NH 206: ರಸ್ತೆ ಜತೆಗೆ ಪರಿಹಾರದ ‘ಬೈಪಾಸ್‌’ಗೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಸುದ್ದಿ ಸಾರ

NH 206: ರಸ್ತೆ ಜತೆಗೆ ಪರಿಹಾರದ ‘ಬೈಪಾಸ್‌’ಗೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ವಿಸ್ತರಣೆ ಹಾಗೂ ಬೈಪಾಸ್‌ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಮುಂದಾಗಿರುವ ಹೆದ್ದಾರಿ ಪ್ರಾಧಿಕಾರ ನ್ಯಾಯಯುತ ಪರಿಹಾರ ನೀಡುತ್ತಿಲ್ಲ ಎಂಬುದು ಸಂತ್ರಸ್ತರ ಅಳಲು.

ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ (ತುಮಕೂರು – ಹೊನ್ನಾವರ ಸೆಕ್ಷನ್‌) ರಸ್ತೆ ವಿಸ್ತರಣೆ ಹಾಗೂ ಹೊಸದಾಗಿ ಬೈಪಾಸ್‌ ನಿರ್ಮಾಣ ಮಾಡಲು ಮುಂದಾಗಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸರಿಯಾದ ಪರಿಹಾರ ನೀಡುತ್ತಿಲ್ಲ ಎಂಬುದು ಯೋಜನೆಗಾಗಿ ಭೂಮಿ ಕಳೆದುಕೊಳ್ಳಲಿರುವವರ ಅಳಲು.

ಎಸಿ, ಡಿಸಿಗೆ ಮನವಿ ಕೊಟ್ಟು ಸಾಕಾದ ಬಳಿಕ ಯೋಜನೆಯ ಸಂತ್ರಸ್ತರಾಗಲಿರುವವರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ದೂರು ಹಿಡಿದು ಮಂಗಳವಾರ ಬೆಂಗಳೂರಿನ ವಿಧಾನಸೌಧ ಹಾಗೂ ಹೈಕೋರ್ಟ್‌ನ ಕೂಗಳತೆ ದೂರದಲ್ಲಿರುವ ಪ್ರೆಸ್‌ಕ್ಲಬ್‌ಗೆ ಬಂದಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳಲಿರುವ ಸಂತ್ರಸ್ತರ ಜತೆಗೆ ಮಾತನಾಡದೇ ಏಕಪಕ್ಷೀಯವಾಗಿ ಭೂಮಿಯ ಪರಿಹಾರ ನಿಗದಿ ಮಾಡುತ್ತಿದೆ ಎಂಬುದು ಅವರ ದೂರಾಗಿತ್ತು.

ರಾಷ್ಟ್ರೀಯ ಹೆದ್ದಾರಿ 206 ಹಾದು ಹೋಗುವ ಮಾರ್ಗದಲ್ಲಿ ಸಿಗುವ ಪಟ್ಟಣಗಳ ಸಮೀಪ ಬೈಪಾಸ್‌ ನಿರ್ಮಿಸುವುದು ಹಾಗೂ ಈಗಿರುವ ರಸ್ತೆಯನ್ನು ವಿಸ್ತರಿಸುವುದು ಹೆದ್ದಾರಿ ಪ್ರಾಧಿಕಾರದ ಮುಂದಿರುವ ಯೋಜನೆ. ಇದಕ್ಕಾಗಿ ಪ್ರಾಧಿಕಾರ 2016ರಲ್ಲೇ ಮೊದಲ ಅಧಿಸೂಚನೆ ಹೊರಡಿಸಿದ್ದು, ಭೂಮಿ ಗುರುತು ಕಾರ್ಯವೂ ಮುಗಿದಿದೆ. ಆದರೆ, ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ರೂಪದಲ್ಲಿ ಪ್ರತಿ ಗುಂಟೆಗೆ ಕೆಲವೇ ಸಾವಿರ ರೂಪಾಯಿಗಳನ್ನು ನೀಡಲು ಪ್ರಾಧಿಕಾರ ಮುಂದಾಗಿದೆ ಎಂಬುದು ಭೂಮಿ ಕಳೆದುಕೊಳ್ಳಲಿರುವವರ ದೂರು.

