ವಾಜಪೇಯಿಗೆ ಶ್ರದ್ಧಾಂಜಲಿ ಅರ್ಪಿಸಲು ನಿರಾಕರಿಸಿದ ಕಾರ್ಪೊರೇಟರ್‌ಗೆ 1 ವರ್ಷ ಜೈಲು
ಸುದ್ದಿ ಸಾರ

ವಾಜಪೇಯಿಗೆ ಶ್ರದ್ಧಾಂಜಲಿ ಅರ್ಪಿಸಲು ನಿರಾಕರಿಸಿದ ಕಾರ್ಪೊರೇಟರ್‌ಗೆ 1 ವರ್ಷ ಜೈಲು

ಕಳೆದ ವಾರ ಔರಂಗಾಬಾದ್‌ ನಗರದ ಕಾರ್ಪೊರೇಟರ್‌ ಸೈಯದ್‌ ಮತೀನ್‌ ರಶೀದ್‌ ಎನ್ನುವವರು ವಾಜಪೇಯಿಗೆ ಶ್ರದ್ಧಾಂಜಲಿ ಅರ್ಪಿಸಲು ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ಕಾರ್ಪೊರೇಟರ್‌ಗಳಿಂದ ರಶೀದ್‌ ಮೇಲೆ ಹಲ್ಲೆಯೂ ನಡೆದಿತ್ತು.

ಆಲ್‌ ಇಂಡಿಯಾ ಮಜ್ಲೀಸ್‌ ಇ ಇಟ್ಟೆಹದುಲ್‌ ಮುಸ್ಲಿಮೀನ್‌ (AIMIM) ಪಕ್ಷದ ಔರಂಗಾಬಾದ್‌ ನಗರಸಭೆಯ ಕಾರ್ಪೊರೇಟರ್‌ ಸೈಯದ್‌ ಮತೀನ್‌ ರಶೀದ್‌ರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹಾರಾಷ್ಟ್ರ ಪೊಲೀಸರು 1981ರ ಮಹಾರಾಷ್ಟ್ರ ಅಪಾಯಕಾರಿ ಕಾರ್ಯಗಳ ತಡೆ ಕಾಯ್ದೆಯ ಅಡಿಯಲ್ಲಿ ಸೈಯದ್‌ ಮತೀನ್‌ರನ್ನು ಬಂಧಿಸಿದ್ದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕಳೆದ ವಾರ ನಗರಸಭೆಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಅಲ್ಲಿ ಸೈಯದ್‌ ಮತೀನ್‌ ರಶೀದ್‌ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರಾಕರಿಸಿದ್ದರು. ಆ ವೇಳೆಯೇ ಬಿಜೆಪಿಯ ಕೆಲ ಕಾರ್ಪೊರೇಟರ್‌ಗಳು ಮತೀನ್‌ರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಮೊಬೈಲ್‌ಗಳಲ್ಲಿ ಹರಿದಾಡಿದ ಸಂದೇಶಗಳಲ್ಲಿ ಸೈಯದ್‌ ಮತೀನ್‌ರನ್ನು ಶಾಸಕ ಎಂದೂ ಕೂಡ ಬಿಂಬಿಸಲಾಗಿತ್ತು.

ಇಲ್ಲಿಗೆ ಸುಮ್ಮನಾಗದ ಬಿಜೆಪಿ ಕಾರ್ಪೊರೇಟರ್‌ಗಳು ಸೈಯದ್‌ ಮತೀನ್‌ರ ಮೇಲೆ ಕೇಸು ದಾಖಲಿಸಿದ್ದರು. ಎರಡು ಸಮುದಾಯಗಳ ಸದಸ್ಯರ ನಡುವೆ ವೈರತ್ವ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದ ಆರೋಪದ ಅಡಿಯಲ್ಲಿ ಸೈಯದ್‌ ಮತೀನ್‌ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

ಮೊದಲು ಬಿಜೆಪಿ ಕಾರ್ಪೊರೇಟರ್‌ಗಳು ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಸೈಯದ್‌ ಮತೀನ್‌ರಿಗೆ ಮಂಗಳವಾರ ಜಾಮೀನು ದೊರೆತಿತ್ತು. ಔರಂಗಾಬಾದ್‌ನ ಹರ್ಸುಲ್‌ ಜೈಲಿನಿಂದ ಸೈಯದ್‌ ಮತೀನ್‌ ಬಿಡುಗಡೆಯಾದ ಕಲ ನಿಮಿಷಗಳ ನಂತರವೇ ಕಮಿಷನರ್‌ ಅದೇಶದ ಮೇರೆಗೆ MPDA (ಮಹಾರಾಷ್ಟ್ರ ಅಪಾಯಕಾರಿ ಕಾರ್ಯಗಳ ತಡೆ ಕಾಯ್ದೆ) ಅಡಿಯಲ್ಲಿ ಮತ್ತೆ ಬಂಧಿಸಲಾಗಿದೆ.

