samachara
www.samachara.com
ಆಲಿಂಗನದ ದೇಶದ್ರೋಹ; ಸಿಧು ವಿರುದ್ಧ ಮುಗಿಬಿದ್ದ ‘ಭಕ್ತ’ ಸಮೂಹ
ಸುದ್ದಿ ಸಾರ

ಆಲಿಂಗನದ ದೇಶದ್ರೋಹ; ಸಿಧು ವಿರುದ್ಧ ಮುಗಿಬಿದ್ದ ‘ಭಕ್ತ’ ಸಮೂಹ

ಭಾರತ ಮತ್ತು ಪಾಕಿಸ್ತಾನ ಶಾಂತಿಯಿಂದ ಇರದೆ ಎರಡೂ ದೇಶಗಳ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಆದರೆ ಶಾಂತಿ ಮಾತುಕತೆಗಳು ನಡೆಯಬೇಕಿದ್ದ ಜಾಗದಲ್ಲಿ ಇಂದು ಎರಡೂ ದೇಶಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸಗಳು ನಡೆಯುತ್ತಿವೆ.

ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಿಂಗಿಸಿ ಬಂದ ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧುಗೆ ದೇಶದ್ರೋಹಿ ಪಟ್ಟ ಕಟ್ಟುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಶನಿವಾರ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಪದಗ್ರಹಣ ಕಾರ್ಯಕ್ರಮ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಯಾವುದೇ ದೇಶಗಳ ಮುಖ್ಯಸ್ಥರಿಗೂ ಆಹ್ವಾನವಿರಲಿಲ್ಲ. ಆದರೆ ಕ್ರಿಕೆಟ್‌ ಮೈದಾನದ ಸ್ನೇಹಿತ ಎಂದು ಸಿಧುವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದರು ಇಮ್ರಾನ್‌ ಖಾನ್. ಈ ಆಹ್ವಾನದ ಬೆನ್ನಿಗೆ ದೇಶದಾದ್ಯಂತ ಪಾಕಿಸ್ತಾನ ಪ್ರಧಾನಿಯ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಬಾರದು ಎಂಬ ಚರ್ಚೆಗಳು ನಡೆದಿದ್ದವು. ಹೀಗಿದ್ದೂ ಇಸ್ಲಾಮಾಬಾದ್‌ಗೆ ತೆರಳಿದ ನವಜೋತ್‌ ಸಿಂಗ್‌ ಸಿಧು ಖಾನ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಅವರು ಪಾಕಿಸ್ತಾನದ ಭೂಸೇನೆಯ ಮುಖ್ಯಸ್ಥ ಕಮರ್‌ ಜಾವೇದ್‌ ಬಜ್ವಾರನ್ನು ಆಲಂಗಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಸಿಧು ನಡೆಯನ್ನು ಸ್ವತಃ ಪಂಜಾಬ್‌ ಸಿಎಂ ಕ್ಯಾ. ಅಮರಿಂದರ್‌ ಸಿಂಗ್‌ ಟೀಕಿಸಿದ್ದು, “ಪ್ರತಿ ದಿನ ನಮ್ಮ ಸೈನಿಕರು ಸಾವನ್ನಪ್ಪುತ್ತಿದ್ದಾರೆ. ಅವರ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ. ವಿಷಯ ಏನೆಂದರೆ ನಮ್ಮ ಸೈನಿಕರು ದಿನಂಪ್ರತಿ ಸಾಯುತ್ತಿದ್ದಾರೆ ಎಂಬುದನ್ನು ಈ ಮನುಷ್ಯ ಅರ್ಥ ಮಾಡಿಕೊಳ್ಳಬೇಕು,” ಎಂದಿದ್ದರು.

ಆದರೆ ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡ ಸಿಧು, “ಇದು ಸಾಮಾನ್ಯ ಮನುಷ್ಯನ ನಡವಳಿಕೆ. ಯಾರಾದರೂ ಸ್ನೇಹದ ಹಸ್ತ ಚಾಚಿದಾಗ ನೀವು ನಿಮ್ಮ ಬೆನ್ನನ್ನು ತೋರಿಸುತ್ತೀರೋ?” ಎಂದು ಪ್ರಶ್ನಿಸಿದ್ದರು. ಜತೆಗೆ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರಿಗೂ ಉತ್ತರ ನೀಡಿದ್ದ ಸಿಧು, “ಇದು ಪ್ರಜಾಪ್ರಭುತ್ವ. ಇಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ” ಎಂದಿದ್ದರು.

ದೇಶದ್ರೋಹಿ ಪಟ್ಟ:

