samachara
www.samachara.com
ಮಳೆಗೆ ತತ್ತರಿಸುತ್ತಿರುವ ಕೊಡಗು; ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರವಾಹದ ಭೀತಿ
ಸುದ್ದಿ ಸಾರ

ಮಳೆಗೆ ತತ್ತರಿಸುತ್ತಿರುವ ಕೊಡಗು; ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರವಾಹದ ಭೀತಿ

ದೇವರ ನಾಡು ಕೇರಳವನ್ನು ಕಾಡುತ್ತಿರುವ ಮಹಾಮಳೆ ಈಗ ಕರ್ನಾಟಕದ ಕೊಡಗು ಜಿಲ್ಲೆಯನ್ನೂ ಕೂಡ ದ್ವೀಪವಾಗಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ ಭಾರೀ ಮಳೆಯಾಗುತ್ತಿದ್ದು ಆತಂಕವನ್ನು ಉಲ್ಭಣಿಸಿದೆ.

samachara

samachara

ಇದುವರೆಗೂ ಕೇರಳಿಗರನ್ನು ಕಾಡುತ್ತಿದ್ದ ನೆರೆ ಭೀತಿ ಈಗ ಕರ್ನಾಟಕದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನರನ್ನೂ ಕೂಡ ಆವರಿಸಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಸಂಪೂರ್ಣವಾಗಿ ರಸ್ತೆ ಸಂಪರ್ಕ ಕಡಿದುಕೊಂಡಿದ್ದು ದ್ವೀಪವಾಗಿ ಮಾರ್ಪಟ್ಟಿದೆ.

ಕೊಡಗು ಜಿಲ್ಲೆಯ ಜನ ಈಗಾಗಲೇ ಪ್ರವಾಹಕ್ಕೆ ಸಿಲುಕಿದ್ದಾರೆ. ಈಗಾಗಲೇ ಭರ್ತಿಯಾಗಿರುವ ಹಾರಂಗಿ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದ್ದು ಕೆಳ ಭಾಗದಲ್ಲಿರುವ ಕುಶಾಲನಗರ ಸೇರಿದಂತೆ ಹಲವಾರು ಗ್ರಾಮ ಮತ್ತು ಪಟ್ಟಣಗಳಲ್ಲಿ ಜನ ನೆರೆ ಹಾವಳಿಗೆ ತತ್ತರಿಸಿದ್ದಾರೆ. ಮನೆಗಳಿಗೆ ನೀರು ನುಗ್ಗಿ, ರಸ್ತೆಗಳು ಸಂಪೂರ್ಣವಾಗಿ ನೀರಿನಿಂದ ಮುಚ್ಚಿರುವ ಕಾರಣ ಸಂಚಾರ ಕಡಿತಗೊಂಡಿದ್ದರೆ, ಹಲವೆಡೆ ಗುಡ್ಡಗಳು ಕುಸಿಯುತ್ತಿರುವ ಕಾರಣ ಜನ ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ. ಆತಂಕಗೊಂಡಿರುವ ಜನ ಗುಡ್ಡಗಳನ್ನು ಏರಿ ಕುಳಿತು ನೆರವಿಗಾಗಿ ಕೈಚಾಚುತ್ತಿದ್ದಾರೆ.

ಈಗಾಗಲೇ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಅರಂಭಿಸಿದ್ದಾರೆ. ಮುಕ್ಕೋಡು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 36 ಜನರನ್ನು ರಕ್ಷಿಸಲಾಗಿದೆ. 2 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಆದರೆ ಈಗಲೂ ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜತಗೆ ಪ್ರವಾಹದ ಮಟ್ಟ ಮತ್ತಷ್ಟು ಹೆಚ್ಚಬಹುದು ಎಂಬ ಆತಂಕ ತಲೆದೋರಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಮಡಿಕೇರಿ ನಗರದ ಬಹುಭಾಗ ನೀರಿನಿಂದ ಜಲಾವೃತವಾಗಿದೆ. ಕಾವೇರಿ ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ಗೋಣಿ ಕೊಪ್ಪದಲ್ಲಿ ಹಲವಾರು ಮನೆಗಳು ಧರೆಗುರುಳಿವೆ. ಒಂದೆಡೆ ಜನ ಸೂರು ಕಳೆದುಕೊಂಡು ನಿರಾಶ್ರಿತರಾಗಿರುವುದು ಮಾತ್ರವಲ್ಲದೇ ಜಮೀನುಗಳಲ್ಲೂ ಕೂಡ ನೀರು ನಿಂತಿರುವ ಕಾರಣ ಮತ್ತಷ್ಟು ಚಿಂತಿತರಾಗಿದ್ದಾರೆ.