“ಯೋಜನೆಗಾಗಿ ಭೂಮಿ ಗುರುತಿಸಿ ಎರಡು ವರ್ಷ ಕಳೆದಿದೆ. ಕೆಲವು ಕಡೆಗಳಲ್ಲಿ ಗುಂಟೆಗೆ 6 ಸಾವಿರ ಕೊಡುವುದಾಗಿ ಹೇಳಿದರೆ ಕೆಲವು ಕಡೆಗಳಲ್ಲಿ 25 ಸಾವಿರ ಕೊಡುವುದಾಗಿ ಹೇಳುತ್ತಿದ್ದಾರೆ. ತಿಪಟೂರಿನಲ್ಲಿ ಬೈಪಾಸ್‌ಗೆ ಗುರುತಿಸಿರುವ ಜಾಗದಲ್ಲಿ ಪ್ರತಿ ಗುಂಟೆಗೆ ಸುಮಾರು 2 ಲಕ್ಷ ರೂಪಾಯಿ ಮಾರುಕಟ್ಟೆ ಬೆಲೆ ಇದೆ. ಆದರೆ, ಪ್ರಾಧಿಕಾರದ ಅಧಿಕಾರಿಗಳು ಗುಂಟೆಗೆ 25 ಸಾವಿರ ಕೊಡುವುದಾಗಿ ಹೇಳುತ್ತಿದ್ದಾರೆ. ಈ ಮೊತ್ತದ ಪರಿಹಾರಕ್ಕೆ ಭೂಮಿ ಬಿಟ್ಟುಕೊಟ್ಟರೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡವರ ಬದುಕು ಬೀದಿಗೆ ಬೀಳುತ್ತದೆ” ಎಂಬುದು ತಿಪಟೂರಿನ ರೈತ ಮನೋಹರ್‌ ಅವರ ಅಳಲು.

“ತಿಪಟೂರಿನಲ್ಲಿ ಈ ಹಿಂದೆಯೇ ಒಂದು ಬೈಪಾಸ್‌ಗೆ ಭೂ ಸ್ವಾಧೀನ ನಡೆದಿದೆ. ಅದೇ ಬೈಪಾಸ್‌ ಅನ್ನು ಈ ಯೋಜನೆಗೆ ಪರಿಗಣಿಸಿ ರಸ್ತೆ ಅಭಿವೃದ್ಧಿಪಡಿಸಬಹುದಿತ್ತು. ಆದರೆ, ಹೊಸದಾಗಿ ಬೈಪಾಸ್‌ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಬೈಪಾಸ್‌ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿ 206ರ ಸಮೀಪದಲ್ಲಿರುವ ಹಲವು ಗ್ರಾಮಗಳು ಹಾಗೂ ಕೃಷಿ ಭೂಮಿ ಇಲ್ಲವಾಗುತ್ತದೆ. ಕೃಷಿಯನ್ನೇ ನೆಚ್ಚಿಕೊಂಡಿರುವ ರೈತರು ಭೂಮಿ ಕಳೆದುಕೊಳ್ಳಬೇಕಾದ ಸಂದರ್ಭದಲ್ಲಿ ನ್ಯಾಯಯುತ ಪರಿಹಾರ ನೀಡಬೇಕು, ಇಲ್ಲವಾದರೆ ಯೋಜನೆಯನ್ನೇ ಕೈಬಿಡಬೇಕು” ಎಂಬುದು ಅವರ ಆಗ್ರಹ.

