ದೇಶದಲ್ಲೇ ಗರಿಷ್ಠ ಮಳೆ ಬಿದ್ದಿದ್ದು ಕೇರಳದಲ್ಲೂ ಅಲ್ಲ, ಕೊಡಗಿನಲ್ಲೂ ಅಲ್ಲ,  ಉಡುಪಿಯಲ್ಲಿ!
ಸುದ್ದಿ ಸಾರ

ದೇಶದಲ್ಲೇ ಗರಿಷ್ಠ ಮಳೆ ಬಿದ್ದಿದ್ದು ಕೇರಳದಲ್ಲೂ ಅಲ್ಲ, ಕೊಡಗಿನಲ್ಲೂ ಅಲ್ಲ, ಉಡುಪಿಯಲ್ಲಿ!

ವಿಚಿತ್ರವೆಂದರೆ ಕೇರಳದ ಇಡುಕ್ಕಿ ಮತ್ತು ಕೊಡಗಿಗಿಂತ ಹೆಚ್ಚಿನ ಮಳೆ ಕರ್ನಾಟಕದ ಕರಾವಳಿಯ ಜಿಲ್ಲೆ ಉಡುಪಿಯಲ್ಲಿ ಬಿದ್ದಿದೆ.

ಭೀಕರ ಮಳೆಯಿಂದಾಗಿ ಕೇರಳ ಮತ್ತು ಕೊಡಗು ತತ್ತರಿಸಿ ಹೋಗಿದ್ದು ನೂರಾರು ಜನ ಸಾವಿಗೀಡಾಗಿ ಲಕ್ಷಾಂತರ ಜನರು ನಿರಾಶ್ರಿತರ ಶಿಬಿರಗಳಲ್ಲಿ ಕಾಲ ಕಳೆಯುವಂತಾಗಿದೆ. ಆದರೆ ವಿಚಿತ್ರವೆಂದರೆ ಈ ಎರಡೂ ಪ್ರದೇಶಗಳಿಗಿಂತ ಹೆಚ್ಚಿನ ಮಳೆ ಕರ್ನಾಟಕದ ಕರಾವಳಿಯ ಜಿಲ್ಲೆ ಉಡುಪಿಯಲ್ಲಿ ಬಿದ್ದಿದೆ. ಹೀಗೊಂದು ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ.

ಕೇರಳದಲ್ಲಿ ಜೂನ್ 1 ರಿಂದ ಆಗಸ್ಟ್‌ 20ರವರೆಗೆ 81 ದಿನದಲ್ಲಿ 2,378 ಮಿ.ಮೀ. ಮಳೆ ಸುರಿದಿದೆ. ಇದು ಸರಾಸರಿಗಿಂತ ಶೇಕಡಾ 42ರಷ್ಟು ಹೆಚ್ಚಿನ ಮಳೆ ಮತ್ತು ದೇಶದಾದ್ಯಂತ ಸುರಿದ ಮಳೆಗೆ ಹೋಲಿಸಿದರೆ ಮೂರು ಪಟ್ಟು ಅಧಿಕವಾಗಿದೆ. ಹೀಗೊಂದು ಭೀಕರ ಮಳೆ ಕಳೆದ 94 ವರ್ಷಗಳಲ್ಲಿ ಕೇರಳದಲ್ಲಿ ಸುರಿದಿರಲಿಲ್ಲ. ಪರಿಣಾಮ ಸುಮಾರು 380ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 12 ಲಕ್ಷಕ್ಕೂ ಹೆಚ್ಚಿನ ಜನರು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿದೆ.

