samachara
www.samachara.com
ಶೀರೂರು ಸ್ವಾಮೀಜಿ ಸಾವಿಗೆ ಅನಾರೋಗ್ಯ ಕಾರಣ ಎಂದ ಎಫ್‌ಎಸ್‌ಎಲ್‌ ವರದಿ?
ಸುದ್ದಿ ಸಾರ

ಶೀರೂರು ಸ್ವಾಮೀಜಿ ಸಾವಿಗೆ ಅನಾರೋಗ್ಯ ಕಾರಣ ಎಂದ ಎಫ್‌ಎಸ್‌ಎಲ್‌ ವರದಿ?

ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರದ್ದು ಸಹಜ ಸಾವು ಎಂಬ ಅಂಶ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಯಲ್ಲಿದೆ ಎನ್ನಲಾಗಿದೆ.

ಉಡುಪಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ, ಅವರದ್ದು ಸಹಜ ಸಾವು ಎಂಬ ಅಂಶ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಯಲ್ಲಿದೆ ಎನ್ನಲಾಗಿದೆ.

ಸ್ವಾಮೀಜಿ ಸಾವಿಗೆ ವಿಷಪ್ರಾಶನ ಕಾರಣವಲ್ಲ, ಯಕೃತ್ ಸಮಸ್ಯೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ಎಫ್‌ಎಸ್‌ಎಲ್‌ ತಜ್ಞರು ವರದಿ ನೀಡಿದ್ದಾರೆ ಎಂಬ ಮಾಹಿತಿ ಇದೆ. ಈ ವರದಿಯನ್ನು ಮಣಿಪಾಲದ ಕಸ್ತೂರ ಬಾ ಆಸ್ಪತ್ರೆ (ಕೆಎಂಸಿ) ವೈದ್ಯರಿಗೆ ಕಳಿಸಲಾಗಿದ್ದು, ಈ ವರದಿಯನ್ನು ಪರಿಶೀಲಿಸಿ ಆಸ್ಪತ್ರೆಯ ತಜ್ಞ ವೈದ್ಯರು ಸ್ವಾಮೀಜಿ ಸಾವಿಗೆ ನಿಖರ ಕಾರಣ ಏನು ಎಂದು ನಿರ್ಣಯಕ್ಕೆ ಬರಲಿದ್ದಾರೆ ಎನ್ನಲಾಗಿದೆ.

Also read: ಯತಿ ಧರ್ಮ, ಶಿಷ್ಯ ಸ್ವೀಕಾರ, ಪೀಠ ತ್ಯಾಗ: ಏನಿದು ಶೀರೂರು ಮಠದ ‘ಪಟ್ಟದ ದೇವರ’ ವಿವಾದ?

ಶೀರೂರು ಸ್ವಾಮೀಜಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಜುಲೈ 19ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ವಿಷಪ್ರಾಶನದಿಂದ ಸ್ವಾಮೀಜಿ ಸಾವನ್ನಪ್ಪಿರುವ ಶಂಕೆಯಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಆಗ ಅನುಮಾನ ವ್ಯಕ್ತಪಡಿಸಿದ್ದರು.

ಸ್ವಾಮೀಜಿ ಅನುಮಾನಾಸ್ಪದ ಸಾವಿಗೆ ವಿಷಪ್ರಾಶನ ಕಾರಣವಿರಬಹುದು ಎಂದು ವೈದ್ಯರೇ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಈ ಪ್ರಕರಣದಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದರು. ಸ್ವಾಮೀಜಿಗೆ ವಿಷ ಹಾಕಿದ್ದು ಯಾರು ಎಂಬ ಪ್ರಶ್ನೆ ದೊಡ್ಡದಾಗಿತ್ತು. ಸ್ವಾಮೀಜಿ ಸಾವಿನ ಪ್ರಕರಣ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು.