ಶಿವಮೊಗ್ಗದಲ್ಲಿ ಅಲೆಮಾರಿಗಳಿಗೆ ಸೂರು ಒದಗಿಸುವ ನಿರ್ಣಯದ ಸ್ವಾತಂತ್ರ್ಯೋತ್ಸವ
ಸುದ್ದಿ ಸಾರ

ಶಿವಮೊಗ್ಗದಲ್ಲಿ ಅಲೆಮಾರಿಗಳಿಗೆ ಸೂರು ಒದಗಿಸುವ ನಿರ್ಣಯದ ಸ್ವಾತಂತ್ರ್ಯೋತ್ಸವ

ಅಲೆಮಾರಿ ಸಮುದಾಯದ 35 ಕುಟುಂಬಗಳಿಗೆ ಮನೆ ನಿರ್ಮಿಸಲು ಸರಕಾರದಿಂದ ನೆರವು ಕೊಡಿಸುವ ನಿರ್ಣಯದ ಮೂಲಕ ಶಿವಮೊಗ್ಗದಲ್ಲಿ ವಿಶಿಷ್ಟವಾಗಿ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು.

ಅಲೆಮಾರಿ ಸಮುದಾಯಗಳಿಗೆ ಶಾಶ್ವತ ಸೂರು ಒದಗಿಸಲು ಹೋರಾಟ ನಡೆಸುವ ನಿರ್ಣಯ ತೆಗೆದುಕೊಳ್ಳುವ ಮೂಲಕ 72ನೇ ಸ್ವಾತಂತ್ರ್ಯೋತ್ಸವವನ್ನು ಶಿವಮೊಗ್ಗದಲ್ಲಿ ವಿಶಿಷ್ಟವಾಗಿ ಆಚರಿಸಲಾಯತು.

ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ಟೆಂಟ್‌ಗಳಲ್ಲಿ ವಾಸ ಮಾಡುತ್ತಿರುವ ಸುಮಾರು 35 ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಲು ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನ ಮಾಡಲಾಯಿತು.

ಶಿವಮೊಗ್ಗದ ನಿರಂತರ ಸಂಘಟನೆಯ ಸಹಯೋಗದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಚಳವಳಿಗಾರರು ಅಲೆಮಾರಿಗಳ ಟೆಂಟ್ ಬಳಿ ನಡೆಸಿದ ಸಭೆಯಲ್ಲಿ ಅಲೆಮಾರಿಗಳಿಗೆ ಸೂರು ಒದಗಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.

ಹಲವು ವರ್ಷಗಳಿಂದ ನಿರಂತರ ಸಂಘಟನೆಯ ನೇತೃತ್ವದಲ್ಲಿ ಅಲೆಮಾರಿಗಳಿಗೆ ಸೌಲಭ್ಯ ಕೊಡಿಸಲು ನಡೆಸಿದ ವಿವರಗಳ ಕುರಿತು, ಪಡೆದ ಸೌಲಭ್ಯಗಳ ಕುರಿತ ನೂತನ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಮಾತುಕತೆ ನಡೆಸಲಾಯಿತು. ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ಕೊಡಿಸುವ ಜಿಲ್ಲಾಧಿಕಾರಿ ಜತೆಗೆ ಚರ್ಚಿಸಲು ತೀರ್ಮಾನಿಸಲಾಯಿತು.

ರಾಜ್ಯ ಸರ್ಕಾರ ರಚನೆ ಮಾಡಿರುವ ರಾಜ್ಯ ಅಲೆಮಾರಿ ಕೋಶ ಮತ್ತು ಜಿಲ್ಲಾ ಅನುಷ್ಟಾನ ಸಮಿತಿಗೆ ಇಲ್ಲಿನ ಅಲೆಮಾರಿಗಳ ಸ್ಥಿತಿಗತಿಗಳ ಕುರಿತು ವರದಿ ನೀಡಲು ಮತ್ತು ವಾಸ್ತವ ಸ್ಥಿತಿ ಅಧ್ಯಯನಕ್ಕೆ ಸ್ಥಳ ಸಮೀಕ್ಷೆ ನಡೆಸಲು ರಾಜ್ಯ ಅಲೆಮಾರಿ ಕೋಶದ ಅಧಿಕಾರಿಗಳಿಗೆ ಮನವಿ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.

ಅಲೆಮಾರಿ ಸಮುದಾಯದ ಸುನೀತಮ್ಮ ಮಾತನಾಡಿ, “ನಮಗೆ ಮನೆ ಕಟ್ಟಿಸಿಕೊಡುವುದೇನೂ ಬೇಡ. ನಮಗೆ ಟೆಂಟ್ ನಿರ್ಮಿಸಲು ಶಾಶ್ವತವಾದ ಜಾಗ ಸಿಕ್ಕರೆ ಸಾಕು. ನಮಗೆ ಈ ಅಭದ್ರತೆಯ ಜೀವನ ಸಾಕಾಗಿದೆ” ಎಂದು ಬಂದವರಲ್ಲಿ ಮನವಿ ಮಾಡಿದ್ದು ಅಲೆಮಾರಿಗಳ ಅಸಾಹಾಯಕ ಸ್ಥಿತಿಯನ್ನು ತೆರೆದಿಟ್ಟಿತು.

