samachara
www.samachara.com
ಗೋಧ್ರಾ ರೈಲು ಭಸ್ಮ ಪ್ರಕರಣ; ಇಬ್ಬರಿಗೆ ಜೀವಾವಧಿ ಶಿಕ್ಷೆ
ಸುದ್ದಿ ಸಾರ

ಗೋಧ್ರಾ ರೈಲು ಭಸ್ಮ ಪ್ರಕರಣ; ಇಬ್ಬರಿಗೆ ಜೀವಾವಧಿ ಶಿಕ್ಷೆ

2002ರ ಗೋಧ್ರಾ ರೈಲಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 16 ವರ್ಷಗಳ ನಂತರ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2002ರ ಗೋಧ್ರಾ ರೈಲಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 16 ವರ್ಷಗಳ ನಂತರ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಿಗೆ ಗೋಧ್ರಾದಲ್ಲಿ ಬೆಂಕಿ ಇಡಲಾಗಿತ್ತು. ಘಟನೆಯಲ್ಲಿ 59 ಜನರು ಸಜೀವ ದಹನವಾಗಿದ್ದರು. ಹಾಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಘಟನೆ ನಡೆದಿತ್ತು.

ದುರಂತಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಅಹಮದಾಬಾದ್‌ನ ಎಸ್‌ಐಟಿ ನ್ಯಾಯಾಲಯ ಫಾರೂಕ್‌ ಭನ ಮತ್ತು ಇಮ್ರಾನ್‌ ಸಾಹು ಎನ್ನುವವರಿಗೆ ಜೀವಾವಧಿ ಶಿಕ್ಷೆ ನೀಡಿದೆ. ಇನ್ನು ಮೂವರು ಆರೋಪಿಗಳಾದ ಹುಸೇನ್ ಸುಲೇಮನ್‌ ಮೋಹನ್, ಕಸಮ್‌ ಭಮೇಡಿ ಮತ್ತು ಫಾರೂಕ್‌ ಧಂಟಿಯಾರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಎಚ್.ಸಿ. ವೋರಾ ಆದೇಶ ನೀಡಿದ್ದಾರೆ.

ಈ ಐವರನ್ನೂ 2015-16ರಲ್ಲಿ ಬಂಧಿಸಲಾಗಿತ್ತು. ಸುಲೇಮನ್‌ ಮೋಹನ್‌ರನ್ನು ಮಧ್ಯ ಪ್ರದೇಶದ ಝಬುವಾ, ಭಮೇಡಿಯರನ್ನು ಗುಜರಾತ್‌ನ ದಹೊದ್‌ ರೈಲ್ವೇ ನಿಲ್ದಾಣದಿಂದ ಮತ್ತು ಧಂತಿಯಾ ಹಾಗೂ ಭನಾರನ್ನು ಗೋಧ್ರಾದ ಮನೆಗಳಿಂದ ಬಂಧಿಸಲಾಗಿತ್ತು. ಇನ್ನು ಭಟುಕ್‌ ಮಹಾರಾಷ್ಟ್ರದ ಮಲೆಗಾಂವ್‌ನಲ್ಲಿ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದರು.

ಐವರೂ ಬಂಧಿತರಾದ ನಂತರ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ಸ್ಥಾಪಿಸಲಾದ ಎಸ್‌ಐಟಿ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಈ ಐದು ಜನರಲ್ಲಿ ಇಬ್ಬರಿಗೆ ಈಗ ಶಿಕ್ಷೆಯಾಗಿದ್ದರೆ, ಪ್ರಕರಣದಲ್ಲಿ ಇನ್ನೂ 8 ಜನರು ತಲೆಮರೆಸಿಕೊಂಡಿದ್ದಾರೆ.

ಈ ಹಿಂದೆ ಮಾರ್ಚ್ 1, 2011ರಲ್ಲಿ ಎಸ್‌ಐಟಿ ನ್ಯಾಯಾಲಯ 31 ಜನರನ್ನು ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಪು ನೀಡಿತ್ತು. ಇವರಲ್ಲಿ 11 ಜನರಿಗೆ ಮರಣದಂಡನೆ ಮತ್ತು 20 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಮುಂದೆ ಅಕ್ಟೋಬರ್‌ 2017ರಲ್ಲಿ ಗುಜರಾತ್‌ ಹೈಕೋರ್ಟ್‌ 11 ಜನರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಿತ್ತು. ಆದರೆ ಉಳಿದ 20 ಜನರಿಗೆ ಎಸ್‌ಐಟಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು.

ಮೊದಲಿಗೆ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಫೆಬ್ರವರಿ 27ರಂದು ನಡೆದಿತ್ತು. ಈ ಘಟನೆ ನಂತರ ಕುಖ್ಯಾತ ‘ಗೋಧ್ರೋತ್ತರ ಗಲಭೆ’ ಇಡೀ ಗುಜರಾತ್‌ಗೆ ವ್ಯಾಪಿಸಿಕೊಂಡಿತ್ತು. ಇದರಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೆಚ್ಚಿನವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರು.