ಕೇರಳ ವಿಕೋಪಕ್ಕೆ 600 ಕೋಟಿ; ಕೇವಲ ಅಡ್ವಾನ್ಸ್‌ ಅಷ್ಟೇ: ಇದು ಮೋದಿ ಸರಕಾರದ ಸ್ಪಷ್ಟೀಕರಣ
ಸುದ್ದಿ ಸಾರ

ಕೇರಳ ವಿಕೋಪಕ್ಕೆ 600 ಕೋಟಿ; ಕೇವಲ ಅಡ್ವಾನ್ಸ್‌ ಅಷ್ಟೇ: ಇದು ಮೋದಿ ಸರಕಾರದ ಸ್ಪಷ್ಟೀಕರಣ

ಗಮನಾರ್ಹ ಬೆಳವಣಿಗೆಯಲ್ಲಿ ಕೇರಳದ ನೆರೆ ಪರಿಹಾರಕ್ಕೆಂದು ನೀಡಿರುವ 600 ಕೋಟಿ ರೂಪಾಯಿ, ಕೇವಲ ಮುಂಗಡ ಹಣವಷ್ಟೇ. ಅಗತ್ಯವಿರುವ ಉಳಿದ ಹಣವನ್ನು ಎನ್‌ಡಿಆರ್‌ಎಫ್‌ ಭರಿಸಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟೀಕರಣ ನೀಡಿದೆ. 

ಕೇರಳಕ್ಕೆ ನೆರೆ ಪರಿಹಾರ ಎಂದು ಬಿಡುಗಡೆಗೊಳಿಸಿರುವ 600 ಕೋಟಿ ರೂಪಾಯಿ ಕೇವಲ ಮುಂಗಡವಷ್ಟೇ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಕೇರಳದಲ್ಲಿ ಉಂಟಾಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ರಾಷ್ಟ್ರೀಯ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್‌) ಮತ್ತಷ್ಟು ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುವುದು ಎಂದೂ ಕೂಡ ಕೇಂದ್ರ ಸರಕಾರ ಮಾಹಿತಿ ನೀಡಿದೆ.

ಗುರುವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಕೇರಳದಲ್ಲಿ ಉಂಟಾದ ನೆರೆಗೆ ತುರ್ತು ಪರಿಹಾರ ಮತ್ತು ಕರ್ನಾಟಕಕ್ಕೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ ಎಂದು ತಿಳಿಸಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ದಿನವೂ ಕೂಡ ನೆರೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದಿದೆ.

ದೇಶದಲ್ಲಿ ಎಲ್ಲಿಯಾದರೂ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಅಲ್ಲಿನ ಜರನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು ಅಗತ್ಯವಾದ ಖರ್ಚು ವೆಚ್ಚಗಳನ್ನು ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ಗಳು ನಿಭಾಯಿಸುತ್ತವೆ. ಪ್ರತಿ ರಾಜ್ಯದಲ್ಲೂ ಕೂಡ ರಾಜ್ಯ ವಿಪತ್ತು ಪರಿಹಾರ ನಿಧಿಗಳಿವೆ (ಎಸ್‌ಡಿಆರ್‌ಎಫ್‌). ಕೇಂದ್ರ ಸರಕಾರ ಬೆಟ್ಟ ಗುಡ್ಡಗಳಿಂದ ಕೂಡಿ, ವಿಶೇಷ ವರ್ಗದಲ್ಲಿರುವ ರಾಜ್ಯಗಳಲ್ಲಿನ ನಿಧಿಗಳಿಗೆ ಶೇ.90ರಷ್ಟು ಮತ್ತು ಉಳಿದ ರಾಜ್ಯಗಳ ನಿಧಿಗಳಿಗೆ ಶೇ.75ರಷ್ಟು ಅನುದಾನ ನೀಡುತ್ತದೆ.

