ಕೇರಳ ಪರಿಹಾರ ನಿಧಿಗೆ 45,000 ರೂಪಾಯಿ ದಂಡ ಕಟ್ಟುವಂತೆ ಸಿಬಿಐ ಕೋರ್ಟ್ ಆದೇಶ
ಸುದ್ದಿ ಸಾರ

ಕೇರಳ ಪರಿಹಾರ ನಿಧಿಗೆ 45,000 ರೂಪಾಯಿ ದಂಡ ಕಟ್ಟುವಂತೆ ಸಿಬಿಐ ಕೋರ್ಟ್ ಆದೇಶ

ನ್ಯಾಯಾಲಯಗಳು ಅಪರಾಧಿಗಳಿಗೆ ದಂಡ ವಿಧಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕೋರ್ಟ್‌ ಕೇರಳ ಸಿಎಂ ಪರಿಹಾರ ನಿಧಿಗೆ ದಂಡ ಕಟ್ಟುವಂತೆ ಆದೇಶ ನೀಡಿ ಸುದ್ದಿಗೆ ಗ್ರಾಸವಾಗಿದೆ.

ನ್ಯಾಯಾಲಯಗಳು ಅಪರಾಧಿಗಳಿಗೆ ದಂಡ ವಿಧಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕೋರ್ಟ್‌ ವಿಶೇಷವಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಂಡ ಕಟ್ಟುವಂತೆ ಆದೇಶ ನೀಡಿ ಸುದ್ದಿಗೆ ಗ್ರಾಸವಾಗಿದೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದ ಮೂವರು ಅಧಿಕಾರಿಗಳಿಗೆ ತಲಾ 15,000 ರೂಪಾಯಿಯಂತೆ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಕಟ್ಟಿ ಎಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಆದೇಶ ನೀಡಿದ್ದಾರೆ.

ಕೇಂದ್ರ ಅಬಕಾರಿ ಮತ್ತು ಅಡಿಟ್‌ ಇಲಾಖೆಗೆ ಸೇರಿದ ಮಾಜಿ ಸೂಪರಿಂಟೆಂಡೆಂಟ್‌ಗಳಾದ ಅನಿಲ್‌ ಕುಮಾರ್‌ ಮತ್ತು ಅಜಯ್‌ ಸಿಂಗ್ ಮತ್ತು ಮಾಜಿ ಇನ್ಸ್‌ಪೆಕ್ಟರ್‌ ದಹಿಯಾ ಫೆಬ್ರವರಿ 27 ರಂದು 3 ಲಕ್ಷ ರೂಪಾಯಿ ಲಂಚ ಪಡೆದುಕೊಳ್ಳುವಾಗ ಸಿಕ್ಕಿ ಬಿದ್ದಿದ್ದರು. ತೆರಿಗೆ ಕಳ್ಳತನ ನಡೆಸಿದ್ದ ಕಂಪನಿಯೊಂದಕ್ಕೆ ಕಡಿಮೆ ದಂಡ ವಿಧಿಸಲು ಈ ಲಂಚವನ್ನು ಸ್ವೀಕರಿಸುವ ವೇಳೆ ಮೂವರನ್ನೂ ಸೋನಿಪತ್‌ನ ಮುರ್ಥಾಲ್‌ನಲ್ಲಿ ಬಂಧಿಸಲಾಗಿತ್ತು.

ಇದೀಗ ನ್ಯಾಯಾಧೀಶರು ಮೂವರಿಗೂ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಕಟ್ಟಿ ಅಕ್ಟೋಬರ್‌ 1ರ ವಿಚಾರಣೆಗೂ ಮೊದಲು ಅದರ ಬಿಲ್‌ ನೀಡುವಂತೆ ತಾಕೀತು ಮಾಡಿದ್ದಾರೆ.

ಆಗಿದ್ದೇನು?

