ರಫೇಲ್‌ ಡೀಲ್‌: ಕಾಂಗ್ರೆಸ್‌ ಪಕ್ಷಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದ ಅನಿಲ್‌ ಅಂಬಾನಿ
ಸುದ್ದಿ ಸಾರ

ರಫೇಲ್‌ ಡೀಲ್‌: ಕಾಂಗ್ರೆಸ್‌ ಪಕ್ಷಕ್ಕೆ ತಪ್ಪು ಮಾಹಿತಿ ನೀಡಲಾಗಿದೆ ಎಂದ ಅನಿಲ್‌ ಅಂಬಾನಿ

ರಫೇಲ್‌ ವಿಮಾನಗಳನ್ನೇ ಮೋದಿ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ರಾಹುಲ್‌ ಗಾಂಧಿಗೆ ಅನಿಲ್‌ ಅಂಬಾನಿ ಪತ್ರ ಬರೆದಿದ್ದು, ರಫೇಲ್‌ ಯುದ್ಧ ವಿಮಾನ ನಿರ್ಮಾಣಕ್ಕೂ ತಮಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ರಫೇಲ್‌ ಒಪ್ಪಂದದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸ್ಪಷ್ಟನೆಯ ಪತ್ರ ಬರೆದಿರುವ ರಿಲಯನ್ಸ್‌ ಗ್ರೂಪ್‌ನ ಮಾಲಿಕ ಅನಿಲ್‌ ಅಂಬಾನಿ, ‘ನಮ್ಮ ಕಾರ್ಪೊರೇಟ್‌ ಪ್ರತಿಸ್ಪರ್ಧಿಗಳು ತಮ್ಮ ದುರುದ್ದೇಶಪೂರಿತ ಆಲೋಚನೆಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ,’ ಎಂದು ದೂರಿದ್ದಾರೆ. 

ಕಳೆದ ವಾರ ಅನಿಲ್‌ ಅಂಬಾನಿ ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದರು ಎಂದು ರಿಲಯನ್ಸ್‌ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್‌ ಸೋಮವಾರ (ಆಗಸ್ಟ್‌ 20) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “ತಳಬುಡವಿಲ್ಲದ ತಪ್ಪು ಮಾಹಿತಿಯನ್ನು ನಂಬಿ ನನ್ನನ್ನು ಗುರಿಯಾಗಿಸುತ್ತಿರುವುದು ನನ್ನಲ್ಲಿ ದುಃಖ ತಂದಿದೆ. ರಿಲಯನ್ಸ್‌ ಕಂಪನಿ ರಫೇಲ್‌ ಯುದ್ಧ ವಿಮಾನಗಳನ್ನು ನಿರ್ಮಿಸುತ್ತಿಲ್ಲ” ಎಂದು ಅಂಬಾನಿ ರಾಹುಲ್‌ ಗಾಂಧಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

Also read: ‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?

ಕೇಂದ್ರ ಸರಕಾರ 2015ರ ಏಪ್ರಿಲ್‌ 10ರಂದು ಫ್ರಾನ್ಸ್‌ನಿಂದ 36 ರೆಫೇಲ್‌ ಜೆಟ್‌ ವಿಮಾನಗಳನ್ನು ಕೊಳ್ಳುವ ನಿರ್ಧಾರ ಕೈಗೊಂಡ 10 ದಿನಗಳ ಹಿಂದೆಯಷ್ಟೇ ರಿಲಯನ್ಸ್‌ ಕಂಪನಿ ರಕ್ಷಣಾ ಕ್ಷೇತ್ರದಲ್ಲಿ ತೊಡಗಿಕೊಂಡಿತ್ತು ಎಂದು ರಾಹುಲ್ ಗಾಂಧಿ ಆರೋಪಿಸುತ್ತಲೇ ಬರುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಅನಿಲ್‌ ಅಂಬಾನಿ ರಾಹುಲ್‌ ಗಾಂಧಿಯ ಆರೋಪವನ್ನು ಸಂಪೂರ್ಣ ಸುಳ್ಳು ಎಂದಿದ್ದು, ರಿಲಯನ್ಸ್ ಕಂಪನಿ 2014ರ ಡಿಸೆಂಬರ್‌ನಿಂದ 2015ರ ಜನವರಿಯ ಅವಧಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ನಿರ್ಧಾರ ಕೈಗೊಂಡಿತ್ತು ಎಂದಿದ್ದಾರೆ.

“2015ರ ಫೆಬ್ರವರಿಯಲ್ಲಿ ನಾವು ಇಂಡಿಯನ್‌ ಸ್ಟಾಕ್ಸ್‌ ಎಕ್ಸ್‌ಚೇಂಜ್‌ ಕಚೇರಿಗೆ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದೆವು. ಇದಾದ ತಿಂಗಳುಗಳ ನಂತರ ಕೇಂದ್ರ ಸರಕಾರ ಫ್ರಾನ್ಸ್‌ನಿಂದ 36 ರೆಫೇಲ್‌ ಜೆಟ್‌ ವಿಮಾನಗಳನ್ನು ಕೊಳ್ಳುವ ನಿರ್ಧಾರಕ್ಕೆ ಬಂದಿತ್ತು,” ಎಂದು ಅನಿಲ್‌ ಅಂಬಾನಿ ತಿಳಿಸಿದ್ದಾರೆ.