ಬೆಟ್ಟ ಗುಡ್ಡಗಳನ್ನು ಒಳಗೊಂಡಿರುವ ಕೇರಳದ ಇಡುಕ್ಕಿಯಲ್ಲಿ ದೇಶದಲ್ಲೇ ಹೆಚ್ಚಿನ ಹೆಚ್ಚಿನ ಮಳೆ ಬಿದ್ದ ಎರಡನೇ ಸ್ಥಳವಾಗಿದೆ. ಇಲ್ಲಿ 81 ದಿನಗಳ ಅಂತರದಲ್ಲಿ 3,521 ಮಿ.ಮೀ. ಮಳೆ ಬಿದ್ದಿದ್ದು, ಸಾಮಾನ್ಯಕ್ಕಿಂತ ಶೇಕಡಾ 93ರಷ್ಟು ಹೆಚ್ಚು ಮಳೆಯಾಗಿದೆ. ಇನ್ನು ಪ್ರವಾಹಕ್ಕೆ ಮತ್ತು ಭೂಕುಸಿತಗಳಿಂದ ಸುದ್ದಿಯಾದ ಕೊಡಗಿನಲ್ಲಿ 3,161 ಮಿ.ಮೀ. ಮಳೆಯಾಗಿದೆ. ಇಲ್ಲಿ ಸಾಮಾನ್ಯಕ್ಕಿಂತ ಶೇಕಡಾ 72ರಷ್ಟು ಹೆಚ್ಚುವರಿ ಬಿದ್ದ ಮಳೆ 10 ಜನರನ್ನು ಬಲಿ ಪಡೆದು ಸುಮಾರು 3 ಸಾವಿರಕ್ಕೂ ಅಧಿಕ ಜನರನ್ನು ನಿರಾಶ್ರಿತರನ್ನಾಗಿಸಿದೆ.

ಅಚ್ಚರಿಯ ರೀತಿಯಲ್ಲಿ ಪ್ರವಾಹಕ್ಕೆ ಗುರಿಯಾದ ಇಡುಕ್ಕಿ ಮತ್ತು ಕೊಡಗಿಗಿಂತಲೂ ಹೆಚ್ಚಿನ ಮಳೆ ಉಡುಪಿಯಲ್ಲಿ ಬಿದ್ದಿದ್ದು, ಇಲ್ಲಿ 3,663 ಮಿ.ಮೀ. ಮಳೆಯಾಗಿದೆ. ಆದರೆ ಇಲ್ಲಿ ಬಿದ್ದ ಹೆಚ್ಚುವರಿ ಮಳೆ ಪ್ರಮಾಣ ಶೇಕಡಾ 18 ಮಾತ್ರ. ಉಡುಪಿಯಲ್ಲಿ ಅತೀ ಹೆಚ್ಚು ಮಳೆ ಸುರಿದೂ ಏನೂ ಆಗದೇ ಇರುವುದು ಹಾಗೂ ಎರಡನೇ ಸ್ಥಾನದಲ್ಲಿರುವ ಕೇರಳ ಮತ್ತು ಮೂರನೇ ಸ್ಥಾನದಲ್ಲಿರುವ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿರುವುದಕ್ಕೆ ಅಲ್ಲಿಯ ಭೌಗೋಳಿಕ ರಚನೆಗಳೂ ಕಾರಣವಾಗಿವೆ.

ಆಗಸ್ಟ್‌ನಲ್ಲಿ ಉತ್ತಮ ಮಳೆ

ಕೇಂದ್ರ ಹವಾಮಾನ ಇಲಾಖೆ ಮಾಹಿತಿಗಳ ಪ್ರಕಾರ ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದೆ. ಈ ಅವಧಿಯಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಹೀಗಿದ್ದೂ ಈ ಬಾರಿ ಕರ್ನಾಟಕದಲ್ಲಿ ಹೇಳಿಕೊಳ್ಳುವಂತ ಹೆಚ್ಚಿನ ಮಳೆಯೇನೂ ಬಿದ್ದಿಲ್ಲ ಎನ್ನುತ್ತವೆ ಅಂಕಿ ಅಂಶಗಳು. ಸರಾಸರಿ ಕರ್ನಾಟಕದಲ್ಲಿ ಈ ಬಾರಿ 634 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯಕ್ಕಿಂತ (615 ಮಿ.ಮೀ.) ಶೇಕಡಾ 3ರಷ್ಟು ಮಾತ್ರ ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದರೆ, ರಾಜ್ಯದ ಉಳಿದ ಭಾಗಗಳಲ್ಲಿ ಮಳೆ ಕೊರತೆ ಎದುರಾಗಿದೆ.