ಮಳೆಯಲ್ಲಿ ಈವರೆಗೆ ಸಾವಿಗೀಡಾದವರ ಬಗ್ಗೆ ಖಚಿತ ಮಾಹಿತಿಗಳು ಸಿಕ್ಕಿಲ್ಲ. ಭೂ ಕುಸಿತ ಮತ್ತು ನೆರೆಯಿಂದ ಸುಮಾರು 20 ಜನ ಕೊಚ್ಚಿ ಹೋಗಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವಷ್ಟೇ ಖಚಿತ ಮಾಹಿತಿಗಳು ದೊರೆಯಲಿವೆ.

ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡ ಮಳೆ ರೌದ್ರಾವತಾರ ತಾಳಿದೆ. ಈಗಾಗಲೇ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಕುಮಾರಧಾರ ನದಿಯಿಂದಾಗಿ ಸುಬ್ರಹ್ಮಣ್ಯದ ಹಲವು ಭಾಗಗಳು ನೀರಿನಲ್ಲಿ ಮುಳುಗಿವೆ. ಇದೀಗ ಮಳೆ ಮುಂದುವರಿಯುತ್ತಿರುವಂತೆ ಸುಳ್ಯ, ಬಂಟ್ವಾಳ ಮತ್ತು ಪುತ್ತೂರುಗಳಲ್ಲಿ ಪ್ರವಾಹ ಎದುರಾಗುವ ಭೀತಿ ಉಂಟಾಗಿದೆ. ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದ ಬಳಿ ಗುಡ್ಡ ಕುಸಿದು ಬೆಂಗಳೂರು - ಕಣ್ಣೂರು ರೈಲ್ವೇ ಮಾರ್ಗ ಮುಚ್ಚಿ ಹೋಗಿದೆ. ಇನ್ನು 2 ದಿನಗಳ ಕಾಲ ರೈಲು ಸಂಚಾರವೂ ಕೂಡ ಇರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಈಗಾಗಲೇ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲಾ ನ್ಯಾಯಾಧೀಶರ ತಂಡ ನ್ಯಾಯಮೂರ್ತಿ ಕೆ. ಸತ್ಯನಾರಾಯಣ ಆಚಾರ್‌ರ ನೇತೃತ್ವದಲ್ಲಿ ಗಂಜಿ ಕೇಂದ್ರಗಳ ಪರೀಕ್ಷೆ ನಡೆಸಿದೆ.

ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜಿಲ್ಲಾಡಳಿತದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿ ಗಂಟೆಗೊಮ್ಮೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರು ಮೂವರು ಸಚಿವರಿಗೆ ಮಡಿಕೇರಿಯಲ್ಲಿಯೇ ಬೀಡು ಬಿಟ್ಟು ಪರಿಸ್ಥಿತಿ ಬಗ್ಗೆ ನಿಗಾ ವಹಿಸುವಂತೆ ಸುಚಿಸಿದ್ದಾರೆ. ಈಗಾಗಲೇ 70 ಜನ ಸೇನಾ ಪಡೆ ಯೋಧರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಾರವಾರದಿಂದ ನೌಕಾಪಡೆಯ ಸಿಬ್ಬಂದಿಗಳೂ ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಗ್ರಾಮಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆ ತರುವ ಕೆಲಸ ಈಗ ಮತ್ತಷ್ಟು ಬಿರುಸುಗೊಂಡಿದೆ.