ಹೆದ್ದಾರಿ ಯೋಜನೆ ಹಾಗೂ ಪರಿಹಾರದಲ್ಲಿನ ಅನ್ಯಾಯದ ಬಗ್ಗೆ ಸಮಾಲೋಚನೆ ನಡೆಸಲು ಸೆಪ್ಟೆಂಬರ್‌ 3ರಂದು ತಿಪಟೂರಿನಲ್ಲಿ ‘ರಾಷ್ಟ್ರೀಯ ಹೆದ್ದಾರಿ- 206 ಸಂತ್ರಸ್ತರ ಹೋರಾಟಸಮಿತಿ’, ‘ರೈತ- ಕೃಷಿ ಕಾರ್ಮಿಕರ ಸಂಘಟನೆ’ (ಆರ್‌ಕೆಎಸ್) ಹಾಗೂ ‘ಕರ್ನಾಟಕ ರಾಜ್ಯ ರೈತಸಂಘ’ದ ನೇತೃತ್ವದಲ್ಲಿ ‘ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಸಮಾವೇಶ’ ನಡೆಸಲು ಉದ್ದೇಶಿಸಲಾಗಿದೆ. ಭೂ ಹೋರಾಟಗಾರರು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಹೋರಾಟ ರೂಪಿಸಲು ಸಂತ್ರಸ್ತರು ಮುಂದಾಗಿದ್ದಾರೆ.

ಸಂತ್ರಸ್ತರ ಪ್ರಮುಖ ಬೇಡಿಕೆಗಳು:

  • ಭೂಮಿ, ಮನೆ, ನಿವೇಶನ ಕಳೆದುಕೊಳ್ಳುವ ಸಂತ್ರಸ್ತರಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು.
  • ಅಧಿಸೂಚನೆ ಹೊರಡಿಸಿದಾಗಿನಿಂದ ಇಲ್ಲಿಯವರೆಗೂ ಕಾಮಗಾರಿ ವಿಳಂಬದಿಂದಾಗಿ ಸಂತ್ರಸ್ತರಿಗೆ ಆಗಿರುವ ನಷ್ಟವನ್ನು ಸಂಪೂರ್ಣವಾಗಿ ತುಂಬಿಕೊಡಬೇಕು.
  • ಜಮೀನು, ನಿವೇಶನ ಮತ್ತು ಮನೆಗಳನ್ನು ಕಳೆದುಕೊಂಡು ಜೀವನಾಧಾರವನ್ನೇ ಕಳೆದುಕೊಂಡವರಿಗೆ ಪರಿಹಾರದ ಜೊತೆಗೆ
  • ಪರ್ಯಾಯವಾಗಿ ಜಮೀನು ಮತ್ತು ನಿವೇಶನಗಳನ್ನು ನೀಡಬೇಕು.
  • ಮರ- ಗಿಡ, ಬಾವಿ, ಕೊಳವೆಬಾವಿಗಳ ಸರ್ವೇ ವೇಳೆ ಸಾಕಷ್ಟು ಲೋಪದೋಷಗಳಿದ್ದು ಕೂಡಲೇ ಈ ಬಗ್ಗೆ ಮರುಪರಿಶೀಲನೆ ನಡೆಸಬೇಕು.
  • ಹಲವಾರು ಕಡೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬದಲಾಯಿಸಿರುವ ರಸ್ತೆ ಅಲೈನ್‌ಮೆಂಟ್ ಅನ್ನು ಕೂಡಲೇ ಸರಿಪಡಿಸಬೇಕು.
  • ಸರ್ವೇಕಾರ್ಯಕ್ಕೂ ಮುನ್ನ ಪ್ರತಿ ಗ್ರಾಮದ್ಲಲೂ ರೈತರ, ನಾಗರಿಕರ ಸಭೆ ಕರೆದು ಅವರ ಗೊಂದಲಗಳನ್ನು ನಿವಾರಿಸಬೇಕು.
  • ಸಂತ್ರಸ್ತರಿಗೆ ಕಾಮಗಾರಿ ಆರಂಭಕ್ಕೂ ಮೊದಲೇ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರವನ್ನು ನೀಡಬೇಕು.
  • ಸಂತ್ರಸ್ತ ಕುಟುಂಬದವರಿಗೆ ಅವರವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರಿ ಕೆಲಸ ನೀಡಬೇಕು.
  • ಬೈಪಾಸ್‌ ನಿರ್ಮಾಣ ಮಾಡುವ ಕಡೆ ಫ್ಲೈ ಓವರ್‌ ನಿರ್ಮಿಸುವುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.