ಎನ್‌ಡಿಆರ್‌ಎಫ್‌ ನಿರ್ದೇಶನಗಳಂತೆ ಕೇಂದ್ರ ಸರಕಾರ ಪ್ರತಿ ವರ್ಷ ಎಲ್ಲಾ ರಾಜ್ಯಗಳಿಗೆ ಸಲ್ಲಬೇಕಾದ ವಿಪತ್ತು ನಿಧಿಯನ್ನು ಎರಡು ಕಂತುಗಳಲ್ಲಿ ಪೂರೈಸಿರುತ್ತದೆ. ನೈಸರ್ಗಿಕ ವಿಕೋಪಗಳಾದ ಸಂಧರ್ಭದಲ್ಲಿ, ಜನರನ್ನು ರಕ್ಷಿಸುವ, ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ರಾಜ್ಯ ಸರಕಾರಗಳು ಇದೇ ನಿಧಿಯಿಂದಲೇ ನಡೆಸುತ್ತವೆ. ಒಂದು ವೇಳೆ ವಿಕೋಪಕ್ಕೆ ತುತ್ತಾದ ಎಲ್ಲಾ ಜನರಿಗೆ ಸೌಲಭ್ಯಗಳನ್ನು ಒದಗಿಸಲು ರಾಜ್ಯಗಳಿಗೆ ಸಾಧ್ಯವಾಗದಿದ್ದರೆ ಕೇಂದ್ರ ಸರಕಾರಕ್ಕೆ ಹೆಚ್ಚಿನ ಅನುದಾನಕ್ಕಾಗಿ ಮನವಿ ಸಲ್ಲಿಸಬೇಕಿರುತ್ತದೆ. ಮನವಿ ಸಲ್ಲಿಸುವ ವೇಳೆ ವಲಯವಾರು ನಷ್ಟ, ಅಗತ್ಯವಿರುವ ಹಣ ಎಲ್ಲದರ ಪಟ್ಟಿಯನ್ನು ಕೂಡ ರಾಜ್ಯಗಳು ನೀಡಬೇಕಿರುತ್ತದೆ.

ಕೇರಳದ ಸಂಧರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ರಕ್ಷಣಾ ಕಾರ್ಯಚರಣೆ ನಡೆಸಿ ಪರಿಹಾರ ಒದಗಿಸುತ್ತಿರುವುದಾಗಿ ಕೇಂದ್ರ ಸರಕಾರ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ ದೊಡ್ಡ ರಕ್ಷಣಾ ಕಾರ್ಯಾಚರಣೆಯಲ್ಲಿ 40 ಹೆಲಿಕಾಫ್ಟರ್‌ಗಳು, 31 ವಿಮಾನಗಳು, 182 ರಕ್ಷಣಾ ತಂಡಗಳು, ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 18 ವೈದ್ಯರ ತಂಡಗಳು, ಎನ್‌ಡಿಆರ್‌ಎಫ್‌ನ 58 ತಂಡಗಳು ಸೇರಿದಂತೆ ಇನ್ನೂ ಹಲವಾರು ತಂಡಗಳು 500 ಬೋಟ್‌ ಮತ್ತು ಅಗತ್ಯ ಸಲಕರಣೆಗಳ ಸಹಾಯದಿಂದ ಕೇರಳಿಗರನ್ನು ರಕ್ಷಿಸಿವೆ. ಪ್ರವಾಹದ ಮಧ್ಯೆ ಸಿಲುಕಿ ಪ್ರಾಣಾಪಾಯದಲ್ಲಿದ್ದ 60,000ಕ್ಕೂ ಹೆಚ್ಚು ಜನರನ್ನು ಈ ತಂಡಗಳು ರಕ್ಷಿಸಿ, ಪುನರ್ವಸತಿ ಕೇಂದ್ರಗಳಿಗೆ ತಲುಪಿಸಿವೆ ಎಂದು ಕೇಂದ್ರ ಸರಕಾರ ಹೇಳಿದೆ.