ಕಂಪನಿಯೊಂದು ಅಬಕಾರಿ ಸುಂಕ ಕಟ್ಟುವಲ್ಲಿ ಮೋಸ ಮಾಡಿದ್ದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ತನಿಖೆ ಆರಂಭಿಸಲಾಗಿತ್ತು. ಈ ವೇಳೆ ಕಂಪನಿಗೆ 25ರಿಂದ 30 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದರು. ಈ ಮೊತ್ತವನ್ನು ಕಡಿಮೆ ಮಾಡಲು 10 ಲಕ್ಷ ರೂಪಾಯಿ ಲಂಚ ನೀಡುವಂತೆ ಮೂವರು ಅಧಿಕಾರಿಗಳು ಬೇಡಿಕೆ ಮುಂದಿಟ್ಟಿದ್ದರು. ಕೊನೆಗೆ 9 ಲಕ್ಷ ರೂಪಾಯಿಗೆ ಡೀಲ್‌ ಅಂತಿಮವಾಗಿತ್ತು. ಈ ಸಂಬಂಧ ಮೊದಲ ಕಂತಿನ ಹಣವನ್ನು ಫೆಬ್ರವರಿ 27ರಂದು ಸ್ವೀಕರಿಸುವ ವೇಳೆ ದಾಳಿ ನಡೆಸಿ ಮೂವರನ್ನು ಸಿಬಿಐ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೀಗ ಆರೋಪಿಗಳಿಗೆ ಪರಿಹಾರ ನಿಧಿಗೆ ದಂಡ ಕಟ್ಟುವಂತೆ ಆದೇಶ ನೀಡಿದೆ.

ಹರಿದು ಬಂದ 713.9 ಕೋಟಿ ರೂಪಾಯಿ

ಜಗತ್ತಿನ ಮೂಲೆ ಮೂಲೆಗಳಿಂದ ಕೇರಳಕ್ಕೆ ಪರಿಹಾರ ಹರಿದು ಬರುತ್ತಿದೆ. ಪರಿಣಾಮ ನೈಸರ್ಗಿಕ ವಿಕೋಪ ನಡೆದ 14 ದಿನಗಳ ಅಂತ್ಯಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯಲ್ಲಿ 713.9 ಕೋಟಿ ರೂಪಾಯಿ ಹಣ ಜಮೆಯಾಗಿದೆ. ಇದು ಕೇಂದ್ರ ಸರಕಾರ ನೀಡಿದ 600 ಕೋಟಿ ರೂಪಾಯಿ ಪರಿಹಾರಕ್ಕಿಂತ ಶೇಕಡಾ 20ರಷ್ಟು ಹೆಚ್ಚು ಎಂಬುದು ಗಮನಾರ್ಹ.

ಆಗಸ್ಟ್‌ 14ರ ನಂತರ ಒಟ್ಟು 3.91 ಲಕ್ಷ ಜನರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಇದರಲ್ಲಿ 132.62 ಕೋಟಿ ರೂಪಾಯಿ ಬ್ಯಾಂಕ್‌ಗಳು ಮತ್ತು ಯುಪಿಐ ಮೂಲಕವೇ ಹರಿದು ಬಂದಿದೆ. ಪೇಟಿಎಂ ಆಪ್‌ ಮೂಲಕವೇ 43 ಕೋಟಿ ರೂಪಾಯಿ ಹಣ ಬಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆಯಾಗಿದ್ದರೆ, ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿರುವ ಖಾತೆಯಲ್ಲಿ 518.24 ಕೋಟಿ ರೂಪಾಯಿ ಜಮೆಯಾಗಿದೆ. ಇದರ ಜತೆಗೆ ಮುಖ್ಯಮಂತ್ರಿಗಳ ಕಚೇರಿ ನಗದು, ಚೆಕ್‌ ಮತ್ತು ಡ್ರಾಫ್ಟ್‌ಗಳನ್ನು ಪಡೆದುಕೊಂಡಿದ್ದು ಅವುಗಳ ಮೊತ್ತ ರೂಪಾಯಿ 20 ಕೋಟಿ ದಾಟಿದೆ.