ಅಂಬಾನಿ ಹೇಳಿರುವ ಪ್ರಕಾರ ಭಾರತಕ್ಕೆ ಬರಲಿರುವ 36 ರಫೇಲ್‌ ಜೆಟ್‌ ವಿಮಾನಗಳು ಶೇ.100ರಷ್ಟೂ ಕೂಡ ಫ್ರಾನ್ಸ್‌ನಲ್ಲಿಯೇ ತಯಾರಾಗಿ ಭಾರತಕ್ಕೆ ಆಮದಾಗಲಿವೆ. ಕೇವಲ ಒಂದೇ ಒಂದು ರೂಪಾಯಿಯ ಕೆಲಸವನ್ನೂ ಕೂಡ ರಿಲಯನ್ಸ್‌ ಕಂಪನಿ ಈ 36 ವಿಮಾನಗಳ ನಿರ್ಮಾಣದಲ್ಲಿ ಮಾಡುವುದಿಲ್ಲ ಎಂಬ ಸ್ಪಷ್ಟೀಕರಣವನ್ನು ಅಂಬಾನಿ ನೀಡಿದ್ದಾರೆ.

ಈ 36 ರಫೇಲ್‌ ವಿಮಾನಗಳ ನಿರ್ಮಾಣದ ಯಾವ ಗುತ್ತಿಗೆಯನ್ನೂ ಕೂಡ ತಾವು ಪಡೆದಿಲ್ಲವೆಂದು ತಿಳಿಸಿರುವ ರಿಲಯನ್ಸ್ ಕಂಪನಿ ‘ವಿಮಾನಗಳ ನಿರ್ಮಾಣದಲ್ಲಿ ರಿಲಯನ್ಸ್‌ಗೆ ಯಾವ ಅನುಭವವೂ ಇಲ್ಲ ಎಂಬ ವಾದ ಅಪ್ರಸ್ತುತ ’ ಎಂದು ಅಂಬಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದಿದೆ. ಜತೆಗೆ ಈ ಗುತ್ತಿಗೆಯಿಂದ ರಿಲಯನ್ಸ್‌ ಕಂಪನಿ ಸಹಸ್ರಾರು ಕೋಟಿ ಹಣವನ್ನು ಕಬಳಿಸಲು ಹೊರಟಿದೆ ಎನ್ನುವುದು ಕೇವಲ ಕಲ್ಪನೆಯಷ್ಟೇ ಆಗಿದ್ದು, ನಮ್ಮ ವಿರುದ್ಧದ ಅಪಪ್ರಚಾರ ಎಂದು ಅಂಬಾನಿ ತಿಳಿಸಿದ್ದಾರೆ.

“ನಮ್ಮ ಕೆಲಸ ರಫ್ತು ಮಾಡುವುದಕ್ಕಷ್ಟೇ ಸೀಮಿತಗೊಂಡಿದೆ. 100ಕ್ಕೂ ಹೆಚ್ಚು ಮಧ್ಯಮ, ಚಿಕ್ಕ ಮತ್ತು ಅತಿ ಚಿಕ್ಕ ಉದ್ಯಮಗಳ ಜತೆಗೆ ಡಿಆರ್‌ಡಿಒ, ಬಿಇಎಲ್‌ನಂಥ ಸರಕಾರಿ ಸ್ವಾಮ್ಯದ ಸಂಸ್ಥೆಗಳೂ ಕೂಡ ನಮ್ಮ ಜತೆ ಸೇರಲಿವೆ. ಈ ಕಾರ್ಯವು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಜತೆಗೆ ಕಾಂಗ್ರೆಸ್‌ ನಾಯಕತ್ವದ ಯುಪಿಎ ಸರಕಾರ 2005ರ ನಂತರ ಪರಿಚಯಿಸಿದ ಆಫ್‌ಸೆಟ್‌ ಪಾಲಿಸಿಗಳನ್ನು ಕಾರ್ಯಗತಗೊಳಿಸುವಲ್ಲಿಯೂ ಕೂಡ ಸಹಕಾರಿಯಾಗಲಿದೆ,” ಎಂದು ಅಂಬಾನಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ರಾಹುಲ್‌ ಗಾಂಧಿ ಹಲವಾರು ತಿಂಗಳುಗಳಿಂದ ರಫೇಲ್‌ ಯುದ್ದ ವಿಮಾನಗಳ ಖರೀದಿ ಹಗರಣವನ್ನೇ ಅಸ್ತ್ರಗಳನ್ನಾಗಿ ಬಳಸಿಕೊಂಡು ನರೇಂದ್ರ ಮೋದಿ ನೇತೃತ್ವದ ಸರಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಮೋದಿ ಸರಕಾರದ ‘ರಫೇಲ್‌ ಹಗರಣ’ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಮೇಲೆ ತಿಂಗಳ ಅವಧಿಯ ರಾಷ್ಟ್ರಮಟ್ಟದ ಚಳುವಳಿ ನಡೆಸಲು ಕಾಂಗ್ರೆಸ್‌ ತೀರ್ಮಾನ ಕೈಗೊಂಡಿದೆ. ಆದರೆ, ಅಂಬಾನಿ ಬರೆದಿರುವ ಪತ್ರದ ವಿಚಾರಗಳನ್ನು ಬಹಿರಂಗಗೊಳಿಸುವ ಮೂಲಕ ಕಾಂಗ್ರೆಸ್‌ ಆರೋಪಗಳನ್ನು ತಣ್ಣಗಾಗಿಸಲು ರಿಲಯನ್ಸ್‌ ಕಂಪೆನಿ ಮುಂದಾಗಿದೆ.

Also read: ಮೋದಿಯೇ ಎದುರಾಳಿ, ರಫೇಲ್‌ ಪ್ರಮುಖಾಸ್ತ್ರ; 2019ರ ಚುನಾವಣೆಗೆ ಇವೇ ‘ಕೈ’ ಪಟ್ಟುಗಳು!