ಸೇನಾ ವಿಮಾನಗಳು ಒಟ್ಟು 1,168 ಗಂಟೆಗಳ ಹಾರಾಟ ನಡೆಸಿದ್ದು ಸುಮಾರು 1,286 ಟನ್‌ ತೂಕದ ಸಾಮಗ್ರಿಗಳ ಸಾಗಾಟ ನಡೆಸಿವೆ. ಜತೆಗೆ 3,332 ರಕ್ಷಣಾ ಕಾರ್ಯಕರ್ತರನ್ನು ಕೂಡ ಹೊತ್ತು ಕೇರಳಿಗರ ರಕ್ಷಣೆಯಲ್ಲಿ ಭಾಗವಹಿಸಿವೆ. ನೌಕಾ ಸೇನೆ ಮತ್ತು ಕರಾವಳಿ ತಟ ರಕ್ಷಣಾ ಪಡೆಯ ಸಿಬ್ಬಂದಿಗಳು ಕೂಡ ಬಾರಿ ಪ್ರಮಾಣದಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ರಕ್ಷಣಾ ಕಾರ್ಯ ಮತ್ತು ಅಗತ್ಯ ಸಂಪನ್ಮೂಲಗಳ ಕ್ರೋಡಿಕರಣಕ್ಕೆಂದೇ ಕೇಂದ್ರ ಸರಕಾರ ನೂರಾರು ಕೋಟಿ ಹಣವನ್ನು ಖರ್ಚು ಮಾಡಿದೆ. ಈವರೆಗೂ ಕೇರಳದಲ್ಲಿ ಪ್ರವಾಹದಿಂದಾಗಿ 357 ಜನ ಸಾವನ್ನಪ್ಪಿದ್ದು, 19,512 ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಯುಎಇ ಕೇರಳಕ್ಕೆ 700 ಕೋಟಿ ರೂಪಾಯಿಗಳನ್ನು ಒದಗಿಸಲು ಮುಂದಾಗಿತ್ತು. ಈ ಹಣವನ್ನು ಪಡೆಯಲು ಕೇಂದ್ರ ಸರಕಾರದ ನೀತಿಗಳು ಅಡ್ಡಿಯಾಗಿ ಪರಿಣಮಿಸಿದ್ದವು. ಈ ಕುರಿತು ಬಾರಿ ವಿರೋಧವೂ ಕೂಡ ವ್ಯಕ್ತವಾಗಿತ್ತು. ಅಗತ್ಯವಿರುವ ಹಣವನ್ನು ನೀಡಿ, ಅಥವಾ ಯುಎಇ ನೀಡಲು ಮುಂದಾಗಿರುವ ಅನುದಾನವನ್ನು ಬರಲು ಬಿಡಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೇಂದ್ರ ಸರಕಾರದ ವಿರುದ್ಧ ಗುಡುಗಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಪತ್ರಿಕಾ ಹೇಳೀಕೆಯನ್ನು ಬಿಡಿಗಡೆಗೊಳಿಸಿ, ಈ ಮಾಹಿತಿಗಳನ್ನು ನೀಡಿದೆ.

ಭಾರತದ ಕೇಂದ್ರ ಸರಕಾರ ಯುಎಇಯ 700 ಕೋಟಿ ನೆರವನ್ನು ತಿರಸ್ಕರಿಸಿದ ಬೆನ್ನಲ್ಲೇ ಈಗ ಪಾಕಿಸ್ತಾನದ ಹೊಸ ಪ್ರಧಾನಿ ಇಮ್ರಾನ್‌ ಖಾನ್‌ ಕೇರಳಕ್ಕೆ ಅಗತ್ಯವಿರುವ ನೆರವನ್ನು ನೀಡಲು ಪಾಕಿಸ್ತಾನ ಸಿದ್ಧವಾಗಿದೆ ಎಂದಿದ್ದಾರೆ. ಇದಕ್ಕೆ ಕೇಂದ್ರ ಸರಕಾರ ಯಾವ ನಿಲುವನ್ನು ತಾಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಮಾಹಿತಿ ಮೂಲ: ಎಎನ್‌ಐ.