ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್‌ ಇನ್ನಿಲ್ಲ
ಸುದ್ದಿ ಸಾರ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್‌ ಇನ್ನಿಲ್ಲ

ಎರಡು ಬಾರಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ, ನೋಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದ ಕೋಫಿ ಅನ್ನಾನ್‌ ಶನಿವಾರ ಮೃತಪಟ್ಟಿದ್ದಾರೆ.

ವಿಶ್ವಸಂಸ್ಥೆಯ 7ನೇ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್‌ ಶನಿವಾರ ಸ್ವಿಟ್ಜರ್‌ಲ್ಯಾಂಡ್‌ನ ಬೆರ್ನ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 80 ವರ್ಷ ವಯಸ್ಸಾಗಿದ್ದ ಅವರು ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಕೋಫಿ ಅನ್ನಾನ್‌ರ ಅಧಿಕೃತ ಟ್ವಿಟ್ಟರ್‌ ಖಾತೆಯ ಮೂಲಕ ಅವರ ಸಾವಿನ ವಿಷಯ ಖಚಿತಪಡಿಸಿರುವ ಕೋಫಿ ಅನ್ನಾನ್‌ ಫೌಂಡೇಶನ್‌, “ಹಲವಾರು ದಿನಗಳ ಅನಾರೋಗ್ಯದಿಂದ ಬಳಲಿದ್ದ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನೋಬೆಲ್‌ ಶಾಂತಿ ಪ್ರಶಸ್ತಿ ವಿಜೇತ ಕೋಫಿ ಅನ್ನಾನ್‌ ಆಗಸ್ಟ್‌ 18ರಂದು ಶಾಂತಿಯುತವಾಗಿ ಜೀವ ತ್ಯಜಿಸಿದ್ದಾರೆ. ಈ ವಿಷಯವನ್ನು ತಿಳಿಸಲು ಕೋಫಿ ಅನ್ನಾನ್‌ ಪೌಂಡೇಶನ್‌ ಮತ್ತು ಅನ್ನಾನ್‌ರ ಕುಟುಂಬಸ್ಥರು ವಿ‍ಷಾಧಿಸುತ್ತೇವೆ,” ಎಂದು ಟ್ವೀಟ್‌ ಮಾಡಿದೆ.

ಮೂಲತಃ ಘಾನಾ ದೇಶದವರಾಗಿದ್ದ ಕೋಫಿ ಅನ್ನಾನ್‌, 1938ರ ಏಪ್ರಿಲ್‌ 8ರಂದು ಜನಿಸಿದ್ದರು. 1996ರಿಂದ 2006ರವರೆಗೆ ಎರಡು ಬಾರಿ ಕೋಫಿ ಅನ್ನಾನ್‌ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನೊಬೆಲ್‌ ಶಾಂತಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದ ಕೋಫಿ ಅನ್ನಾನ್‌ ಸಿರಿಯಾದಲ್ಲಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕೋಫಿ ಅನ್ನಾನ್‌ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಾದ 2000ರಲ್ಲಿ ವಿಶ್ವಸಂಸ್ಥೆ ‘ಸಹಸ್ರಮಾನದ ಅಭಿವೃದ್ಧಿ ಗುರಿ’ಗಳನ್ನು ಹಾಕಿಕೊಂಡಿತ್ತು. ಈ ಗುರಿಯ ಅನ್ವಯ 15 ವರ್ಷಗಳ ಅವಧಿಯಲ್ಲಿ ಜಗತ್ತಿನ ದೇಶಗಳು ತಮ್ಮೊಳಗಿ ಬಡತನಕ್ಕೆ ಅಂತ್ಯ ಹಾಡಬೇಕಿತ್ತು. ಇವರ ಅವಧಿಯಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಗಳ ರಚನೆಯಾಗಿತ್ತು. 2001ರಲ್ಲಿ ಕೋಫಿ ಅನ್ನಾನ್‌ರ ಸಾಧನೆಯನ್ನು ಗುರುತಿಸಿ ನೋಬೆಲ್‌ ಶಾಂತಿ ಪ್ರಶಸ್ತಿ ನೀಡಲಾಗಿತ್ತು.

ಏಡ್ಸ್‌ ರೋಗದ ವಿರುದ್ಧ ಹೊರಾಡುವ ಸಲುವಾಗಿ ಜಾಗತಿಕ ನಿಧಿಯನ್ನು ಸ್ಥಾಪಿಸುವಲ್ಲಿ ಕೋಫಿ ಅನ್ನಾನ್‌ ಮಹತ್ವದ ಪಾತ್ರ ವಹಿಸಿದ್ದರು. ಕ್ಷಯ ರೋಗ ಮತ್ತು ಮಲೇರಿಯಾಗಳನ್ನು ತಡೆಗಟ್ಟುವಲ್ಲಿಯೂ ಕೂಡ ಅನ್ನಾನ್‌ ಕೇಂದ್ರ ಸ್ಥಾನವನ್ನು ನಿಭಾಯಿಸಿದ್ದರು. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ದುಡಿದ್ದಿದ್ದ ಕೋಫಿ ಅನ್ನಾನ್‌ ಈಗ ಚಿರಶಾಂತಿಗೆ ಜಾರಿದ್ದಾರೆ.