samachara
www.samachara.com
ಕೇರಳ ಪ್ರವಾಹ: ಪುನರ್‌ನಿರ್ಮಾಣದ ಚರ್ಚೆಗಾಗಿ ಆ.30ರಂದು ವಿಶೇಷ ಅಧಿವೇಶನ
ಸುದ್ದಿ ಸಾರ

ಕೇರಳ ಪ್ರವಾಹ: ಪುನರ್‌ನಿರ್ಮಾಣದ ಚರ್ಚೆಗಾಗಿ ಆ.30ರಂದು ವಿಶೇಷ ಅಧಿವೇಶನ

ಕೇರಳದಲ್ಲಿ ಪುನರ್‌ನಿರ್ಮಾಣದ ಬಗ್ಗೆ ಚರ್ಚೆ ನಡೆಸಲು ಆಗಸ್ಟ್‌ 30ರಂದು ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.

Team Samachara

ಕೇರಳದಲ್ಲಿ ಪ್ರವಾಹದಿಂದಾಗಿರುವ ಹಾನಿ ಹಾಗೂ ಪುನರ್‌ನಿರ್ಮಾಣದ ಬಗ್ಗೆ ಚರ್ಚೆ ನಡೆಸಲು ಆಗಸ್ಟ್‌ 30ರಂದು ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.

ತಿರುವನಂತಪುರದಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಅಲ್ಲದೆ ಪುನರ್‌ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ರಾಜ್ಯ ಜಿಎಸ್‌ಟಿ ಮೇಲೆ ಶೇಕಡ 10ರಷ್ಟು ಸೆಸ್‌ ವಿಧಿಸಲು ನಿರ್ಧರಿಸಲಾಗಿದೆ. ಪುನರ್‌ನಿರ್ಮಾಣ ಕುರಿತಂತೆ ಯೋಜನಾ ವರದಿ ಸಿದ್ಧ ಮಾಡುವಂತೆ ಸರಕಾರದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

ಪ್ರವಾಹದಿಂದ ಮುಚ್ಚಿದ್ದ ಕೊಚ್ಚಿ ವಿಮಾನ ನಿಲ್ದಾಣವನ್ನು ಆಗಸ್ಟ್‌ 26ರಂದು ಸೇವೆಗೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ. ನೆರೆ ತಗ್ಗಿರುವ ಪ್ರದೇಶಗಳಲ್ಲಿ ಪರಿಹಾರ ಹಾಗೂ ಶುಚಿತ್ವದ ಕಾರ್ಯಗಳಿಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಪ್ರವಾಹದಿಂದಾಗಿ ಹಾಳಾಗಿರುವ ರಸ್ತೆಗಳ ಬಳಕೆಗಾಗಿ ತಾತ್ಕಾಲಿಕ ದುರಸ್ತಿಗೆ ಸರಕಾರ ಮುಂದಾಗಿದೆ.

ಈ ಮಧ್ಯೆ ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಕೇರಳಕ್ಕೆ 700 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಬಗ್ಗೆ ಅಬುದಾಬಿಯ ರಾಜ ಶೇಕ್‌ ಮೊಹಮ್ಮದ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.