ಸಿಧು ಪಾಕಿಸ್ತಾನ ಭೇಟಿಯ ವಿವಾದ ಇಲ್ಲಿಗೇ ಮುಗಿದಿಲ್ಲ. ಅವರಿಗೆ ದೇಶದ್ರೋಹಿ ಪಟ್ಟ ಕಟ್ಟುವ ಯತ್ನಗಳು ವಿರೋಧ ಪಕ್ಷಗಳಿಂದ ನಡೆದಿದೆ. ಈ ವಿಚಾರದಲ್ಲಿ ಬಿಜೆಪಿ ನೇರವಾಗಿಯೇ ಅಖಾಡಕ್ಕೆ ಧುಮುಕಿದ್ದು ತನ್ನ ವಕ್ತಾರರ ಮೂಲಕ ಸಿಧು ಆಲಿಂಗನವನ್ನು ಟೀಕಿಸುವುದರ ಜತೆಗೆ ‘ಅವರೊಬ್ಬ ದೇಶದ್ರೋಹಿ’ ಎಂದು ಕಿಡಿಕಾರಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಧು ರಾಷ್ಟ್ರದ್ರೋಹಿ ಎಂದು ಬಲಪಂಥೀಯ ಕಾರ್ಯಕರ್ತರು ಟೀಕೆಗಳ ಸುರಿಮಳೆಗೈಯುತ್ತಿದ್ದಾರೆ. ಒಂದಷ್ಟು ರಾಷ್ಟ್ರೀಯ ಮಾಧ್ಯಮಗಳೂ ಸಿಧು ರಾಷ್ಟ್ರದ್ರೋಹಿ ಎಂಬ ಚರ್ಚೆಯನ್ನು ಕಳೆದೆರಡು ದಿನಗಳಿಂದ ನಡೆಸುತ್ತಿವೆ.

ಒಂದು ಕಡೆ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಬಿಹಾರದ ಮುಜಾಫರ್‌ಪುರ ಜಿಲ್ಲಾ ನ್ಯಾಯಾಲಯದಲ್ಲಿ ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. “ಸಿಧು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸುವ ಮೂಲಕ ನನ್ನ ಮತ್ತು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಘಾಸಿ ಮಾಡಿದ್ದಾರೆ” ಎಂದು ವಕೀಲ ಸುಧೀರ್‌ ಕುಮಾರ್‌ ಓಜಾ ದೂರು ದಾಖಲಿಸಿದ್ದು, ಇದರ ವಿಚಾರಣೆಯನ್ನು ಆಗಸ್ಟ್‌ 24ರಂದು ನಿಗದಿ ಪಡಿಸಲಾಗಿದೆ.

ಮೋದಿ, ಅಟಲ್‌ ನಡೆ ಪ್ರಶ್ನಿಸಿದ ಸಿಧು

ಹೀಗೆ ತಮ್ಮ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ಮತ್ತು ತಾವೊಬ್ಬ ದೇಶದ್ರೋಹಿ ಎಂದು ಬಿಂಬಿಸುವ ಯತ್ನಗಳು ನಡೆಯುತ್ತಿರುವಾಗಲೇ ಸಿಧು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದರ ಜತೆಗೆ ಇದೇ ಬಿಜೆಪಿ ಪಕ್ಷದ ನಾಯಕರಿಬ್ಬರ ಈ ಹಿಂದಿನ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. “ಈ ಹಿಂದೆಯೂ ಶಾಂತಿ ಪ್ರಯತ್ನಗಳು ನಡೆದಿದ್ದವು. ವಾಜಪೇಯಿ ಸ್ನೇಹದ ಬಸ್‌ ಯಾತ್ರೆಯನ್ನು ಲಾಹೋರ್‌ಗೆ ಮಾಡಿದ್ದರು, ಮುಶರಫ್‌ಗೆ ಆಹ್ವಾನವನ್ನು ನೀಡಿದ್ದರು. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನವಾಜ್ ಶರೀಫ್‌ಗೆ ಆಹ್ವಾನ ನೀಡಿದ್ದರು, ಜತೆಗೆ ತುರ್ತಾಗಿ ಲಾಹೋರ್‌ಗೂ ಹೋಗಿ ಬಂದಿದ್ದರು,”ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿ ಚಾಟಿ ಬೀಸಿದ್ದಾರೆ.

ಜತೆಗೆ ಸಿಧು ಸಹಾಯಕ್ಕೆ ಧಾವಿಸಿರುವ ಇಮ್ರಾನ್‌ ಖಾನ್‌, ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ, ಪಂಜಾಬ್‌ ಸಚಿವರನ್ನು ಟೀಕಿಸುವ ಮೂಲಕ ಶಾಂತಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಹಾಗೂ ‘ಶಾಂತಿಯಿಲ್ಲದೆ ನಮ್ಮ ಜನರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ಹಂತದಲ್ಲಿ ನೋಡಿದರೆ ಇದು ಸತ್ಯ ಕೂಡ. ಭಾರತ ಮತ್ತು ಪಾಕಿಸ್ತಾನ ಶಾಂತಿಯಿಂದ ಇರದೆ ಎರಡೂ ದೇಶಗಳ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಆದರೆ ಶಾಂತಿ ಮಾತುಕತೆಗಳು ನಡೆಯಬೇಕಿದ್ದ ಜಾಗದಲ್ಲಿ ಇಂದು ಎರಡೂ ದೇಶಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸಗಳು ನಡೆಯುತ್ತಿವೆ. ಪರಿಣಾಮ ಇವತ್ತು ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಿಂದೆಂದಿಗಿಂತಲೂ ಹೆಚ್ಚು ಹಳಸಿದೆ. ಮತ್ತು ಅದು ಗಡಿಯಲ್ಲಿ ಹೆಚ್ಚು ಹೆಚ್ಚು ಸೈನಿಕರ ಜೀವವನ್ನು ಬಲಿ ಪಡೆಯುತ್ತಿದೆ. ಜತೆಗೆ ನವಜೋತ್‌ ಸಿಂಗ್‌ ಸಿಧು ತರಹದವರು ದೇಶದ್ರೋಹಿಗಳಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.