“ಹಲವು ವರ್ಷಗಳಿಂದ ಅಲೆಮಾರಿಗಳ ಪರ ಹೋರಾಟ ಮಾಡಿದ್ದೇವೆ. ಕಳೆದ 20 ವರ್ಷಗಳಲ್ಲಿ ಈ ಟೆಂಟ್‌ಗಳಲ್ಲಿ ಮಕ್ಕಳ ಕಳ್ಳತನವಾಗಿದೆ. ಹಲವು ಮಕ್ಕಳು, ಬಾಣಂತಿಯರು ಮೃತಪಟ್ಟಿದ್ದಾರೆ. ಇವರಿಗೆ ನಾಗರೀಕ ಸೌಲಭ್ಯ ಸಿಗದಿರುವುದು ನಾಗರೀಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ. ಈ ಬಗ್ಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸದಿರುವುದು ವಿಷಾದನೀಯ” ಎಂದು ನಿರಂತರ ಸಂಘಟನೆಯ ಅನಿಲ್‌ ಕುಮಾರ್‌ ಹೇಳಿದರು.

“ಈ ಅಲೆಮಾರಿ ಸಮುದಾಯದ ಜನರು ಮೊದಲು ಭಿಕ್ಷೆ ಬೇಡುತ್ತಿದ್ದರು. ನಂತರದ ದಿನಗಳಲ್ಲಿ ಗುಜರಿ ಸಾಮಾನು ಮಾರುವುದು ಹಾಗೂ ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಅಲೆಮಾರಿ ಸಮುದಾಯಕ್ಕೆ ಮನೆ ನಿರ್ಮಿಸಿಕೊಡಲು ಸರಕಾರದ ಮಟ್ಟದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸುತ್ತೇವೆ” ಎಂದರು.

ರಂಗಕರ್ಮಿ ಎಂ.ವಿ. ಪ್ರತಿಭಾ ಮಾತನಾಡಿ, “ಒಂದು ಮನೆಯಲ್ಲಿ ಎರಡೆರಡು ಅಟಾಚ್ಡ್ ಬಾತ್ ರೂಂ ಹೊಂದಿರುವ ಈ ಕಾಲದಲ್ಲಿ ಇಲ್ಲಿನ ಹೆಣ್ಣು ಮಕ್ಕಳು ಶೌಚಾಲಯವಿಲ್ಲದೆ ಬದುಕುತ್ತಿದ್ದಾರೆ. ಋತುಚಕ್ರದ ಸಂದರ್ಭವನ್ನು ಇವರು ಹೇಗೆ ನಿಭಾಯಿಸುತ್ತಾರೆ. ಬಸುರಿ, ಬಾಣಂತಿಯರು ಹೇಗಿರುತ್ತಾರೆಂದು ಯೋಚಿಸುವುದೂ ಕಷ್ಟ. ಇವರಿಗೆ ಅಗತ್ಯ ಸೌಲಭ್ಯ ಸಿಗುವವರೆಗೂ ಸಂಘಟನೆಯ ಪ್ರಯತ್ನ ಮುಂದುವರಿಸೋಣ” ಎಂದರು.

“ಅಲೆಮಾರಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಸಂಘಟನಾತ್ಮಕ ಹೋರಾಟ ಮಾಡಿ ಈ ಅಲೆಮಾರಿ ಜನಾಂಗದವರಿಗೆ ಮನೆ ಮತ್ತಿತರ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಬೆಕಿದೆ. ಸರ್ಕಾರ ಪ್ರತಿವರ್ಷ ಹಣ ತೆಗೆದಿರಿಸಿದರೂ ಕ್ರಿಯಾಯೋಜನೆ ಮಾಡಿರಲಿಲ್ಲ. ಇತ್ತೀಚೆಗೆ ಅಲೆಮಾರಿ ಕೋಶದ ಮೂಲಕ ಸೌಲಭ್ಯ ಸಿಗುತ್ತಿವೆ. ಸರ್ಕಾರಗಳೂ ಸ್ಪಂದಿಸಿವೆ. ಆದರೆ ಅಧಿಕಾರಿಗಳ ಮೇಲೆ ಒತ್ತಡ ತರಬೇಕಿದೆ. ಈ ಮೂಲಕ ಅಲೆಮಾರಿಗಳು ಉತ್ತಮ ಬದುಕು ಕಾಣಲು ನಾಗರಿಕ ಸಮಾಜ ಸಹಕರಿಸಬೇಕಿದೆ” ಎಂದು ಪತ್ರಕರ್ತ ಹರ್ಷಕುಮಾರ್ ಕುಗ್ವೆ ಹೇಳಿದರು.