‘ಮಾನವ ಗುರಾಣಿ’ ಕುಖ್ಯಾತಿಯ ಲೀತುಲ್‌ ಗೊಗೋಯ್‌ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ
ಸುದ್ದಿ ಸಾರ

‘ಮಾನವ ಗುರಾಣಿ’ ಕುಖ್ಯಾತಿಯ ಲೀತುಲ್‌ ಗೊಗೋಯ್‌ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ

ಮಾನವ ಗುರಾಣಿ ಪ್ರಕರಣದಲ್ಲಿ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಮೇಜರ್‌ ಲೀತುಲ್‌ ಗೊಗೋಯ್‌ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸೇನಾ ನ್ಯಾಯಾಲಯ ಆದೇಶಿಸಿದೆ.

ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಮಾನವ ಗುರಾಣಿಯಾಗಿ ಬಳಸಿ ದೇಶಾದ್ಯಂತ ಟೀಕೆಗೆ ಗುರಿಯಾದ ಮೇಜರ್‌ ಲೀತುಲ್‌ ಗೊಗೋಯ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೇನಾ ನ್ಯಾಯಾಲಯ ಆದೇಶಿಸಿದೆ. ಸೇನಾ ನಿಯಮಗಳ ಉಲ್ಲಂಘನೆಯ ಕಾರಣದಿಂದಾಗಿ ಲೀತುಲ್‌ ಗೊಗೋಯ್‌ ಈಗ ಶಿಕ್ಷೆಗೆ ಗುರಿಯಾಗಬೇಕಿದೆ.

ಕಾಶ್ಮೀರದ ಯುವತಿಯ ಜತೆ ಹೋಟೆಲ್‌ ಒಳಗೆ ತೆರಳಲು ಪ್ರಯತ್ನಿಸಿದ ಕಾರಣದಿಂದಾಗಿ ಲೀತುಲ್‌ ಗೊಗೋಯ್‌ ಸೇನಾ ನ್ಯಾಯಾಲಯದ ವಿಚಾರಣೆಗೆ ಒಳಪಡಬೇಕಾಗಿತ್ತು. ಈಗ ವಿಚಾರಣೆ ಮುಗಿದಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

ಸೇನಾ ನಿಯಮಗಳ ಪ್ರಕಾರ ಸೈನಿಕರು ಕಾರ್ಯಾಚರಣೆ ಪ್ರದೇಶದ ವ್ಯಕ್ತಿಗಳ ಜತೆ ಆತ್ಮೀಯ ಸಂಬಂಧ ಬೆಳೆಸುವಂತಿಲ್ಲ. ಆದರೆ ಮೇಜರ್‌ ಲೀತುಲ್‌ ಗೊಗೋಯ್‌ ಸ್ಥಳೀಯ ಯುವತಿಯ ಜತೆ ಗುರುತಿಸಿಕೊಂಡಿದ್ದರು. ಈ ವೇಳೆ ಹೋಟೆಲ್‌ ಸಿಬ್ಬಂದಿ ಜತೆ ವಾಗ್ವಾದ ನಡೆದು, ಸ್ಥಳೀಯ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದರು.

ಇದರ ಜತೆಗೆ ಸೈನಿಕರು ಅಪ್ಪಣೆಯಿಲ್ಲದೇ ಕಾರ್ಯಾಚರಣೆಯ ಪ್ರದೇಶದಿಂದ ದೂರ ಹೋಗುವಂತಿಲ್ಲ. ಆದರೆ ಲೀತುಲ್‌ ಗೊಗೋಯ್‌ ತಮ್ಮ ಕರ್ತವ್ಯದ ಅವಧಿಯಲ್ಲಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೇ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳದಿಂದ ದೂರ ಹೋಗಿದ್ದರು ಎಂಬ ಆರೋಪವಿತ್ತು.

ಈ ಎರಡೂ ಕಾರಣಗಳಿಂದ ಮೇಜರ್‌ ಲೀತುಲ್‌ ಗೊಗೋಯ್‌ ಸೇನಾ ನಿಯಮಗಳನ್ನು ಮುರಿದಂತಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೇನಾ ನ್ಯಾಯಾಲಯ ಸೂಚಿಸಿದೆ ಎನ್ನಲಾಗಿದೆ.

ಗೊಗೋಯ್‌ ವಿರುದ್ಧದ ಶಿಸ್ತು ಕ್ರಮದ ಆದೇಶಕ್ಕೆ ಫಾರೂಕ್ ಅಹಮ್ಮದ್‌ ದಾರ್‌ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮೇಜರ್‌ ಲೀತುಲ್‌ ಗೊಗೋಯ್‌ ಮಾನವ ಗುರಾಣಿಯನ್ನಾಗಿ ಬಳಸಿಕೊಂಡಿದ್ದು ಇದೇ ಫಾರೂಕ್‌ ಅವರನ್ನೇ.

28ರ ಪ್ರಾಯದ ಫಾರೂಕ್ ಒಬ್ಬ ಕುಶಲ ಕರ್ಮಿ. ಕಳೆದ ವರ್ಷದ ಏಪ್ರಿಲ್‌ 19ರಂದು ಕಾಶ್ಮೀರದ ಊಟಿಗಾಮ್‌ ಎಂಬ ಹಳ್ಳಿಯಲ್ಲಿ ಗಲಭೆ ನಡೆಯುತ್ತಿದ್ದ ಸಂಧರ್ಭದಲ್ಲಿ ಜನ ಉದ್ರಿಕ್ತಗೊಂಡು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಜನರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಲ್ಲೇ ಸ್ಥಳದಲ್ಲಿದ್ದ ಫಾರೂಕ್‌ ಅಹಮ್ಮದ್‌ ದಾರ್‌ ಅವರನ್ನು ಮೇಜರ್‌ ಲೀತುಲ್‌ ಗೊಗೋಯ್‌ ತಮ್ಮ ಸೇನಾ ಜೀಪಿನ ಮುಂಭಾಗಕ್ಕೆ ಕಟ್ಟಿ, ಮಾನವ ಗುರಾಣಿಯಂತೆ ಬಳಸಿಕೊಂಡಿದ್ದರು.

ಮೇಜಲ್‌ ಗೊಗೋಯ್‌ ಕಾರ್ಯಾಚರಣೆಯನ್ನು ಮೆಚ್ಚಿಕೊಂಡಿದ್ದ ಸೇನೆಯು ಭೂಸೇನಾ ಮುಖ್ಯಸ್ಥರ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿತ್ತು. ‘ಅಂದು ನ್ಯಾಯ ದೊರೆತಿರಲಿಲ್ಲ, ಆದರೆ ಇಂದು ನ್ಯಾಯ ದೊರೆತಂತಾಗಿದೆ’ ಎಂಬ ಅಭಿಪ್ರಾಯವನ್ನು ಫಾರೂಕ್‌ ಅಹಮ್ಮದ್‌ ದಾರ್‌ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ತಮಗಾದ ಅವಮಾನ ಮರೆಯುವಂಥದ್ದಲ್ಲ ಎಂಬ ಬೇಸರ ಅವರದ್ದು.

Also read: ‘ಮಾನವ ಗುರಾಣಿ’ ಕುಖ್ಯಾತಿಯ ಮೇಜರ್‌ ಬಂಧನ: ಸ್ಥಳೀಯ ಯುವತಿ ಜತೆ ಸಿಕ್ಕಿಬಿದ್ದ ಆರ್ಮಿ ಆಫೀಸರ್