ಅಂದು ಪ್ರಣವ್‌, ಇಂದು ರಾಹುಲ್‌, ಯಚೂರಿ; ಉಪನ್ಯಾಸಕ್ಕೆ ಆಹ್ವಾನಿಸಲು ಆರ್‌ಎಸ್‌ಎಸ್‌ ಸಿದ್ಧತೆ?
ಸುದ್ದಿ ಸಾರ

ಅಂದು ಪ್ರಣವ್‌, ಇಂದು ರಾಹುಲ್‌, ಯಚೂರಿ; ಉಪನ್ಯಾಸಕ್ಕೆ ಆಹ್ವಾನಿಸಲು ಆರ್‌ಎಸ್‌ಎಸ್‌ ಸಿದ್ಧತೆ?

ಭಿನ್ನ ಸೈದ್ಧಾಂತಿಕ ಹಿನ್ನೆಲೆಯವರನ್ನು ಕರೆಸಿ ಮಾತನಾಡಲು ನಿರ್ಧರಿಸಿರುವ ಆರ್‌ಎಸ್‌ಎಸ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ.

ಕೆಲ ತಿಂಗಳ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಮಾತನಾಡಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಈಗ ತನ್ನ ಉಪನ್ಯಾಸ ಮಾಲಿಕೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರನ್ನು ಕರೆಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಹಾಗೂ ಬೇರೆ ಬೇರೆ ರಾಜಕೀಯ ನಂಬಿಕೆಗಳ ಪ್ರಮುಖರನ್ನು ಕರೆಸಿ ಮಾತನಾಡಿಸುವ ಉದ್ದೇಶ ಹೊಂದಿರುವ ಆರ್‌ಎಸ್‌ಎಸ್‌, ಮುಂದಿನ ತಿಂಗಳು ನಡೆಯುವ ಮೂರು ದಿನಗಳ ಉಪನ್ಯಾಸ ಮಾಲಿಕೆಗೆ ರಾಹುಲ್‌ ಗಾಂಧಿ ಮತ್ತು ಸೀತಾರಾಮ್‌ ಯಚೂರಿ ಅವರನ್ನು ಕರೆಸಲು ಮುಂದಾಗಿದೆ ಎಂದು ಸಂಘಟನೆಯ ಮೂಲಗಳು ತಿಳಿಸಿವೆ.

ರಾಹುಲ್‌ ಗಾಂಧಿ ಲಂಡನ್‌ನಲ್ಲಿ ಮಾತನಾಡುತ್ತಾ ಆರ್‌ಎಸ್‌ಎಸ್‌ ಸಂಘಟನೆಯನ್ನು ಇಸ್ಲಾಮಿಕ್‌ ಮೂಲಭೂತವಾದಿ ಸಂಘಟನೆ ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಉಪನ್ಯಾಸ ಮಾಲಿಕೆಗೆ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಲು ಮುಂದಾಗಿರುವ ಸುದ್ದಿ ಹೊರಬಿದ್ದಿದೆ.

‘ಭಾರತದ ಭವಿಷ್ಯ: ಆರ್‌ಎಸ್‌ಎಸ್‌ನ ದೃಷ್ಟಿಕೋನ’ ವಿಷಯದ ಕುರಿತು ಸೆಪ್ಟೆಂಬರ್‌ ತಿಂಗಳಲ್ಲಿ ಮೂರು ದಿನಗಳ ಉಪನ್ಯಾಸ ಮಾಲಿಕೆ ನಡೆಸಲು ಆರ್‌ಎಸ್‌ಎಸ್‌ ಸಿದ್ಧತೆ ನಡೆಸಿದೆ. ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್‌ ಮೂರು ದಿನಗಳ ಉಪನ್ಯಾಸ ಮಾಲಿಕೆ ನಡೆಸುತ್ತಿದೆ ಎಂದು ಆರ್‌ಎಸ್‌ಎಸ್‌ ಪ್ರಚಾರ ಪ್ರಮುಖ್‌ ಅರುಣ್‌ ಕುಮಾರ್‌ ಹೇಳಿದ್ದಾರೆ.

“ದೆಹಲಿಯ ವಿಜ್ಞಾನ ಭವನದಲ್ಲಿ ಸೆಪ್ಟೆಂಬರ್ 17ರಿಂದ 19ರವರೆಗೆ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮೋಹನ್‌ ಭಾಗವತ್‌ ಅವರು ಪ್ರಮುಖವಾಗಿ ಮಾತನಾಡುತ್ತಾರೆ. ಜತೆಗೆ ಆಯ್ದ ಪ್ರಮುಖರ ಜತೆಗೆ ಸಂವಾದ ನಡೆಸಲಿದ್ದಾರೆ. ಭಾರತದ ಸಮಕಾಲೀನ ಸಮಸ್ಯೆಗಳಿಗೆ ಆರ್‌ಎಸ್‌ಎಸ್‌ ದೃಷ್ಟಿಕೋನದಲ್ಲಿ ಪರಿಹಾರ ಕಂಡುಕೊಳ್ಳುವುದು ಈ ಉಪನ್ಯಾಸ ಮಾಲಿಕೆಯ ಉದ್ದೇಶ” ಎಂದು ಅರುಣ್‌ ಕುಮಾರ್‌ ಹೇಳಿದ್ದಾರೆ.

ಆದರೆ, ರಾಹುಲ್‌ ಗಾಂಧಿ ಹಾಗೂ ಸೀತಾರಾಮ್‌ ಯಚೂರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅರುಣ್‌ ಕುಮಾರ್‌, “ಆಹ್ವಾನಿತರ ಹೆಸರುಗಳು ಇನ್ನೂ ಅಂತಿಮಗೊಂಡಿಲ್ಲ” ಎಂದಿದ್ದಾರೆ.

ಆರ್‌ಎಸ್‌ಎಸ್‌ ಕೇಂದ್ರಸ್ಥಾನ ನಾಗಪುರದಲ್ಲಿ ಜೂನ್‌ ತಿಂಗಳಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಆಹ್ವಾನಿಸಲಾಗಿತ್ತು. ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಹೋಗಲು ಒಪ್ಪಬಾರದು ಎಂಬ ತೀವ್ರ ಒತ್ತಡದ ನಡುವೆಯೂ ಪ್ರಣವ್‌ ಮುಖರ್ಜಿ ಕಾರ್ಯಕ್ರಮಕ್ಕೆ ಹೋಗಿ ಮಾತನಾಡಿದ್ದರು.

ಈಗ ಸಂಘದ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಹಾಗೂ ಸೀತಾರಾಮ್‌ ಯಚೂರಿ ಅವರನ್ನು ಆಹ್ವಾನಿಸುವ ಮಾತುಗಳು ಕೇಳಿಬರುತ್ತಿವೆ. ನಿಜಕ್ಕೂ ಆರ್‌ಎಸ್ಎಸ್‌ ರಾಹುಲ್‌ ಹಾಗೂ ಯಚೂರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆಯೇ, ಆಹ್ವಾನ ಬಂದರೆ ಈ ಇಬ್ಬರೂ ಅದಕ್ಕೆ ಸಮ್ಮಿತಿಸುವರೇ ಎಂಬುದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ.