samachara
www.samachara.com
ಮಹಾಮಳೆಗೆ ಕೇರಳದಲ್ಲಿ  ಮತ್ತೆ ನೆರೆ; ಕರಾವಳಿ, ಮಲೆನಾಡಿನಲ್ಲೂ ವರುಣನ ಅಬ್ಬರ
ಸುದ್ದಿ ಸಾರ

ಮಹಾಮಳೆಗೆ ಕೇರಳದಲ್ಲಿ ಮತ್ತೆ ನೆರೆ; ಕರಾವಳಿ, ಮಲೆನಾಡಿನಲ್ಲೂ ವರುಣನ ಅಬ್ಬರ

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೇರಳದ 12 ಜಿಲ್ಲೆಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಇತ್ತ ಕರ್ನಾಟಕದಲ್ಲೂ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

Team Samachara

ಕೇರಳದಲ್ಲಿ ಎಡೆಬಿಡದೇ ಸುರಿದು ಕೊಂಚ ಬಿಡುವು ಕೊಟ್ಟಿದ್ದ ಮಳೆ ಈಗ ಮತ್ತೆ ಅಬ್ಬರಿಸತೊಡಗಿದೆ. ಕೇರಳದಲ್ಲಿ ಮಳೆಯಿಂದಾಗಿ ಸತ್ತವರ ಸಂಖ್ಯೆ 47ಕ್ಕೆ ಏರಿಕೆಯಾಗಿದ್ದು, ರಾಜ್ಯದ 12 ಜಿಲ್ಲೆಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಶತಮಾನಗಳಷ್ಟು ಹಳೆಯದಾದ ಮುಲ್ಲ ಪೆರಿಯಾರ್‌ ಅಣೆಕಟ್ಟೆಯಲ್ಲಿ ಬರೋಬ್ಬರಿ 142 ಅಡಿಗಳಷ್ಟು ನೀರು ತುಂಬಿದ್ದು, ಈಗಾಗಲೇ ಡ್ಯಾಂನಿಂದ 4,489 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಹೆಚ್ಚಿನ ಮಳೆಯಿಂದಾಗಿ ರಾಜ್ಯದ ಹಲವಾರು ಅಣೆಕಟ್ಟೆಗಳು ತುಂಬಿದ್ದು, ಎಲ್ಲಾ ಗೇಟ್‌ಗಳನ್ನು ತೆರೆದು ನೀರು ಹರಿಸಲಾಗುತ್ತಿದೆ. ಪಂಪಾ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಾಗಿದೆ. ಭಕ್ತರು ಅಯ್ಯಪ್ಪ ದೇವಸ್ಥಾನದತ್ತ ಬರದಂತೆ ದೇವಸ್ಥಾನದ ಮಂಡಳಿ ಎಚ್ಚರಿಕೆ ನೀಡಿದೆ.

ವಯನಾಡು, ಕೋಜಿಕ್ಕೋಡು, ಇಡುಕ್ಕಿ, ಕಾಸರಗೋಡು, ಮಲ್ಲಂಪುರಂ, ಎರ್ನಾಕುಳಂ, ಪಾಲಕ್ಕಾಡ್‌, ಅಲಪ್ಪುಳ, ಕೊಟ್ಟಾಯಂ, ಪಟ್ಟಣಂತಿಟ್ಟ ಹಾಗೂ ತ್ರಿಶೂರ್‌ ಜಿಲ್ಲೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಕಳೆದ ಹಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕೊಚ್ಚಿ ವಿಮಾನ ನಿಲ್ದಾಣವನ್ನು ಶನಿವಾರದವರೆಗೂ ಮುಚ್ಚಲು ತೀರ್ಮಾನಿಸಲಾಗಿದೆ. ನಿಲ್ದಾಣದಲ್ಲಿದ್ದ ವಿಮಾನಗಳನ್ನೆಲ್ಲಾ ರಾಜ್ಯದ ಇನ್ನಿತರ ವಿಮಾನ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗಿದೆ.

ಇತ್ತ ಕರ್ನಾಟಕದ ಕರಾವಳಿ ಮತ್ತು ಮಲೆನಾಡುಗಳ ಭಾಗದಲ್ಲಿ ಮಳೆ ಮತ್ತೆ ಅಬ್ಬರಿಸತೊಡಗಿದೆ. ರಾಜ್ಯದ ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕುಕ್ಕೆಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಮಳೆ ನೀರಿಯಿಂದ ಜಲಾವೃತಗೊಂಡಿದೆ. ಮಳೆಯಿಂದಾಗಿ ಗುಂಡ್ಯ-ಕುಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಡಿಕೇರಿಯಲ್ಲಿ ಧಾರಾಕಾರ ಮಳೆಗೆ ಲಕ್ಷ್ಮಣತೀರ್ಥ ಸೇರಿದಂತೆ ಸಣ್ಣ ಪುಟ್ಟ ನದಿಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಬೀಳುತ್ತಿರುವ ಕಾರಣ ಭಾಗಮಂಡಲ ಜಲಾವೃತವಾಗಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್‌.ಆರ್‌.ಪುರ, ಕಳಸಾ, ಬಾಳೆ ಹೊನ್ನೂರು ಮುಂತಾದ ಸ್ಥಳಗಳಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಗುಡ್ಡ ಕುಸಿದ ಪರಿಣಾಮವಾಗಿ ಸಂಚಾರ ಸ್ತಬ್ಧವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ವ್ಯಾಪಕ ಮಳೆಯಿಂದಾಗಿ ಕೆಆರ್‌ಎಸ್‌ ಅಣೆಕಟ್ಟೆಗೆ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, 1.08 ಲಕ್ಷ ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ. 27 ವರ್ಷದ ನಂತರ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ನದಿ ದಂಡೆಯ ಕೃಷಿ ಭೂಮಿ ಹಾಗೂ ಕೆಲ ದೇವಾಲಯಗಳು ಜಲಾವೃತಗೊಂಡಿವೆ.