ಸೈಯದ್‌ ಮತೀನ್‌ ರಶೀದ್‌ರನ್ನು ಈಗ ಒಂದು ವರ್ಷಗಳ ಕಾಲ ಹರ್ಸುಲ್‌ ಜೈಲಿಗೆ ದೂಡಲಾಗಿದೆ. ಈ ಹಿಂದೆ ಸೈಯದ್‌ ಮತೀನ್‌ ನಾಗರಿಕ ಸಂಸ್ಥೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನೂ ಕೂಡ ವಿರೋಧಿಸಿ ಸುದ್ದಿ ಕೇಂದ್ರ ಬಂದಿದ್ದರು.

ಈ ಬೆಳವಣಿಗೆಗಳ ಕುರಿತು ‘ಇಂಡಿಯನ್ಸ್‌ ಎಕ್ಸ್‌ಪ್ರೆಸ್‌’ ಸುದ್ದಿ ಸಂಸ್ಥೆಯ ಜತೆ ಮಾತನಾಡಿರುವ ಔರಂಗಬಾದ್‌ ಜಿಲ್ಲಾಧಿಕಾರಿ ಚಿರಂಜೀವಿ ಪ್ರಸಾದ್‌, “ಸಮಾಜದಲ್ಲಿ ಗಲಭೆ ಉಂಟು ಮಾಡುವುದು, ಧರ್ಮಗಳ ನಡುವೆ ದ್ವೇಷ ಬಿತ್ತಿ ಕೋಮು ಸಾಮರಸ್ಯವನ್ನು ಹಾಳು ಮಾಡುವುದು ಇತ್ಯಾದಿ ಗಂಭಿರ ಅಪರಾಧಗಳು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಆದ್ದರಿಂದ ಬೇರೆ ದಾರಿಯಿಲ್ಲದೇ ಸೈಯದ್‌ ಮತೀನ್‌ ವಿರುದ್ಧ MPDA ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಔರಂಗಾಬಾದ್‌ನ ಶಾಸಕ ಸೈಯದ್‌ ಇಮ್ತಿಯಾಜ್‌ ಜಲೀಲ್‌ ಈ ಕುರಿತು ಪ್ರತಿಕ್ರಿಯಿಸಿ, “ಮತೀನ್‌ ವಿರುದ್ಧ ಕೇವಲ 2 ಪ್ರಕರಣಗಳಷ್ಟೇ ಇವೆ. ಎರಡೂ ಕೂಡ ರಾಜಕೀಯ ನೆಲಗಟ್ಟಿನವು. ಎಐಎಮ್‌ಐಎಮ್‌ ಪಕ್ಷವೂ ಕೂಡ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೀಯಿ ಸಾವಿಗೆ ಶೋಕ ಆಚರಿಸಿತು. ಈ ಕುರಿತು ಪತ್ರಿಕಾ ಹೇಳಿಕೆಯನ್ನೂ ಕೂಡ ನೀಡಿತ್ತು. ಆದರೆ ಸೈಯದ್‌ ಮತೀನ್‌ ಅಟಲ್‌ಜಿ ಶ್ರದ್ಧಾಂಜಲಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ನಮಗೆ ಹೇಳಿರಲಿಲ್ಲ. ಇದು ಪಕ್ಷದ ಆಂತರಿಕ ವಿಚಾರ, ಆದರೆ ಬಿಜೆಪಿ ಪ್ರತಿನಿಧಿಗಳು ಸೈಯದ್‌ ಮತೀನ್‌ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅದರ ಸಿಸಿ ಟಿವಿ ವೀಡಿಯೋ ನಮ್ಮ ಬಳಿಯಿದೆ,” ಎಂದು ತಿಳಿಸಿದ್ದಾರೆ.

ಶಾಸಕ ಜಲೀಲ್‌ ಹೇಳುವಂತೆ, ಬಿಜೆಪಿ ಜನ ಪ್ರತಿನಿಧಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದರೂ ಕೂಡ ಪೊಲೀಸರು ಅವರಿಗೆ ಜಾಮೀನು ನೀಡಿದ್ದಾರೆ. ಈ ಕುರಿತು ಮಹಾರಾಷ್ಟ್ರ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಪಕ್ಷ ನಿರ್ಧರಿಸಿದೆ.

ಸಭೆ ನಡೆಯುತ್ತಿದ್ದ ವೇಳೆ ಮಹಿಳೆಯರೂ ಸೇರಿದಂತೆ ಬಿಜೆಪಿ ಕಾರ್ಪೊರೇಟರ್‌ಗಳು ಸೈಯದ್‌ ಮತೀನ್‌ರಿಗೆ ಚಪ್ಪಲಿಯಿಂದ ಹೊಡೆದಿದ್ದಲ್ಲದೇ ಮನಬಂದಂತೆ ಥಳಿಸಿ ಹಲ್ಲೆ ನಡೆಸಿದ ವಿಡಿಯೋ ದೇಶದೆಲ್ಲೆಡೆ ಹರಿದಾಡಿತ್ತು. ತದ ನಂತರ ಸೈಯದ್‌ ಮತೀನ್‌ ಬೆಂಬಲಿಗರು ಕೆಲ ಬಿಜೆಪಿ ನಾಯಕರ ವಾಹನಗಳನ್ನು ಜಖಂಗೊಳಿಸಿದ ಪ್ರಕರಣ ಕೂಡ ಸುದ್ದಿಯಾಗಿತ್ತು.