಂಘಟನೆಗಳ ಬಗೆಗೆ ಚರ್ಚೆ ಆರಂಭವಾಗಿರುವ ಹೊತ್ತಿನಲ್ಲಿಯೇ ದೇಶದ ಪ್ರಧಾನಿ ಹತ್ಯೆ ಸಂಚಿನ ವಿಚಾರವೂ ಸುದ್ದಿ ಕೇಂದ್ರಕ್ಕೆ ಬಂದಿದೆ.