ಕೊಡಗಿನಲ್ಲಿ ಮುಂದುವರಿದ ಮಳೆ; ಹಲವೆಡೆ ಗುಡ್ಡ, ರಸ್ತೆ ಕುಸಿತ
ಸುದ್ದಿ ಸಾರ

ಕೊಡಗಿನಲ್ಲಿ ಮುಂದುವರಿದ ಮಳೆ; ಹಲವೆಡೆ ಗುಡ್ಡ, ರಸ್ತೆ ಕುಸಿತ

ಕೊಡಗಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಹಲವೆಡೆ ಗುಡ್ಡ ಹಾಗೂ ರಸ್ತೆ ಕುಸಿತ ಉಂಟಾಗಿದೆ. ಪರಿಹಾರ ಕಾರ್ಯಕ್ಕೂ ಕೂಡಾ ಮಳೆ ಅಡ್ಡಿಯಾಗಿದೆ.

ಕೊಡಗಿನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಭಾನುವಾರವೂ ಮಳೆ ಸುರಿದಿದೆ. ಮಡಿಕೇರಿಯಲ್ಲಿ ಬೆಳಗಿನ ಜಾವದಿಂದ ಮಳೆ ಸುರಿಯುತ್ತಿದೆ. ಹಲವೆಡೆ ಗುಡ್ಡಗಳು ಕುಸಿಯುತ್ತಲೇ ಇವೆ. ಭೂ ಕುಸಿತದಿಂದ ಹಲವು ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ಪ್ರವಾಹದಿಂದ ಹೆಚ್ಚು ತೊಂದರೆಗೆ ಒಳಗಾಗಿರುವ ಜೋಡುಪಾಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮಾದಾಪುರ – ಮಡಿಕೇರಿ ಮಾರ್ಗದಲ್ಲಿ ಹಲವೆಡೆ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿತ ಉಂಟಾಗಿದೆ. ಮಡಿಕೇರಿ ನಗರದ ಚಾಮುಂಡೇಶ್ವರಿನಗರ, ಕಾಟಗೇರಿ, ಇಂದಿರಾ ನಗರ, ಮಂಗಳೂರು ರಸ್ತೆಯ ಬಳಿಯ ಮನೆಗಳಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 200 ಮಂದಿ ಇನ್ನೂ ಸಂಕಷ್ಟದಲ್ಲಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಕೊಡಗಿನಲ್ಲಿ ಸೇನಾ ಸಿಬ್ಬಂದಿ, ಎನ್‌ಡಿಆರ್‌ಎಫ್‌, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಸಂಘಟನೆಗಳ ಯುವಕರು ತೊಡಗಿದ್ದಾರೆ. ಹಲವು ಕಡೆಗಳಲ್ಲಿ ಸಂಪರ್ಕ ಸಾಧ್ಯವಾದ ಸ್ಥಳಗಳಿಗೆ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆದಿದೆ.

ಕೊಡಗಿನಲ್ಲಿ ಮುಂದುವರಿದ ಮಳೆ; ಹಲವೆಡೆ ಗುಡ್ಡ, ರಸ್ತೆ ಕುಸಿತ

ಕೊಡಗಿನ ಪ್ರವಾಹದಿಂದ ನಿರಾಶ್ರಿರಾದವರಿಗೆ ಪರಿಹಾರದ ನೆರವು ಹರಿದುಬರುತ್ತಿದೆ. ಸರಕಾರ ಹಾಗೂ ಹಲವು ಸ್ವಯಂಸೇವಾ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳ ದಾನಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ಕೊಡಗಿಗೆ ರವಾನಿಸಲಾಗುತ್ತಿದೆ. ಸಂಕಷ್ಟದಲ್ಲಿ ಸಿಲುಕಿದ್ದವರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮಡಿಕೇರಿ ಮತ್ತು ಕುಶಾಲನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭಿಸಿದೆ. ಸೋಮವಾರಪೇಟೆಯ ಹಟ್ಟಿಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾನುವಾರವೂ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.