ದೇಶದಲ್ಲೇ ಗರಿಷ್ಠ ಮಳೆ ಬಿದ್ದಿದ್ದು ಕೇರಳದಲ್ಲೂ ಅಲ್ಲ, ಕೊಡಗಿನಲ್ಲೂ ಅಲ್ಲ,  ಉಡುಪಿಯಲ್ಲಿ!
ಚಿತ್ರ ಕೃಪೆ: ಇಂಡಿಯಾ ಸ್ಪೆಂಡ್‌

ಮೊದಲೇ ಹೇಳಿದಂತೆ ಆಗಸ್ಟ್‌ 9 ರಿಂದ 15 ರ ನಡುವೆ ಸುರಿದ ಭಾರೀ ಮಳೆ ವಿಕೋಪಕ್ಕೆ ಕಾರಣವಾಗಿತ್ತು. ಈ ಅವಧಿಯಲ್ಲಿ ಉಡುಪಿಯಲ್ಲಿ 640 ಮಿ.ಮೀ., ಕೊಡಗಿನಲ್ಲಿ 508 ಮಿ.ಮೀ. ಮತ್ತು ದಕ್ಷಿಣ ಕನ್ನಡದಲ್ಲಿ 465 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ 161 ಜನರು ಸಾವನ್ನಪ್ಪಿದ್ದರೆ ಕೊಡಗಿನಲ್ಲಿ 10 ಜನರು ಇತ್ತೀಚಿನ ವಿಕೋಪದಲ್ಲಿ ಪ್ರಾಣ ತೆತ್ತಿದ್ದಾರೆ. ಆಗಸ್ಟ್‌ 14ರಂದು ಒಂದೇ ದಿನ ಉಡುಪಿಯಲ್ಲಿ ಭಾರೀ ಮಳೆಯಿಂದಾಗಿ 64 ಮನೆಗಳಿಗೆ ಹಾನಿಯಾಗಿತ್ತು.

ಇದೇ ರೀತಿ ಕೇರಳದಲ್ಲೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆ ಬಿದ್ದಿರುವುದು ಕಾಣಿಸುತ್ತದೆ. ಇಡುಕ್ಕಿಯಲ್ಲಿ ಆಗಸ್ಟ್‌ 9 ರಿಂದ 15 ರ ಮಧ್ಯ ಭಾಗದಲ್ಲಿ 679 ಮಿ.ಮೀ. ಮಳೆ ಬಿದ್ದಿದೆ. ಇದು ಸಾಮಾನ್ಯಕ್ಕಿಂತ ಶೇಕಡಾ 438 ಅಧಿಕವಾಗಿದೆ. ಪರಿಣಾಮ ಇಲ್ಲೂ ಭೂಕುಸಿತ, ಪ್ರವಾಹದಂಥ ಘಟನೆಗಳು ನಡೆದು 51 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಇಡೀ ಕೇರಳದಲ್ಲಿ ಮಳೆ ಸುರಿದರೂ ತ್ರಿಶೂರ್ ಜಿಲ್ಲೆಯಲ್ಲಿ ಕೇವಲ 180.3 ಮಿ.ಮೀ. ಮಾತ್ರ ಮಳೆಯಾಗಿತ್ತು. ಹಾಗಾಗಿ ಇಲ್ಲಿ ಯಾವುದೇ ಹೇಳಿಕೊಳ್ಳುವಂಥ ಅನಾಹುತಗಳು ಸಂಭವಿಸಿರಲಿಲ್ಲ.

ಪೂರಕ ಮಾಹಿತಿ: ಇಂಡಿಯಾ ಸ್ಪೆಂಡ್